ಬರ್ಮೇರ್ [ರಾಜಸ್ಥಾನ], [ಜೂ.23]: ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಪೆಂಡಾಲ್‌(ಟೆಂಟ್‌) ಕುಸಿದು ಸುಮಾರು 14 ಜನರು ಮೃತಪಟ್ಟು 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ರಾಜಸ್ಥಾನದ ಬರ್ಮೇರ್ ನಲ್ಲಿ ಘಟನೆ ನಡೆದಿದೆ.

ಜೈಪುರದಿಂದ 500 ಕಿಮೀ ದೂರವಿರುವ ಜಾಸೊಲ್‌ ಪ್ರದೇಶದಲ್ಲಿ ಇಂದು [ಭಾನುವಾರ] ಸಂಜೆ 4.30ರ ಸುಮಾರಿಗೆ ರಾಮ ಕಥೆಯನ್ನು ಏರ್ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರೆಲ್ಲರೂ ರಾಮಕಥೆಯನ್ನು ಕೇಳಲು ಅಲ್ಲಿ ನೆರೆದಿದ್ದರು.

ಈ ವೇಳೆ ಶಾಮಿಯಾನ ಅಡಿಯಲ್ಲಿ ಕುಳಿತಿದ್ದವರ ಮೇಲೆ ಬಿದ್ದಿದ್ದರಿಂದಾಗಿ ಸಾವು, ನೋವು ಸಂಭವಿಸಿದೆ ಎಂದು ಪೊಲೀಸ್‌ ಹೆಚ್ಚುವರಿ ಸೂಪರಿಂಟೆಂಡೆಂಟ್‌ ಕೀನ್‌ ಸಿಂಗ್‌ ತಿಳಿಸಿದ್ದಾರೆ. 

 

ಮಳೆಯಿಂದಾಗಿ ಎಲೆಕ್ಟ್ರಿಕ್‌ ಶಾಕ್‌ ಉಂಟಾಗಿ ಸಾವು ಸಂಭವಿಸಿದೆ ಎಂದು ಕೆಲವರು ಹೇಳಿದ್ದಾರೆ. ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಟ್ವೀಟ್‌ ಮಾಡಿದ್ದು ಘಟನೆಯಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ.