‘ಇವಿಎಂಗಳ ವಿಶ್ವಾಸಾರ್ಹತೆ ಕುರಿತು ಚರ್ಚೆಗಾಗಿ ಶೀಘ್ರದಲ್ಲೇ ಸರ್ವಪಕ್ಷಗಳ ಸಭೆ ಕರೆಯಲಾಗುವುದು ಎಂದು ಚುನಾವಣಾ ಆಯೋಗ ಭರವಸೆ ನೀಡಿದೆ.

ನವದೆಹಲಿ(ಏ.10): ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚುವ ಮೂಲಕ ಬಿಜೆಪಿ ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್, ಬಿಎಸ್‌ಪಿ, ಡಿಎಂಕೆ, ತೃಣಮೂಲ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಸೇರಿ ಒಟ್ಟು 16 ಪಕ್ಷಗಳು ವಿದ್ಯುನ್ಮಾನ ಮತಯಂತ್ರವನ್ನು ರದ್ದುಪಡಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿವೆ.

ಈ ಕುರಿತು ಚುನಾವಣಾ ಆಯೋಗವನ್ನು ಭೇಟಿ ಮಾಡಿದ ಕಾಂಗ್ರೆಸ್ ಸೇರಿದಂತೆ 16 ಪಕ್ಷಗಳು, ‘ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಬಹುದಾಗಿದ್ದು, ವಿದ್ಯುನ್ಮಾನ ಮತಯಂತ್ರಗಳ ಮೇಲೆ ಜನ ಸಾಮಾನ್ಯರು ವಿಶ್ವಾಸ ಕಳೆದುಕೊಂಡಿದ್ದಾರೆ. ಹಾಗಾಗಿ, ನ್ಯಾಯಸಮ್ಮತ ಚುನಾವಣೆಗಾಗಿ ಮೊದಲಿನ ಪೇಪರ್ ಬ್ಯಾಲೆಟ್ ವ್ಯವಸ್ಥೆ ಜಾರಿಗೆ ತರಬೇಕು,’ ಮನವಿ ಸಲ್ಲಿಸಿವೆ.

‘ಇವಿಎಂಗಳ ವಿಶ್ವಾಸಾರ್ಹತೆ ಕುರಿತು ಚರ್ಚೆಗಾಗಿ ಶೀಘ್ರದಲ್ಲೇ ಸರ್ವಪಕ್ಷಗಳ ಸಭೆ ಕರೆಯಲಾಗುವುದು ಎಂದು ಚುನಾವಣಾ ಆಯೋಗ ಭರವಸೆ ನೀಡಿದೆ,’ ಎಂದು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮತ್ತು ಡಿಎಂಕೆ ನಾಯಕ ಶಿವ ಸುದ್ದಿಗಾರರಿಗೆ ತಿಳಿಸಿದ್ದಾರೆ.