Asianet Suvarna News Asianet Suvarna News

15 ಹಿರಿಯರಿಗೆ ಸಚಿವ ಸ್ಥಾನ : ಯಾರಿದ್ದಾರೆ ಲಿಸ್ಟ್ ನಲ್ಲಿ?

ನೂತನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಂಪುಟ ರಚನೆಯ ಕಸರತ್ತನ್ನು ಕೈಗೆತ್ತಿಕೊಳ್ಳಲಿದ್ದು 15 ಹಿರಿಯರು ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. 

15 Seniors Likely To Join Karnataka CM BS Yediyurappa Cabinet
Author
Bengaluru, First Published Jul 30, 2019, 7:19 AM IST

ವಿಜಯ್‌ ಮಲಗಿಹಾಳ

ಬೆಂಗಳೂರು [ಜು.30]:  ಬಹುಮತದ ಮೊದಲ ಅಗ್ನಿಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿರುವ ನೂತನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಂಪುಟ ರಚನೆಯ ಕಸರತ್ತನ್ನು ಕೈಗೆತ್ತಿಕೊಳ್ಳಲಿದ್ದು, ಬಹುತೇಕ ಮುಂದಿನ ವಾರದಲ್ಲಿ ಮೊದಲ ಹಂತದ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ.

ಮುಖ್ಯಮಂತ್ರಿಯಾಗಿ ಏಕಾಂಗಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಯಡಿಯೂರಪ್ಪ ಅವರು ಬುಧವಾರದ ನಂತರ ದೆಹಲಿಗೆ ತೆರಳುವ ನಿರೀಕ್ಷೆಯಿದ್ದು, ಅಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಿದ ನಂತರ ಸಂಪುಟದಲ್ಲಿ ಯಾರಾರ‍ಯರಿಗೆ ಅವಕಾಶ ಲಭಿಸಲಿದೆ ಎಂಬುದರ ಸ್ಪಷ್ಟಚಿತ್ರಣ ಹೊರಬೀಳಲಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅನರ್ಹಗೊಂಡ ಶಾಸಕರ ಪೈಕಿ ಎಷ್ಟುಮಂದಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಯಾವಾಗ ನೀಡಬೇಕು ಎಂಬುದು ಮೊದಲು ಇತ್ಯರ್ಥಗೊಳ್ಳಬೇಕಾದ ಸಂಗತಿ. ಸುಪ್ರೀಂಕೋರ್ಟ್‌ನಲ್ಲಿ ಶಾಸಕರ ಅನರ್ಹತೆ ಕುರಿತ ವಿಧಾನಸಭೆಯ ಸ್ಪೀಕರ್‌ ಅವರ ಆದೇಶಕ್ಕೆ ತಡೆಯಾಜ್ಞೆ ಸಿಗುತ್ತದೆಯೇ? ಸಿಕ್ಕಲ್ಲಿ ತಕ್ಷಣ ಸಚಿವ ಸ್ಥಾನ ನೀಡಬೇಕೆ ಅಥವಾ ಇಡೀ ಪ್ರಕರಣ ಸಂಪೂರ್ಣ ಇತ್ಯರ್ಥಗೊಳ್ಳಲಿ ಎಂದು ಕಾಯಬೇಕೆ ಎಂಬುದರ ಬಗ್ಗೆ ಯಡಿಯೂರಪ್ಪ ಅವರು ಕಾನೂನು ತಜ್ಞರ ಜತೆ ಚರ್ಚಿಸಿ ನಂತರ ವರಿಷ್ಠರ ಗಮನಕ್ಕೂ ತರಲು ನಿರ್ಧರಿಸಿದ್ದಾರೆ.

ಸದ್ಯದ ಮಾಹಿತಿ ಅನುಸಾರ, ಅನರ್ಹಗೊಂಡ ಶಾಸಕರಿಗಾಗಿ 10ರಿಂದ 12 ಸಚಿವ ಸ್ಥಾನಗಳನ್ನು ಖಾಲಿ ಉಳಿಸಿಕೊಂಡು ಸರ್ಕಾರದ ಆಡಳಿತ ಸುಗಮವಾಗಿ ಸಾಗಲು ಅನುಕೂಲವಾಗುವಂತೆ ಮೊದಲ ಹಂತದಲ್ಲಿ ಪಕ್ಷದ 10ರಿಂದ 15 ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಬಿಜೆಪಿಯಲ್ಲಿ ಗಂಭೀರವಾಗಿ ಚರ್ಚೆ ನಡೆದಿದೆ. ಈ ಬಗ್ಗೆ ಯಡಿಯೂರಪ್ಪ ಅವರು ದೆಹಲಿಗೆ ತೆರಳುವ ಮೊದಲು ಅನರ್ಹಗೊಂಡ ಶಾಸಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ ವಿವರಿಸುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.

ತಮ್ಮ ಸಂಪುಟದಲ್ಲಿ ಯಾಯ್ಯಾರಿಗೆ ಅವಕಾಶ ನೀಡಬಹುದು ಎಂಬುದರ ಬಗ್ಗೆ ಯಡಿಯೂರಪ್ಪ ಅವರು ಒಂದು ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅಮಿತ್‌ ಶಾ ಅವರ ಮುಂದಿಡಲಿದ್ದು, ಅದರಲ್ಲಿ ಕೆಲವು ಬದಲಾವಣೆಗಳಾಗುವ ಸಂಭವವೂ ಇದೆ. ಯಡಿಯೂರಪ್ಪ ಅವರು ಬಯಸಿದಂತೆ ಎಲ್ಲರಿಗೂ ಸಚಿವ ಸ್ಥಾನ ಸಿಗಲಿಕ್ಕಿಲ್ಲ. ಹಾಗಂತ ಪಕ್ಷದ ಹೈಕಮಾಂಡ್‌ ಕೂಡ ಎಲ್ಲವನ್ನೂ ದೆಹಲಿಯಿಂದಲೇ ನಿರ್ಧರಿಸುವುದಿಲ್ಲ. ಯಡಿಯೂರಪ್ಪ ಪಟ್ಟಿಮತ್ತು ಅಮಿತ್‌ ಶಾ ಪಟ್ಟಿಗಳೆರಡನ್ನೂ ಮಿಶ್ರಣಗೊಳಿಸಿ ಸರ್ಕಾರದ ಉತ್ತಮ ಆಡಳಿತಕ್ಕೆ ಪೂರಕವಾಗಿ ಅಂತಿಮ ಪಟ್ಟಿಸಿದ್ಧಗೊಳಿಸಬಹುದು. ಜಾತಿವಾರು ಮತ್ತು ಪ್ರದೇಶವಾರು ಪ್ರಾತಿನಿಧ್ಯವನ್ನೂ ತಕ್ಕಮಟ್ಟಿಗೆ ಸಮತೋಲನಗೊಳಿಸುವ ಪ್ರಯತ್ನ ನಡೆಸಲಾಗುವುದು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರೂ ಯಡಿಯೂರಪ್ಪ ಅವರ ಸಂಪುಟ ಸೇರಲಿದ್ದಾರೆ. ಅವರೊಂದಿಗೆ ಹಿರಿಯ ಶಾಸಕರಾದ ಗೋವಿಂದ ಕಾರಜೋಳ, ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ್‌, ಬಿ.ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ಅರವಿಂದ್‌ ಲಿಂಬಾವಳಿ, ಸಿ.ಟಿ.ರವಿ, ಉಮೇಶ್‌ ಕತ್ತಿ, ರಾಜುಗೌಡ, ಎಸ್‌.ಸುರೇಶ್‌ಕುಮಾರ್‌, ವಿ.ಸೋಮಣ್ಣ, ಶಶಿಕಲಾ ಜೊಲ್ಲೆ, ಪೂರ್ಣಿಮಾ ಶ್ರೀನಿವಾಸ್‌, ಪ್ರಭು ಚವ್ಹಾಣ್‌, ಸುನೀಲ್‌ಕುಮಾರ್‌, ಬಸನಗೌಡ ಪಾಟೀಲ ಯತ್ನಾಳ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ದತ್ತಾತ್ರೇಯ ಪಾಟೀಲ ರೇವೂರು, ಸುಭಾಷ್‌ ಗುತ್ತೇದಾರ್‌, ತಿಪ್ಪಾರೆಡ್ಡಿ, ಹಾಲಪ್ಪ ಆಚಾರ್‌, ಎಸ್‌.ಆರ್‌.ವಿಶ್ವನಾಥ್‌ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿವೆ.

ಜೊತೆಗೆ ಬಿಜೆಪಿ ಬೆಂಬಲವಾಗಿ ನಿಂತಿರುವ ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಅವರಿಗೆ ಮೊದಲ ಹಂತದಲ್ಲೇ ಸಚಿವ ಸ್ಥಾನ ಸಿಗುವುದು ನಿಶ್ಚಿತವಾಗಿದೆ. 

ಡಿಸಿಎಂ ಹುದ್ದೆ ಅನುಮಾನ:  ಈ ಬಾರಿಯೂ ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಸಾಧ್ಯತೆ ಕಡಿಮೆಯಿದೆ.

ಹಿಂದೆ 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಯಡಿಯೂರಪ್ಪ ಅವರ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಇರಲಿಲ್ಲ. ಮುಂದೆ ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿಯಾದ ಬಳಿಕ ಹೈಕಮಾಂಡ್‌ ಕೆ.ಎಸ್‌.ಈಶ್ವರಪ್ಪ ಹಾಗೂ ಆರ್‌.ಅಶೋಕ್‌ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ನೇಮಿಸಲಾಗಿತ್ತು. ಆದರೆ, ಈಗಲೂ ಯಡಿಯೂರಪ್ಪ ಅವರು ತಮ್ಮ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆಗೆ ಆಸಕ್ತಿ ತೋರಿಲ್ಲ. ಪಕ್ಷದ ವರಿಷ್ಠರು ಬಲವಂತ ಮಾಡಿದಲ್ಲಿ ಮಾತ್ರ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬಹುದು ಎಂದು ಮೂಲಗಳು ತಿಳಿಸಿವೆ.

ಮೇಲಾಗಿ, ಈ ಬಾರಿ ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟವರ ಸಂಖ್ಯೆಯೂ ಹೆಚ್ಚೇ ಇದೆ. ಹೀಗಾಗಿ ಒಬ್ಬರು ಅಥವಾ ಇಬ್ಬರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿದರೆ ಅದು ಮುಂದೆ ತಿಕ್ಕಾಟಕ್ಕೆ ಕಾರಣವಾಗಬಹುದು ಎಂಬ ಆತಂಕವೂ ಪಕ್ಷದಲ್ಲಿದೆ.

ಸಂಭಾವ್ಯ ಸಚಿವರು

ಅನರ್ಹಗೊಂಡ ಶಾಸಕರ ಪೈಕಿ ಎಷ್ಟುಮಂದಿಗೆ ಸಚಿವ ಸ್ಥಾನ ಎಂಬುದು ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಓರ್ವ ಪಕ್ಷೇತರ ಸೇರಿದಂತೆ ಬಿಜೆಪಿಯಿಂದ ಸಚಿವ ಸ್ಥಾನ ಅಲಂಕರಿಸಬಹುದಾದ ಸಂಭಾವ್ಯರ ಪಟ್ಟಿಹೀಗಿದೆ:

ಜಗದೀಶ್‌ ಶೆಟ್ಟರ್‌ - ಧಾರವಾಡ

ಗೋವಿಂದ ಕಾರಜೋಳ - ಬಾಗಲಕೋಟೆ

ಬಸವರಾಜ ಬೊಮ್ಮಾಯಿ - ಹಾವೇರಿ

ಕೆ.ಎಸ್‌.ಈಶ್ವರಪ್ಪ - ಶಿವಮೊಗ್ಗ

ಜೆ.ಸಿ.ಮಾಧುಸ್ವಾಮಿ - ತುಮಕೂರು

ಬಿ.ಶ್ರೀರಾಮುಲು - ಬಳ್ಳಾರಿ/ಚಿತ್ರದುಗ

ರಾಜುಗೌಡ - ಯಾದಗಿರಿ

ಸಿ.ಟಿ.ರವಿ - ಚಿಕ್ಕಮಗಳೂರು

ಆರ್‌.ಅಶೋಕ್‌/ಅರವಿಂದ್‌ ಲಿಂಬಾವಳಿ/ಎಸ್‌.ಸುರೇಶ್‌ ಕುಮಾರ್‌/ವಿ.ಸೋಮಣ್ಣ/ಡಾ.ಸಿ.ಎನ್‌.ಅಶ್ವತ್ಥನಾರಾಯಣ/ಎಸ್‌.ಆರ್‌.ವಿಶ್ವನಾಥ್‌ - ಬೆಂಗಳೂರು

ಪ್ರಭು ಚವ್ಹಾಣ್‌ - ಬೀದರ್‌

ಉಮೇಶ್‌ ಕತ್ತಿ/ಶಶಿಕಲಾ ಜೊಲ್ಲೆ - ಬೆಳಗಾವಿ

ವಿ.ಸುನೀಲ್‌ಕುಮಾರ್‌/ ಕೋಟ ಶ್ರೀನಿವಾಸ ಪೂಜಾರಿ - ಉಡುಪಿ

ಎಸ್‌.ಅಂಗಾರ - ದಕ್ಷಿಣ ಕನ್ನಡ

ದತ್ತಾತ್ರೇಯ ಪಾಟೀಲ ರೇವೂರು/ಸುಭಾಷ್‌ ಗುತ್ತೇದಾರ್‌ - ಕಲುಬುರ್ಗಿ

ಬಸನಗೌಡ ಪಾಟೀಲ ಯತ್ನಾಳ - ವಿಜಯಪುರ

ಪಕ್ಷೇತರ ಶಾಸಕ ಎಚ್‌.ನಾಗೇಶ್‌ - ಕೋಲಾರ

ತಿಪ್ಪಾರೆಡ್ಡಿ/ಪೂರ್ಣಿಮಾ ಶ್ರೀನಿವಾಸ್‌ - ಚಿತ್ರದುರ್ಗ

ಹಾಲಪ್ಪ ಆಚಾರ್‌ - ಕೊಪ್ಪಳ

Follow Us:
Download App:
  • android
  • ios