ಅಮೆರಿಕದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು! ಪಿಟ್ಸ್ ಬರ್ಗ್ ನಗರದಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ! ದುರ್ಘಟನೆಯಲ್ಲಿ 11 ಜನರ ದುರ್ಮರಣ! ರಾಬರ್ಟ್ ಬೊವರ್ಸ್ ಗುಂಡಿನ ದಾಳಿ ನಡೆಸಿದ ಆರೋಪಿ! ಪೊಲೀಸರು, ದಾಳಿಕೋರನ ಮಧ್ಯೆ ಭಾರೀ ಗುಂಡಿನ ಕಾಳಗ! ದಾಳಿಕೋರನನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು
ಪಿಟ್ಸ್ ಬರ್ಗ್(ಅ.28): ಅಮೆರಿಕದ ಪಿಟ್ಸ್ ಬರ್ಗ್ ನಗರದ ಸಿನ್ ಗಾಗ್ ಭೀಕರ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ 11 ಜನ ಮೃತಪಟ್ಟಿದ್ದಾರೆ.
ಯಹೂದಿ ಪ್ರಾರ್ಥನಾ ಮಂದಿರದ ಬಳಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 11 ಮಂದಿ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ದಾಳಿ ನಡೆಸಿದ ವ್ಯಕ್ತಿಯನ್ನು ರಾಬರ್ಟ್ ಬೊವರ್ಸ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ವೇಳೆ ಸ್ಥಳಕ್ಕಾಗಮಿಸಿದ್ದ ಪೊಲೀಸರು ಹಾಗೂ ಬಂದೂಕುಧಾರಿ ನಡುವೆ ಭಾರೀ ಗುಂಡಿನ ಕಾಳಗ ನಡೆದಿತ್ತು. ಕಾಳಗದಲ್ಲಿ ದಾಳಿಕೋರ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.
ಗುಂಡಿನ ದಾಳಿ ನಡೆಸುವ ವೇಳೆ ಆರೋಪಿ ಎಲ್ಲಾ ಯಹೂದಿಗಳು ಸಾಯಲೇಬೇಕೆಂದು ಕೂಗಾಡಿದ್ದಾನೆಂದು ಹೇಳಲಾಗುತ್ತಿದೆ. ಘಟನೆ ಕುರಿತಂತೆ ಎಫ್'ಬಿಐ ತನಿಖೆ ನಡೆಸುತ್ತಿದ್ದು, ದಾಳಿಯ ಹಿಂದಿನ ಉದ್ದೇಶ ಕುರಿತಂತೆ ಈ ವರೆಗೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.
