ಮುಂಗಾರು ತಡವಾಗಿ ಆಗಮಿಸಿದರೂ ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನವದೆಹಲಿ [ಸೆ.02]: ಈ ಬಾರಿ ಮುಂಗಾರು ತಡವಾಗಿ ಆಗಮಿಸಿದರೂ ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಗಸ್ಟ್ ತಿಂಗಳಿನಲ್ಲಿ ದೇಶದ ಅರ್ಧ ಭಾಗದಲ್ಲಿ ವಾಡಿಕೆಗಿಂತ ಶೇ.15 ರಷ್ಟುಹೆಚ್ಚು ಮಳೆಯಾಗಿದ್ದು, ಸತತ ಎರಡನೇ ತಿಂಗಳು ಹೆಚ್ಚಿನ ಮಳೆಯಾಗಿದೆ.
ಜೂನ್ ತಿಂಗಳಿನಲ್ಲಿ ದೀರ್ಘಾವಧಿ ಸರಾಸರಿ ಶೇ. 87 ರಷ್ಟುಮಳೆ ಕೊರತೆಯುಂಟಾಗಿದ್ದು, ಜುಲೈನಲ್ಲಿ ದೀರ್ಘಾವಧಿ ಸರಾಸರಿ ಶೇ.109 ರಷ್ಟುಮಳೆ ಹೆಚ್ಚಳವಾಗಿದೆ. ಆಗಸ್ಟ್ ತಿಂಗಳಿನಲ್ಲಿ ದಾಖಲೆ ಮಳೆ ಸುರಿದಿದ್ದು, ದೀರ್ಘಾವಧಿ ಸರಾಸರಿ ಶೇ. 115 ರಷ್ಟುಹೆಚ್ಚು ಮಳೆಯಾಗಿದೆ. ಸಾಧಾರಣವಾಗಿ ಆಗಸ್ಟ್‌ನಲ್ಲಿ ದೀರ್ಘಾವಧಿ ಸರಾಸರಿ ಶೇ.89 ರಷ್ಟುಮಳೆಯಾಗುತ್ತಿತ್ತು. ಇದೇ ವೇಳೆ ಜೂನ್ ನಿಂದ ಆಗಸ್ಟ್ ವರೆಗೆ ಯಾವುದೇ ಮಳೆ ಕೊರತೆಯಾಗಿಲ್ಲ . ಸೆಪ್ಟೆಂಬರ್‌ನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೇಶದ ಶೇ.26ರಷ್ಟುಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಶೇ.22 ರಷ್ಟುಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಶೇ.23 ರಷ್ಟುಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಶೇ.29 ರಷ್ಟುಭಾಗದಲ್ಲಿ ಮಳೆ ಕೊರತೆ ಉಂಟಾಗಿದೆ. ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಶೇ.56 ರಷ್ಟುಹೆಚ್ಚಿನ ಮಳೆಯಾಗಿದೆ. ಪೆಸಿಫಿಕ್ ಸಾಗರದಲ್ಲಿ ಎಲ್-ನೋ ಪರಿಣಾಮದಿಂದಾಗಿ ಮುಂಗಾರು ತಹಬದಿಗೆ ಬಂದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
