ಹೈದರಾಬಾದ್[ಏ.19]: 2016ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಅಪನಗದೀಕರಣದ ವೇಳೆ ನಾನಾ ಅಕ್ರಮ ಮಾರ್ಗ ಅನುಸರಿಸಿ ಕಪ್ಪುಹಣವನ್ನು ಬಿಳಿ ಮಾಡಿಕೊಂಡಿದ್ದವರ ಮೇಲೆ ಸರ್ಕಾರ ನಿಧಾನವಾಗಿ ಬಲೆ ಬೀಸಿದಂತೆ ಕಾಣುತ್ತಿದೆ. ಅಪನಗದೀಕರಣ ವೇಳೆ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳಲು ಬೃಹತ್‌ ಪ್ರಮಾಣದ ಅಕ್ರಮ ನಡೆಸಿದ್ದ ಹೈದರಾಬಾದ್‌ ಮೂಲದ ಆಭರಣ ವ್ಯಾಪಾರ ಸಂಸ್ಥೆ ಹಾಗೂ ಅದರ ಜತೆ ನಂಟು ಹೊಂದಿದ ವ್ಯಕ್ತಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಈ ವೇಳೆ 82 ಕೋಟಿ ರು. ಮೌಲ್ಯದ 146 ಕೆ.ಜಿ. ಚಿನ್ನಾಭರಣಗಳನ್ನು ಜಪ್ತಿ ಮಾಡಿದೆ.

ಹೈದರಾಬಾದ್‌ ಹಾಗೂ ವಿಜಯವಾಡದಲ್ಲಿರುವ ಮೂಸಡ್ಡಿಲಾಲ್‌ ಜ್ಯುವೆಲ್ಲ​ರ್‍ಸ್ನ ಶೋರೂಂಗಳು, ಅದರ ಸಂಸ್ಥಾಪಕ ಕೈಲಾಶ್‌ ಗುಪ್ತಾ, ಬಾಲಾಜಿ ಗೋಲ್ಡ್‌ ಎಂಬ ಕಂಪನಿ, ಅದರ ಪಾಲುದಾರ ಪವನ್‌ ಅಗರ್‌ವಾಲ್‌, ಅಷ್ಟಲಕ್ಷ್ಮಿ ಗೋಲ್ಡ್‌ ಎಂಬ ಕಂಪನಿ, ಅದರ ಮಾಲೀಕ ನೀಲ್‌ ಸುಂದರ್‌ ಥಾರಡ್‌, ಚಾರ್ಟರ್ಡ್‌ ಅಕೌಂಟೆಂಟ್‌ ಸಂಜಯ್‌ ಸರ್ದಾರ ಎಂಬುವರ ಮೇಲೆ ಕಳೆದ ಕೆಲವು ದಿನಗಳಿಂದ ದಾಳಿ ನಡೆಸಲಾಗಿದೆ. ಈ ವೇಳೆ 145.89 ಕೆ.ಜಿ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದ್ದು, ಅದರ ಮೌಲ್ಯ 82.11 ಕೋಟಿ ರು. ಎಂದು ಜಾರಿ ನಿರ್ದೇಶನಾಲಯ ಗುರುವಾರ ಮಾಹಿತಿ ನೀಡಿದೆ.

ಅಕ್ರಮ ಹೇಗೆ?:

ಎರಡೂವರೆ ವರ್ಷಗಳ ಹಿಂದೆ ಅಂದರೆ 2016ರ ನ.8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500, 1000 ರು. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ್ದರು. ಚಲಾವಣೆ ಕಳೆದುಕೊಂಡ ನೋಟುಗಳನ್ನು ನಾಗರಿಕರು ಬ್ಯಾಂಕ್‌ ಖಾತೆಗೆ ಜಮೆ ಮಾಡಲು 50 ದಿನಗಳ ಅವಕಾಶ ಒದಗಿಸಿದ್ದರು. ಈ ವೇಳೆ ತಮ್ಮಲ್ಲಿದ್ದ ಅಕ್ರಮ ಹಣವನ್ನು ಬಿಳಿ ಮಾಡಿಕೊಳ್ಳಲು ಆರೋಪಿಗಳು ಭಾರಿ ಅಕ್ರಮ ನಡೆಸಿದ್ದರು. 2016ರ ನ.8ಕ್ಕೂ ಹಿಂದಿನ ದಿನಾಂಕದ 5200 ಸುಳ್ಳು ರಶೀದಿಗಳನ್ನು ಸೃಷ್ಟಿಸಿದ್ದರು. ಪ್ಯಾನ್‌ ಸಂಖ್ಯೆ ಒದಗಿಸುವುದರಿಂದ ತಪ್ಪಿಸಿಕೊಳ್ಳಲು ಈ ರಶೀದಿಗಳಲ್ಲಿ 2 ಲಕ್ಷ ರು.ಗಿಂತ ಕಡಿಮೆ ಮೊತ್ತವನ್ನು ನಮೂದಿಸಲಾಗಿತ್ತು. ಈ ಸಂಬಂಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದಾಯ ತೆರಿಗೆ ಇಲಾಖೆ ಕೂಡ ದೂರು ನೀಡಿತ್ತು. ಅದರ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಕೂಡ ಪ್ರಕರಣ ದಾಖಲು ಮಾಡಿಕೊಂಡಿತ್ತು.

14 ಲಕ್ಷ ಅನುಮಾನಾಸ್ಪದ ವ್ಯವಹಾರ:

ಅಪನಗದೀಕರಣ ಜಾರಿಗೊಳಿಸಿದ ಬಳಿಕ ದೇಶದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಹಣದ ವ್ಯವಹಾರ ನಡೆದಿತ್ತು. ಈ ಪೈಕಿ ಭಾರೀ ಮೊತ್ತದ 14 ಲಕ್ಷ ವಹಿವಾಟುಗಳು ಅನುಮಾನಾಸ್ಪದವಾಗಿವೆ ಎಂದು ಇತ್ತೀಚೆಗಷ್ಟೇ ಹಣಕಾಸು ಗುಪ್ತಚರ ಇಲಾಖೆ ತನ್ನ ವರದಿಯಲ್ಲಿ ತಿಳಿಸಿತ್ತು. ಜೊತೆಗೆ ಕೇಂದ್ರ ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳು ಕೂಡಾ ಇಂಥ ಅವ್ಯವಹಾರದ ಮೇಲೆ ಶೀಘ್ರ ತನಿಖೆ ಆರಂಭಿಸಲಿವೆ ಎಂದು ಸರ್ಕಾರ ಹೇಳಿತ್ತು.