ಶಿವಮೊಗ್ಗ, (ಆ.05):  ಯಾವುದೇ ಕಾರಣಕ್ಕೂ ಬಿಜೆಪಿ ಸೇರಲ್ಲ ಎಂದು ಅನರ್ಹಗೊಂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಮಾತಾಗಿದೆ. ಆದ್ರೆ ಬಿಜೆಪಿ ಶಾಸಕ ಹೇಳಿರುವಂತೆ ಅನರ್ಹಗೊಂಡ 12 ಶಾಸಕರು ಅಳಿಯಂದಿರಂತೆ ಪಕ್ಷ ಸೇರಿಕೊಂಡಿದ್ದಾರಂತೆ.

ಹೌದು..ಶಿವಮೊಗ್ಗದಲ್ಲಿ ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ಎಸ್.ಈಶ್ವರಪ್ಪ, ಬಿಜೆಪಿಗೆ 12 ಶಾಸಕರು ಅಳಿಯರಂತೆ ಬಂದಿದ್ದಾರೆ. ಅವರನ್ನೂ ಸಹ ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲ ಮೂಡಿಸಿದ್ದಾರೆ.

ಅತೃಪ್ತರ ಸಹಾಯ ಒಪ್ಪಿಕೊಂಡ ಬಿಜೆಪಿ ನಾಯಕ ? ಮಂತ್ರಿ ಸ್ಥಾನ ಪಕ್ಕಾ!

ಹಿಂದಿನ ಮೈತ್ರಿ ಸರ್ಕಾರದಲ್ಲಿ ಬೇಸತ್ತು, ಬಿಜೆಪಿಯನ್ನು ನೆಚ್ಚಿಕೊಂಡು ಬಂದಿದ್ದಾರೆ. ಅವರನ್ನು ಸಂತೃಪ್ತಿಗೊಳಿಸಿ ರಾಜ್ಯದ ಹಿತ ಕಾಪಾಡುವಂತಹ ಸಂಪುಟ ರಚಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೇಂದ್ರದ ನಾಯಕರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

ವಿರೋಧ ಪಕ್ಷದವರು ಸಚಿವ ಸಂಪುಟವಿಲ್ಲದ ಸರ್ಕಾರ ಎಂದು ಟೀಕೆಗಳಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಈ ಹಿಂದೆ ಸರ್ಕಾರನೇ ಇರಲಿಲ್ಲ.. ಈಗ ಮುಖ್ಯಮಂತ್ರಿ ಇದ್ದಾರೆ. ರಾಜ್ಯದ ಜನರಿಗೆ ಖುಷಿಯಾಗಿದ್ದು, ಒಂದು ವಾರದೊಳಗೆ ಸಂಪುಟ ವಿಸ್ತರಣೆ ಆಗಲಿದೆ ಎಂದು ತಿರುಗೇಟು ನೀಡಿದರು.

ಇನ್ನು ಇದೇ ವೇಳೆ  ಜಮ್ಮು ಮತ್ತು ಕಾಶ್ಮೀರದ 370 ಆರ್ಟಿಕಲ್ ರದ್ದು ಮಾಡಿದ ಕೇಂದ್ರ ಸರ್ಕಾರ ತೀರ್ಮಾನವನ್ನು ಸ್ವಾಗತಿಸಿದ್ದು, ಈ ಕ್ರಮಕ್ಕೆ ದೇಶ ಸೇರಿದಂತೆ, ಪ್ರಪಂಚದಾದ್ಯಂತ ಒಳ್ಳೆಯ ಬೆಂಬಲ ವ್ಯಕ್ತವಾಗಿದೆ. ಲಕ್ಷಾಂತರ ಜನರು ಕಾಶ್ಮೀರದ ಭೂಮಿಗಾಗಿ ಬಲಿದಾನ ಮಾಡಿದ್ದಾರೆ. ಈ ತೀರ್ಮಾನದಿಂದಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.