ಉಗಮ ಶ್ರೀನಿವಾಸ್‌, ಕನ್ನಡಪ್ರಭ

ತುಮಕೂರು[ಏ.02]: ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರು ಭೌತಿಕವಾಗಿ ಇಲ್ಲದ ಅವರ ಮೊದಲ ಹುಟ್ಟುಹಬ್ಬಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಶಿವೈಕ್ಯ ಸಿದ್ಧಗಂಗಾ ಸ್ವಾಮೀಜಿ ಅವರ 112ನೇ ಜನ್ಮದಿನಾಚರಣೆ ನೆರವೇರಿತು. ಈ ಸಂದರ್ಭದಲ್ಲಿ 112 ನವಜಾತ ಶಿಶುಗಳಿಗೆ ‘ಶಿವಕುಮಾರ ಸ್ವಾಮಿ’ ಎಂದು ನಾಮಕರಣ ಮಾಡುವ ಮೂಲಕ ಶ್ರೀಗಳಿಗೆ ವಿಶೇಷ ಗೌರವ ಸಲ್ಲಿಸಲಾಯಿತು.

'ಕಾಯಕಯೋಗಿ'ಯ 15 ನುಡಿಮುತ್ತುಗಳು: ಪಾಲಿಸಿದರೆ ಕೈಲಾಸವೇ ನಮ್ಮದು

ಸೋಮವಾರ ಬೆಳಿಗ್ಗೆ ಶಿವೈಕ್ಯಶ್ರೀಗಳ ಗದ್ದುಗೆ ಮುಂದೆ ವಿಭೂತಿ ಮೂಲಕ ಶ್ರೀಗಳ ಚಿತ್ರವನ್ನು ಬಿಡಿಸಲಾಗಿತ್ತು. ಆ ಚಿತ್ರಕ್ಕೆ ರುದ್ರಾಕ್ಷಿಯಿಂದ ಅಲಂಕಾರ ಮಾಡಲಾಗಿತ್ತು. ಸಿದ್ಧಗಂಗಾ ಮಠಾಧೀಶ ಸಿದ್ಧಲಿಂಗ ಸ್ವಾಮೀಜಿ ಪೂಜೆ ನೆರವೇರಿಸಿ ದೀರ್ಘದಂಡ ನಮಸ್ಕಾರ ಮಾಡಿದರು. ಈ ಎಲ್ಲಾ ಕಾರ್ಯಕ್ರಮಗಳು ಸುತ್ತೂರು ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಿತು. ಬಳಿಕ ಶ್ರೀಗಳ ಕಚೇರಿಯಿಂದ ಕಾರ್ಯಕ್ರಮ ನಡೆದ ಗೋಸಲ ಸಿದ್ದೇಶ್ವರ ವೇದಿಕೆ ತನಕ ಸುತ್ತೂರುಶ್ರೀ, ಸಿದ್ಧಲಿಂಗ ಸ್ವಾಮೀಜಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತೆರಳಿದರು. ಇದಕ್ಕೂ ಮುನ್ನ ಶಿವೈಕ್ಯ ಶ್ರೀಗಳ 112ನೇ ಹುಟ್ಟು ಹಬ್ಬಕ್ಕೆ ಸಾವಿರಾರು ಭಕ್ತರ ದಂಡು ಹರಿದು ಬಂತು.

ಗದ್ದುಗೆ ಮುಂದೆ ಜನಸಂದಣಿ:

ಹಳೆ ಮಠದ ಮುಂಭಾಗ ನಿರ್ಮಿಸಿರುವ ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ನೋಡಲು ಜನಸಂದಣಿ ದಟ್ಟವಾಗಿತ್ತು. ಪೊಲೀಸರು ಬ್ಯಾರಿಕೇಡ್‌ ನಿರ್ಮಿಸಿ ಭಕ್ತರಿಗೆ ದರ್ಶನ ಮಾಡಲು ಅನುವು ಮಾಡಿಕೊಟ್ಟರು. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಬೆಳ್ಳಂಬೆಳಗ್ಗೆಯೇ ಶ್ರೀ ಮಠದತ್ತ ಧಾವಿಸಿದ್ದರು. ಬಂದ ಭಕ್ತರಿಗೆಲ್ಲಾ ಪ್ರಸಾದ ವ್ಯವಸ್ಥೆಯನ್ನು ಮಠದ ವತಿಯಿಂದ ನೆರವೇರಿಸಲಾಯಿತು. ಶಿವೈಕ್ಯ ಶ್ರೀಗಳ ಗದ್ದುಗೆ, ಶ್ರೀಗಳು ಕೂರುತ್ತಿದ್ದ ಆಡಳಿತ ಕಚೇರಿ, ಶ್ರೀಗಳು ವಿಶ್ರಾಂತಿ ಪಡೆಯುತ್ತಿದ್ದ ಹಳೆ ಮಠ ಹಾಗೂ ತಾಯತ ಕಟ್ಟುತ್ತಿದ್ದ ಸ್ಥಳಗಳಿಗೆ ಭಕ್ತರು ಹೋಗಿ ನಮಸ್ಕರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಶಿಶುಗಳಿಗೆ ನಾಮಕರಣ:

ಮಕ್ಕಳಲ್ಲಿ ದೇವರನ್ನು ಕಾಣುತ್ತಿದ್ದ ಶ್ರೀಗಳ ನೆನಪಿಗಾಗಿ ರಾಜ್ಯದ ವಿವಿಧೆಡೆಗಳಿಂದ 112 ನವಜಾತ ಶಿಶುಗಳಿಗೆ ‘ಶಿವಕುಮಾರ ಸ್ವಾಮಿ’ ಎಂದು ನಾಮಕರಣ ಮಾಡುವ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಲಾಯಿತು. ಆ ನವಜಾತ ಶಿಶುಗಳಿಗೆ ತೊಟ್ಟಿಲು, ಬಟ್ಟೆಮತ್ತಿತರ ವಸ್ತುಗಳನ್ನು ಉಚಿತವಾಗಿ ನೀಡಲಾಯಿತು. ಬಳಿಕ ಗೋಸಲ ಸಿದ್ಧೇಶ್ವರ ವೇದಿಕೆಯಲ್ಲಿ ಶಿವೈಕ್ಯ ಶ್ರೀಗಳ ಪುತ್ಥಳಿ ಇಟ್ಟು ಜನ್ಮದಿನ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆ ಬಳಿಕ ಶ್ರೀಗಳು ಈ ಹಿಂದೆ ಮಾಡಿದ್ದ ಭಾಷಣದ ತುಣುಕೊಂದನ್ನು ಪ್ರದರ್ಶಿಸಲಾಯಿತು. ಶ್ರೀಗಳನ್ನು ಪರದೆ ಮೇಲೆ ನೋಡುತ್ತಿದ್ದಂತೆಯೇ ಭಕ್ತರು ಚಪ್ಪಾಳೆ ತಟ್ಟಿಭಾವಪರಶರಾದರು. ಬಳಿಕ ವೇದಿಕೆಯಲ್ಲಿ ಆಗಮಿಸಿದ್ದ ಗಣ್ಯರು, ಹರಗುರು ಚರಮೂರ್ತಿಗಳು ಶ್ರೀಗಳ ಗುಣಗಾನ ಮಾಡಿದರು.