ಬಾಲಕಿ ಕೆಲವು ತಿಂಗಳ ಹಿಂದೆ ಮಗು ಹೆತ್ತಾಗ ಆಕೆಯ ಹೇಳಿಕೆ ಆಧರಿಸಿ ಈ ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಈಗ ಆತನ ವಿರುದ್ಧದ ಪ್ರಕರಣ ಮತ್ತಷ್ಟು ಬಲಗೊಂಡಂತೆ ಆಗಿದೆ.
ತಿರುವನಂತಪುರ(ಮಾ.24): ಓರಗೆಯ ಮಕ್ಕಳ ಜತೆ ಆಟವಾಡಿಕೊಂಡು ಇರಬೇಕಾದ ಕೇರಳದ 12ರ ಪ್ರಾಯದ ಬಾಲಕನೊಬ್ಬ ದೇಶದ ಅತ್ಯಂತ ಕಿರಿಯ ತಂದೆ ಎನಿಸಿಕೊಂಡಿದ್ದಾನೆ!
16 ವರ್ಷದ ಸೋದರ ಸಂಬಂಧಿ ಬಾಲಕಿ ಜತೆ ಈತ ಬೆಳೆಸಿದ್ದ ಸಂಬಂಧದಿಂದಾಗಿ ಹೆಣ್ಣುಮಗುವೊಂದು ಕೆಲ ತಿಂಗಳ ಹಿಂದೆ ಜನಿಸಿತ್ತು. ಆ ಮಗುವಿಗೆ ಈ ಬಾಲಕನೇ ತಂದೆ ಎಂದು ಬಾಲಕಿ ಹೇಳಿದ್ದ ಹಿನ್ನೆಲೆಯಲ್ಲಿ ಪೊಲೀಸರು ಡಿಎನ್‌ಎ ಪರೀಕ್ಷೆ ಮೊರೆ ಹೋಗಿದ್ದರು. ಆ ಪರೀಕ್ಷೆಯಲ್ಲಿ 12ರ ಬಾಲಕನೇ ತಂದೆ ಎಂಬುದು ದೃಢಪಟ್ಟಿದೆ. 12ನೇ ವಯಸ್ಸಿನಲ್ಲಿ ಬಾಲಕನೊಬ್ಬ ತಂದೆಯಾದ ನಿದರ್ಶನ ದೇಶದಲ್ಲಿ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಬಾಲಕಿ ಕೆಲವು ತಿಂಗಳ ಹಿಂದೆ ಮಗು ಹೆತ್ತಾಗ ಆಕೆಯ ಹೇಳಿಕೆ ಆಧರಿಸಿ ಈ ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಈಗ ಆತನ ವಿರುದ್ಧದ ಪ್ರಕರಣ ಮತ್ತಷ್ಟು ಬಲಗೊಂಡಂತೆ ಆಗಿದೆ.
12ರ ಬಾಲಕ ತಂದೆ ಆಗಲು ಸಾಧ್ಯವೇ?
ಈ ಬಗ್ಗೆ ತಿರುವನಂತಪುರ ವೈದ್ಯಕೀಯ ಕಾಲೇಜಿನ ಎಂಡೋಕ್ರೈನಾಲಜಿ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ ಪಿ.ಕೆ. ಜಬ್ಬಾರ್ ಅವರನ್ನು ಪ್ರಶ್ನಿಸಿದಾಗ, ವಯಸ್ಸಿಗೆ ಮೀರಿದ ಬೆಳವಣಿಗೆಯಂತೆ ಬಾಲಕ ಚಿಕ್ಕ ವಯಸ್ಸಿನಲ್ಲೇ ಪ್ರೌಢಾವಸ್ಥೆಗೆ ಬಂದಿರುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ.
ಈ ರೀತಿ ಆಗುವುದು ಅಪರೂಪವೇನಲ್ಲ. ಆದರೆ, 12ನೇ ವಯಸ್ಸಿಗೇ ಬಾಲಕನೊಬ್ಬ ತಂದೆಯಾಗಿದ್ದು ನನ್ನ ಗಮನಕ್ಕೆ ಎಂದಿಗೂ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಬಾಲಕನ ರಕ್ತದಿಂದ ಸಂಗ್ರಹಿಸಲಾದ ಡಿಎನ್‌ಎ ಮಾದರಿ ಹಾಗೂ ಮಗು 18 ದಿನವಿದ್ದಾಗ ಸಂಗ್ರಹಿಸಿದ್ದ ಡಿಎನ್‌ಎ ಮಾದರಿ ಎರಡೂ ಹೋಲಿಕೆಯಾಗಿವೆ ಎಂದಿದ್ದಾರೆ.
