ಮಕ್ಕಳು ಮನೆಯಲ್ಲಿದ್ದರೆ ಅದೇ ಸ್ವರ್ಗ ಅಂತ ದೊಡ್ಡವರು ಹೇಳುತ್ತಿದ್ದರು. ಆದರೆ, ಈಗ ಫುಲ್​ ಬದಲಾಗಿದೆ. ಮಕ್ಕಳು ಯಾವಾಗ ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಪಾಲಕರು ಕಾಯುತ್ತಿದ್ದಾರೆ. ಅರೇ, ಅದ್ಯಾರ್ ರೀ... ಮಕ್ಕಳನ್ನ ಮನೆಯಿಂದ ಹೊರಗೆ ಹೋಗ್ಲಿ ಎನ್ನುವವರು? ಅಷ್ಟಕ್ಕೂ ಮಕ್ಕಳು ಏನು​ ಮಾಡಿದ್ರು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ಬೆಂಗಳೂರು(ಮಾ.07): ಮಕ್ಕಳು ಮನೆಯಲ್ಲಿದ್ದರೆ ಅದೇ ಸ್ವರ್ಗ ಅಂತ ದೊಡ್ಡವರು ಹೇಳುತ್ತಿದ್ದರು. ಆದರೆ, ಈಗ ಫುಲ್​ ಬದಲಾಗಿದೆ. ಮಕ್ಕಳು ಯಾವಾಗ ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಪಾಲಕರು ಕಾಯುತ್ತಿದ್ದಾರೆ. ಅರೇ, ಅದ್ಯಾರ್ ರೀ... ಮಕ್ಕಳನ್ನ ಮನೆಯಿಂದ ಹೊರಗೆ ಹೋಗ್ಲಿ ಎನ್ನುವವರು? ಅಷ್ಟಕ್ಕೂ ಮಕ್ಕಳು ಏನು​ ಮಾಡಿದ್ರು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ಇತ್ತೀಚಿಗೆ ಮಕ್ಕಳು ಕೈಯಲ್ಲಿ ಮೊಬೈಲ್​ ಹಿಡಿದು ಮುಳುಗಿ ಹೋಗಿದ್ದಾರೆ. ಆ ಹಳೇ ವಿಷಯಕ್ಕೆ ಈವಾಗ ಹೊಸ ಟ್ವಿಸ್ಟ್​ ಸಿಕ್ಕಿದೆ. ಟೆಕ್ನಾಲಜಿ ಬಗ್ಗೆ ಮಕ್ಕಳಿಗೆ ಅರ್ಥವಾಗಲಿ ಅಂತ ಪಾಲಕರು ಮಕ್ಕಳಿಗೆ ಕೊಡಸಿದ್ದ ಮೊಬೈಲ್​ ಈಗ ಮಕ್ಕಳಿಗೆ ಮಾರಕವಾಗಿದೆ. ಇಡೀ ದಿನ ಮಕ್ಕಳು ಮೊಬೈಲ್​'ನಲ್ಲೇ ಕಾಲ ಕಳೆಯುತ್ತಿದ್ದಾರೆ. ಹೀಗಂತ ಕಳೆದ ಎರಡು ತಿಂಗಳಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಪಾಲಕರು 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಅಷ್ಟೇ ಅಲ್ಲ, ಮಕ್ಕಳ ಸಹಾಯವಾಣಿಗೆ ಕರೆ ಮಾಡಿರುವ ಪಾಲಕರೆಲ್ಲರೂ ಬೆಂಗಳೂರಿನವರೇ. ಪ್ರತಿ ನಿತ್ಯ ಬೆಳಗಾದರೆ ಮಕ್ಕಳು ಮೊಬೈಲ್​ ಹಿಡಿದುಕೊಂಡು ಕೂತು ಬಿಡುತ್ತಾರೆ. ಅದನ್ನು ಬಿಡಿಸಲು ಏನು ಮಾಡಬೇಕು? ಮೊಬೈಲ್​ ಕೊಡಸದಿದ್ದರೆ ಊಟ ಮಾಡಲ್ಲ ಅಂತ ರಚ್ಚೆ ಹಿಡಿಯುತ್ತಾರೆ. ಹೀಗೆ ಹಲವು ಪ್ರಶ್ನೆಗಳನ್ನ ಪೋಷಕರು ಸಹಾಯವಾಣಿಗೆ ಕರೆ ಮಾಡಿ ಕೇಳಿದ್ದಾರಂತೆ. ಜೊತೆಗೆ ಮಕ್ಕಳ ಆರೋಗ್ಯದ ಮೇಲೂ ಭಾರಿ ಪ್ರಭಾವ ಬಿದ್ದಿದೆ. ಮನೆಯಲ್ಲಿ ತಂದೆ-ತಾಯಿಯರನ್ನೇ ಮಕ್ಕಳು ಮಾತಾಡಿಸಲು ಸಮಯವಿಲ್ಲದಷ್ಟು ಮೊಬೈಲ್'​ನಲ್ಲಿ ಬ್ಯುಸಿ ಆಗಿದ್ದಾರಂತೆ. 

ಇನ್ನೊಂದು ಅಚ್ಚರಿ ಅಂತಂದ್ರೆ.. ಸಹಾಯವಾಣಿಗೆ ಕರೆ ಮಾಡಿರುವ ಇಪ್ಪತ್ತು ಸಾವಿರ ಪೋಷಕರಲ್ಲಿ 13 ಸಾವಿರ ಕರೆಗಳು 5 ವರ್ಷದಿಂದ 12 ವರ್ಷದೊಳಗಿನ ಮಕ್ಕಳ ಪಾಲಕರು. ದಿನಾಲೂ ಮೊಬೈಲ್'​ನಲ್ಲಿ ಆಟವಾಡುತ್ತಾ, ಮನೆ ಬಿಟ್ಟು ಹೊರಗಿನ ಜಗತ್ತನೇ ನೋಡುತ್ತಿಲ್ಲವಂತೆ. ಇದರಿಂದ ಮಕ್ಕಳ ಆರೋಗ್ಯದ ಮೇಲೂ ಭಾರೀ ಪ್ರಭಾವ ಬೀರುತ್ತಿದೆ.

ಮಕ್ಕಳು ಗಿಡ-ಮರ ಮಧ್ಯೆ, ಬೀದಿ-ಮೈದಾನದಲ್ಲಿ ಆಟವಾಡಿದರೆ ಅವರ ಆರೋಗ್ಯದ ಮೇಲೆ ಬೀರುವ ಪ್ರಭಾವವೇ ಬೇರೆ. ಆದರೆ, ಇಡೀ ದಿನ ಮನೆಯಲ್ಲಿ ಮೊಬೈಲ್​ ಹಿಡಿದು ಆಟವಾಡುತ್ತಿದ್ದರೆ ಆಗುವ ಪರಿಣಾಮ ಭಯಾನಕವಾಗಿರುತ್ತದೆ. ನಿಮ್ಮ ಮನೆಯಲ್ಲೂ ಮಕ್ಕಳಿಗೆ ಮೊಬೈಲ್​ ಜಗತ್ತು ಪರಿಚಯಿಸುವ ಮುನ್ನ ಒಮ್ಮೆ ಯೋಚನೆ ಮಾಡಿ. ಇಲ್ಲವಾದರೆ ನೀವು ಮುಂದೊಂದು ದಿನ ಸಹಾಯವಾಣಿಗೆ ಕರೆ ಮಾಡುವ ಪರಿಸ್ಥಿತಿ ಬರಬಹುದು ಎಚ್ಚರ.