2013ರಲ್ಲಿ ವಾಯುಮಾಲಿನ್ಯದಿಂದಾಗಿ ಭಾರತದಲ್ಲಿ ಸುಮಾರು 1.4 ದಶಲಕ್ಷ ಮಂದಿ ಸಾವನಪ್ಪಿದ್ದಾರೆ ಎಂದು ವರ್ಲ್ಡ್ ಬ್ಯಾಂಕ್ ಗುರುವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.
ವರ್ಲ್ಡ್ ಬ್ಯಾಂಕ್ ಹಾಗೂ ಹೆಲ್ತ್ ಮೆಟ್ರಿಕ್ಸ್ ಹಾಗೂ ಇವ್ಯಾಲುಯೇಶನ್ ಸಂಸ್ಥೆಯು ಜಂಟಿಯಾಗಿ ಬಿಡುಗಡೆ ಮಾಡಿರುವ ವರದಿಯಲ್ಲಿ 2013ರಲ್ಲಿ ಜಗತ್ತಿನಾದ್ಯಂತ ವಾಯುಮಾಲಿನ್ಯದಿಂದಾಗಿ 5 ದಶಲಕ್ಷ ಮಂದಿ ಸಾವನಪ್ಪಿದ್ದಾರೆ ಎಂದು ಹೇಳಲಾಗಿದೆ.
ವರದಿಯ ಪ್ರಕಾರ ಚೀನಾ ದೇಶವೊಂದರಲ್ಲೆ 1.6 ದಶಲಕ್ಷ ಹಾಗೂ ಭಾರತದಲ್ಲಿ 1,3 ದಶಲಕ್ಷ ಮಂದಿ ಸಾವನಪ್ಪಿದ್ದಾರೆ.
ವಾಯುಮಾಲಿನ್ಯದಿಂದಾಗಿ ಶ್ವಾಸಕೋಶ ಕ್ಯಾನ್ಸರ್, ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆಗಳಂತಹ ಮಾರಕ ರೋಗಗಳು ಹೆಚ್ಚಾಗುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ.
ದಕ್ಷಿಣ ಏಶಿಯಾದ ಇತರ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾಗಳು ಕೂಡಾ ಟಾಪ್ 15ರ ಪಟ್ಟಿಯಲ್ಲಿವೆ.
ಪ್ರತಿ ದಶಲಕ್ಷ ಜನಸಂಖ್ಯೆಗೆ ಉಂಟಾಗಿರುವ ಸಾವಿನ ಅನುಪಾತ ಗಮನಿಸಿದಾಗ ಅಧ್ಯಯನ ನಡೆಸಲಾದ 142 ದೇಶಗಳ ಪೈಕಿ ಚೀನಾ 4ನೇ ಸ್ಥಾನದಲ್ಲಿದೆಯಾದರೆ, ಭಾರತ 6 ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ 11ನೇ, ಶ್ರೀಲಂಕಾ 12ನೇ, ಹಾಗೂ ಪಾಕಿಸ್ತಾನ 15ನೇ ಸ್ಥಾನದಲ್ಲಿದೆ.
