ಮಂಗಳೂರು [ಜು.15] : ಉದ್ಯೋಗ ವಂಚನೆಗೊಳಗಾಗಿ ಕುವೈಟ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಭಾರತೀಯ ಸಂತ್ರಸ್ತ ಕಾರ್ಮಿಕರ ಪೈಕಿ ಇಬ್ಬರು ಶನಿವಾರ ತಾಯ್ನಾಡಿಗೆ ಮರಳಿದ್ದಾರೆ. ಬಾಕಿಯುಳಿದವರಲ್ಲಿ 15 ಮಂದಿಯ 2ನೇ ತಂಡ ಜು.15ರ ಸೋಮವಾರ ಕುವೈಟ್‌ನಿಂದ ಭಾರತಕ್ಕೆ ಹೊರಡಲಿದೆ.

ಪ್ರಥಮ ಹಂತದಲ್ಲಿ ಸ್ವದೇಶಕ್ಕೆ ಆಗಮಿಸಿದ ಇಬ್ಬರ ವೀಸಾ ರದ್ದುಗೊಂಡಿಲ್ಲ. ಆದರೆ ರಜೆ ಪಡೆದುಕೊಂಡು ಮಂಜೇಶ್ವರ ಬಡಾಜೆ ನಿವಾಸಿ ಅಭಿಷೇಕ್‌ ಮತ್ತು ಉತ್ತರಪ್ರದೇಶದ ಪಂಕಜ್‌ ತಾಯ್ನೆಲಕ್ಕೆ ವಾಪಸ್‌ ಆಗುವಲ್ಲಿ ಸಫಲರಾಗಿದ್ದಾರೆ. ಆದರೆ ಅವರ ಜೊತೆಗಿರುವ ಉಳಿದ ಸಂತ್ರಸ್ತರ ವೀಸಾ ರದ್ದುಗೊಳ್ಳದ ಹಿನ್ನೆಲೆಯಲ್ಲಿ ತಾಯ್ನಾಡಿಗೆ ವಾಪಸ್‌ ಆಗುವಲ್ಲಿ ಸಮಸ್ಯೆ ಎದುರಿಸಿದ್ದರು.

ಭಾರತೀಯ ಕಾರ್ಮಿಕರಿಗೆ ಉದ್ಯೋಗ ವಂಚನೆ ದೂರಿನ ಹಿನ್ನೆಲೆಯಲ್ಲಿ ಹಿಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಸೂಚನೆ ಮೇರೆಗೆ ಕುವೈಟ್‌ನ ಪಾಮ್‌(ಪಬ್ಲಿಕ್‌ ಅಥಾರಿಟಿ ಆಫ್‌ ಮ್ಯಾನ್‌ಪವರ್‌) ಮತ್ತು ಕಾರ್ಮಿಕ ನ್ಯಾಯಾಲಯ ಶೋನ್‌, ಉದ್ಯೋಗ ನೀಡಿದ ಕಂಪನಿಯ ಕಡತಗಳನ್ನು ಅಮಾನತಿನಲ್ಲಿರಿಸಿತ್ತು. ಇದೀಗ ಭಾನುವಾರ ಭಾರತೀಯ ರಾಯಭಾರಿ ಕಚೇರಿ ಸೂಚನೆ ಮೇರೆಗೆ ಸಂತ್ರಸ್ತರಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಕಡತ ಅಮಾನತು ತೆರವುಗೊಳಿಸಿತ್ತು. ಇದರಿಂದಾಗಿ ಇನ್ನು ವೀಸಾ ರದ್ದತಿ ಸುಲಭವಾಗಲಿದೆ ಎಂದು ಅನಿವಾಸಿ ಭಾರತೀಯ ಮೂಲಗಳು ತಿಳಿಸಿವೆ.

ಇಂದು 15 ಮಂದಿ ಸ್ವದೇಶಕ್ಕೆ : ಉದ್ಯೋಗದಾತ ಕಂಪನಿ ಹಂತ ಹಂತವಾಗಿ ವೀಸಾ ರದ್ದತಿಗೆ ಸಮ್ಮತಿಸಿರುವುದರಿಂದ ಜು.15ರಂದು 15 ಮಂದಿ ಇರುವ ಆಂಧ್ರದ ತಂಡ ಸ್ವದೇಶಕ್ಕೆ ಹೊರಡಲಿದೆ. ಜು.17ರಂದು 19 ಮಂದಿ ಮಂಗಳೂರಿಗರು ಆಗಮಿಸಲಿದ್ದಾರೆ. ಬಳಿಕ ವಿವಿಧ ಹಂತಗಳಲ್ಲಿ ಸಂತ್ರಸ್ತರು ತಾಯ್ನಾಡಿಗೆ ವಾಪಸ್‌ ಆಗಲಿದ್ದಾರೆ. ಆದರೆ ಜಿಪಿ ಪತ್ರ ಹಾಗೂ ಟಿಕೆಟ್‌ ಸಿಗದೆ ಅತಂತ್ರ ಸ್ಥಿತಿಯಲ್ಲಿರುವ ಮತ್ತೆ 15 ಮಂದಿಯ ಬಿಡುಗಡೆ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ.