ದುಬೈ[ಡಿ.17]: ನಾಲ್ಕು ವರ್ಷಗಳ ಹಿಂದೆ ತನ್ನ ಮೊದಲ ಸಾಫ್ಟ್‌ವೇರ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದ್ದ 13 ವರ್ಷದ ಭಾರತೀಯ ಬಾಲಕನೋರ್ವ ದುಬೈನಲ್ಲಿ ಸಾಫ್ಟ್‌ವೇರ್‌ ಅಭಿವೃದ್ಧಿ ಕಂಪನಿಯನ್ನು ಹೊಂದಿರುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ.

ಗ್ರಾಹಕರಿಗಾಗಿ ವೆಬ್‌ಸೈಟ್‌, ಲೋಗೋಗಳನ್ನು ಅಭಿವೃದ್ಧಿ ಪಡಿಸುವ ಹವ್ಯಾಸ ಹೊಂದಿದ್ದ ಕೇರಳ ಮೂಲದ ಆದಿತ್ಯನ್‌ ರಾಜೇಶ್‌ ಎಂಬ ವಿದ್ಯಾರ್ಥಿ 9 ವರ್ಷದವನಿದ್ದಾಗಲೇ ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಧಿ ಪಡಿಸಿದ್ದ. ಇದೀಗ ಟ್ರಿನೆಟ್‌ ಸೊಲ್ಯೂಷನ್ಸ್‌ ಎಂಬ ತಮ್ಮದೇ ಆದ ಸ್ವಂತ ಕಂಪನಿಯನ್ನು ಅದಿತ್ಯನ್‌ ಅವರು ಆರಂಭಿಸಿದ್ದಾರೆ ಎಂದು ದುಬೈ ಮೂಲದ ಆಂಗ್ಲ ಪತ್ರಿಕೆ ‘ಖಲೀಜ್‌ ಟೈಮ್ಸ್‌’ ವರದಿ ಮಾಡಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬಾಲಕ ಆದಿತ್ಯನ್‌, ‘ಕೇರಳದ ತಿರುವಿಲ್ಲಾ ಎಂಬಲ್ಲಿ ನಾನು ಜನಿಸಿದೆ. ನಾನು 5 ವರ್ಷದವನಿದ್ದಾಗ ನಮ್ಮ ಕುಟುಂಬ ದುಬೈಗೆ ವಲಸೆ ಬಂದಿತು. ನನಗೆ ಬಿಬಿಸಿ ಟೈಪಿಂಗ್‌ ವೆಬ್‌ಸೈಟ್‌ ಅನ್ನು ನನ್ನ ತಂದೆ ಮೊದಲ ಬಾರಿಗೆ ತೋರಿಸಿದರು. ಅಲ್ಲಿಂದ ಇದರಲ್ಲಿ ಉತ್ಸಾಹ ಬೆಳೆಯಿತು,’ ಎಂದು ಹೇಳಿದ್ದಾರೆ.