ಬಿಜೆಪಿಯ ಬಾಕಿ ಉಳಿದಿರುವ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಪ್ರಕಟಗೊಳ್ಳದಿದ್ದರೂ ಆಯಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳಿಗೆ ಬಿಫಾರಂ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು : ಬಿಜೆಪಿಯ ಬಾಕಿ ಉಳಿದಿರುವ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಪ್ರಕಟಗೊಳ್ಳದಿದ್ದರೂ ಆಯಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳಿಗೆ ಬಿಫಾರಂ ನೀಡಲಾಗಿದೆ ಎಂದು ತಿಳಿದು ಬಂದಿದೆ.
ವರುಣಾ ಕ್ಷೇತ್ರದಿಂದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದ್ದು, ಇಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಯಶವಂತಪುರದಿಂದ ಹಾಲಿ ಸಂಸದೆ ಹಾಗೂ ಹಿಂದೆ ಇದೇ ಕ್ಷೇತ್ರ ಪ್ರತಿನಿಧಿಸಿದ್ದ ಶೋಭಾ ಕರಂದ್ಲಾಜೆ ಅವರು ಕಣಕ್ಕಿಳಿಯದೇ ಇರಲು ತೀರ್ಮಾನಿಸಿದ್ದಾರೆ. ಹೀಗಾಗಿ, ಮಾಜಿ ಸಂಸದೆ ತೇಜಸ್ವಿನಿ ಗೌಡ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಈ ಹಿಂದೆ ಪ್ರಕಟಿಸಲಾಗಿದ್ದ ಅಭ್ಯರ್ಥಿಗಳ ಪೈಕಿ ಹಾಸನ ಜಿಲ್ಲೆ ಅರಸೀಕೆರೆಯಿಂದ ಸ್ಪರ್ಧಿಸಲು ಮಾಜಿ ಸಚಿವ ವಿ.ಸೋಮಣ್ಣ ಪುತ್ರ ಡಾ.ಅರುಣ್ ಹಿಂದೆ ಸರಿದಿರುವುದರಿಂದ ಪಕ್ಷದ ಮುಖಂಡ ಮರಿಸ್ವಾಮಿ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಬಿಫಾರಂ ಕೂಡ ನೀಡಲಾಗಿದೆ.
ಅದೇ ರೀತಿ ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಬದಲಿಸಲು ಪಟ್ಟು ಹಿಡಿದಿದ್ದ ಸಂಸದ ಕರಡಿ ಸಂಗಣ್ಣ ಅವರ ಒತ್ತಡಕ್ಕೆ ಪಕ್ಷ ಇನ್ನೂ ಹಸಿರು ನಿಶಾನೆ ತೋರಿಲ್ಲ. ತಮ್ಮ ಪುತ್ರ ಅಮರೇಶನಿಗೆ ಟಿಕೆಟ್ ನೀಡುವಂತೆ ಸಂಗಣ್ಣ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸೋಮವಾರ ಬೆಳಗ್ಗೆಯೇ ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದೆ ಎನ್ನಲಾಗಿದೆ.

Last Updated 23, Apr 2018, 7:40 AM IST