ಲಕ್ನೋ[ಜೂ.16]: ಉತ್ತರ ಪ್ರದೇಶದ ಶಾಹಜಹಾಂಪುರದಲ್ಲಿ 15 ವರ್ಷದ ಬಾಲಕಿಯೊಬ್ಬಳು ತನ್ನ ತಂದೆ ಹಾಗೂ ಅಣ್ಣ, ತನ್ನನ್ನು ಕೊಲ್ಲಲು ಯತ್ನಿಸಿದ್ದಾರೆಂಬ ಆರೋಪ ಮಾಡಿದ್ದಾಳೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಬಾಲಕಿ 'ನನಗೆ ಈಗಲೇ ಮದುವೆಯಾಗಲು ಇಷ್ಟವಿರಲಿಲ್ಲ, ಮುಂದೆ ಓದಬೇಕೆಂದಿದ್ದೆ. ಇದೇ ವಿಚಾರವಾಗಿ ಕೋಪಗೊಂಡ ತಂದೆ ಹಾಗೂ ಅಣ್ಣ ನನ್ನನ್ನು ಕೊಲ್ಲಲು ಯತ್ನಿಸಿದ್ದಾರೆ. ನನ್ನ ತಂದೆ ನನ್ನನ್ನು ನಿರ್ಜನ ಪ್ರದೇಶದಲ್ಲಿದ್ದ ನಾಲೆಯೊಂದರ ಬಳಿ ಕರೆದೊಯ್ದಿದ್ದರು. ಈ ವೇಳೆ ಅಣ್ಣ ಕುಡಾ ಬಂದಿದ್ದ. ನಾಲೆ ಬಳಿ ತಲುಪುತ್ತಿದ್ದಂತೆ ಅಣ್ಣ ನನ್ನ ಕತ್ತಿಗೆ ಬಟ್ಟೆ ಸುತ್ತಿ ಓಡಿ ಹೋಗದಂತೆ ತಡೆದಿದ್ದ. ಅತ್ತ ತಂದೆ ಹಿಂಬದಿಯಿಂದ ಚಾಕುವಿನಿಂದ ಇರಿಯಲಾರಂಭಿಸಿದ್ದರು. ಈ ವೇಳೆ ನಾನು ಅಪ್ಪಾ... ನೋವಾಗುತ್ತಿದೆ, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡೆ. ಆದರೂ ಅವರು ನನ್ನ ಮಾತು ಕೇಳಲಿಲ್ಲ’ ಎಂದಿದ್ದಾಳೆ.

ಇಷ್ಟೇ ಅಲ್ಲದೇ ’ಬಳಿಕ ನನ್ನನ್ನು ನಾಲೆಗೆ ದೂಡಿ ಹಾಕಿದ ಅಪ್ಪ ಮತ್ತು ಅಣ್ಣ ಅಲ್ಲಿಂದ ತೆರಳಿದ್ದರು. ಇದಾದ ಕೆಲ ಸಮಯದ ಬಳಿಕ ನಾನು ಸತ್ತಿದ್ದೇನೋ ಬದುಕಿದ್ದೇನೋ ಎಂದು ನೋಡಲು ಮರಳಿ ಬಂದಿದ್ದರು. ಆದರೆ ನಾನು ಅಷ್ಟರಲ್ಲಾಗಲೇ ಈಜಿಕೊಂಡು ಮುಂದೆ ಬಂದಿದ್ದೆ. ಹೀಗಾಗಿ ಅಣ್ಣ ಹಾಗೂ ಅಪ್ಪನ ಕಣ್ಣಿಗೆ ಬೀಳಲಿಲ್ಲ’ ಎಂದಿದ್ದಾಳೆ. 

ಘಟನೆಯನ್ನು ಪುಷ್ಟೀಕರಿಸಿರುವ ಬಾಲಕಿಯ ಬಾವ 'ನಾನು ಈಕೆಯ ಅಕ್ಕನ ಗಂಡ. ಆಕೆ ಕಳೆದ ಎರಡು ತಿಂಗಳಿನಿಂದ ನಮ್ಮೊಂದಿಗೇ ಇದ್ದಾಳೆ. ಆಕೆ ಮುಂದೆ ಓದುವುದು ಅಕೆಯ ಅಪ್ಪ- ಅಮ್ಮನಿಗೆ ಇಷ್ಟವಿಲ್ಲ, ಒತ್ತಾಯಪೂರ್ವಕವಾಗಿ ಮದುವೆ ಮಾಡಲಿಚ್ಛಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಅಪ್ಪ ಅಮ್ಮ ಬಂದು ಆಕೆಯನ್ನು ಕರೆದೊಯ್ದಿದ್ದರು. ಇಂದು ಯಾರೋ ಕರೆ ಮಾಡಿ ಬಾಲಕಿ ನಾಲೆ ಬಳಿ ಸಿಕ್ಕಿರುವುದಾಗಿ ತಿಳಿಸಿದ್ದಾರೆ' ಎಂದಿದ್ದಾರೆ

ಪ್ರಕರಣದ ಕುರಿತಾಗಿ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಬಾಲಕಿ ಈಗಾಗಲೇ ತನ್ನ ಅಪ್ಪ ಹಾಗೂ ಅಣ್ಣನ ವಿರುದ್ಧ ದೂರು ನೀಡಿದ್ದಾಳೆ. ಹೀಗಾಗಿ ತನಿಖೆ ಆರಂಭಿಸಿದ್ದೇವೆ' ಎಂದಿದ್ದಾರೆ.