ಮಹದಾಯಿ ಹೋರಾಟಕ್ಕೆ ಇಂದು ಸಹಸ್ರ ದಿನ

First Published 10, Apr 2018, 7:53 AM IST
1000 Days For Mahadayi Protest
Highlights

ಇಡೀ ದೇಶದ ಗಮನ ಸೆಳೆದಿದ್ದ ಮಹದಾಯಿ ಹೋರಾಟ  ಇಂದು1000 ದಿನ ಪೂರೈಸಲಿದೆ. ನೀರಿಗಾಗಿ ಆಗ್ರಹಿಸಿ ಹಗಲು ರಾತ್ರಿಯೆನ್ನದೇ, ಬಿಸಿಲು- ಮಳೆಯಲ್ಲಿ ನಡೆಸಿದ ಹೋರಾಟಗಾರರಿಗೆ ಇದುವರೆಗೂ ಸಿಕ್ಕಿದ್ದು ಕೇವಲ ಲಾಠಿಯೇಟು, ಜನಪ್ರತಿನಿಧಿಗಳ ಪೊಳ್ಳು ಭರವಸೆಗಳು ಮಾತ್ರ.

ಶಿವಾನಂದ ಗೊಂಬಿ ಹುಬ್ಬಳ್ಳಿ

ಇಡೀ ದೇಶದ ಗಮನ ಸೆಳೆದಿದ್ದ ಮಹದಾಯಿ ಹೋರಾಟ ಇಂದು 1000 ದಿನ ಪೂರೈಸಲಿದೆ. ನೀರಿಗಾಗಿ ಆಗ್ರಹಿಸಿ ಹಗಲು ರಾತ್ರಿಯೆನ್ನದೇ, ಬಿಸಿಲು- ಮಳೆಯಲ್ಲಿ ನಡೆಸಿದ ಹೋರಾಟಗಾರರಿಗೆ ಇದುವರೆಗೂ ಸಿಕ್ಕಿದ್ದು ಕೇವಲ ಲಾಠಿಯೇಟು, ಜನಪ್ರತಿನಿಧಿಗಳ ಪೊಳ್ಳು ಭರವಸೆಗಳು ಮಾತ್ರ.

ಮಹದಾಯಿ ಹೋರಾಟ ದಶಕಗಳಿಂದ ನಡೆಯುತ್ತಿದ್ದರೂ, ಪ್ರತಿಭಟನೆ ತೀವ್ರತೆ ಪಡೆದುಕೊಂಡಿದ್ದು 2015ರ ಜು.15ರಂದು. ಅಂದಿನಿಂದ ಇಂದಿನವರೆಗೂ ಗದಗ ಜಿಲ್ಲೆ ನರಗುಂದದಲ್ಲಿ ಹೋರಾಟ ನಡೆಯುತ್ತಲೇ ಇದೆ. ಅಂದು ಆರಂಭವಾದ ಹೋರಾಟ ಇದೀಗ 1000 ದಿನ ಪೂರೈಸಲಿದೆ. ಮಹದಾಯಿ ಹೋರಾಟ ಸಾವಿರ ದಿನ ಪೂರೈಸಲಿರುವ ಹಿನ್ನೆಲೆಯಲ್ಲಿ ಮಂಗಳವಾರ ಕರಾಳ ದಿನ ಹಾಗೂ ಸಾಂಕೇತಿಕ ಪ್ರತಿಭಟನೆ ನಡೆಸಲು ಹೋರಾಟಗಾರರು ತೀರ್ಮಾನಿಸಿದ್ದಾರೆ.

ವೇದಿಕೆಯಲ್ಲೇ ಹಬ್ಬ ಹರಿದಿನ: ಮಲಪ್ರಭ ಅಚ್ಚುಕಟ್ಟು ಪ್ರದೇಶದ ದಾಹ ತೀರಿಸುವುದಕ್ಕಾಗಿ ಆರಂಭವಾದ ಹೋರಾಟದಲ್ಲಿ ಪಾಲ್ಗೊಂಡವರು ಈವರೆಗೆ 75ಕ್ಕೂ ಹೆಚ್ಚು ಬಾರಿ ಬಂದ್‌ ನಡೆಸಿದ್ದುಂಟು. ಇನ್ನು ರಸ್ತೆ ತಡೆ, ಮೆರವಣಿಗೆ, ಮುತ್ತಿಗೆಗಳಿಗೆ ಲೆಕ್ಕವೇ ಇಲ್ಲ. ದೃಢ ಸಂಕಲ್ಪದಿಂದ ನಡೆಸುತ್ತಿರುವ ಹೋರಾಟಗಾರರು, ಇದಕ್ಕಾಗಿ ಮಾಡಿದ ತ್ಯಾಗ ಅಷ್ಟಿಷ್ಟಲ್ಲ. ಮಳೆ ಗಾಳಿ, ಉರಿಬಿಸಿಲು, ಲೆಕ್ಕಿಸದೇ ಕುಳಿತಿದ್ದಾರೆ. ಮದುವೆ, ಮುಂಜಿ, ಗೃಹಪ್ರವೇಶಗಳಲ್ಲೂ ಭಾಗಿಯಾಗಲಿಲ್ಲ. ಜಾತ್ರೆ ಹಬ್ಬ ಹರಿದಿನಗಳನ್ನೂ ಹೋರಾಟದ ವೇದಿಕೆಯಲ್ಲೇ ನಡೆಸಿದ್ದು ವಿಶೇಷ.

ಹೋರಾಟಕ್ಕೆ 10 ಬಲಿ: ಈ ಹೋರಾಟದಲ್ಲಿ ಪಾಲ್ಗೊಂಡವರಲ್ಲಿ 10 ಮಂದಿ ತಮ್ಮ ಜೀವವನ್ನೇ ಬಲಿ ನೀಡಿದ್ದಾರೆ. ನಾಲ್ವರು ಪೊಲೀಸರ ಲಾಠಿಯೇಟಿಗೆ ಬಲಿಯಾಗಿದ್ದರೆ, ಮೂವರು ಹೃದಯಾಘಾತಕ್ಕೆ, ಮತ್ತೆ ಒಬ್ಬ ಹೋರಾಟದ ವೇದಿಕೆಯಲ್ಲಿ ಉಂಟಾದ ನೂಕು ನುಗ್ಗಾಟ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಮತ್ತೆ ಇಬ್ಬರು ಪಾದಯಾತ್ರೆ ನಡೆಸುವಾಗ ನಡೆದ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದುಂಟು.

ರಾಜಕಾರಣಿಗಳ ಚದುರಂಗದಾಟ: ರಾಜಕಾರಣಿಗಳು ಮಾತ್ರ ಮಹದಾಯಿ ಹೋರಾಟವನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಸಮಸ್ಯೆ ಬಗೆಹರಿಸುವುದಕ್ಕಿಂತ ಅದನ್ನು ಜೀವಂತವಾಗಿರಿಸುವ ಯತ್ನ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಏನಿದು ಯೋಜನೆ?

ಪಶ್ಚಿಮಾಭಿಮುಖವಾಗಿ ಹರಿಯುವ ಮಹದಾಯಿಯ ಉಪ ನದಿಗಳಾದ ಕಳಸಾ ಮತ್ತು ಬಂಡೂರಿ ನಾಲೆಗಳನ್ನು ಪೂರ್ವಕ್ಕೆ ತಿರುಗಿಸಿ ಅವುಗಳಲ್ಲಿನ 7.56 ಟಿಎಂಸಿ ನೀರನ್ನು ಮಲಪ್ರಭಾ ನದಿಯ ಉಗಮ ಸ್ಥಾನಕ್ಕೆ ಸೇರಿಸುವ ಕುಡಿಯುವ ನೀರಿನ ಯೋಜನೆಯೇ ಮಹದಾಯಿ ಯೋಜನೆ. 2000ರಲ್ಲಿ ಆಡಳಿತಾತ್ಮಕವಾಗಿ ಅನುಮೋದನೆ ದೊರೆತ ಈ ಯೋಜನೆಗೆ, 2002ರಲ್ಲಿ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿತ್ತು. ಆದರೆ, ಗೋವಾ ಸರ್ಕಾರ ತಕರಾರು ತೆಗೆದ ಕಾರಣ ಕೇಂದ್ರ ಸರ್ಕಾರವೇ ತಡೆಯಾಜ್ಞೆ ನೀಡಿತ್ತು. ಬಳಿಕ ರಾಜ್ಯದಲ್ಲಿ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದ ಸಂದರ್ಭದಲ್ಲಿ ಯೋಜನೆ ಚುರುಕು ಪಡೆದುಕೊಂಡಿತ್ತು. ಕೊನೆಗೆ ಪ್ರಕರಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತು. ಸುಪ್ರೀಂ ಸೂಚನೆಯಂತೆ ಕರ್ನಾಟಕ ಸರ್ಕಾರ, ಮಹದಾಯಿಗೆ ನಿರ್ಮಿಸಿದ್ದ ನಾಲೆಗೆ ಅಡ್ಡಗೋಡೆ ನಿರ್ಮಿಸಿತ್ತು. ಈಗಲೂ ಆ ತಡೆಗೋಡೆ ಆಗೇ ಇದೆ.

ನ್ಯಾಯಾಧಿಕರಣ ರಚನೆ: ಈ ನಡುವೆ ಅಂತಾರಾಜ್ಯ ಜಲವಾದವಾದ ಕಾರಣ ಇದನ್ನು ಬಗೆಹರಿಸಲು ಕೇಂದ್ರ ಸರ್ಕಾರ ಮಹದಾಯಿ ನ್ಯಾಯಾಧಿಕರಣವನ್ನು ರಚಿಸಿತು. ನ್ಯಾಯಾಧಿಕರಣವು 2016ರಲ್ಲಿ ಮೂರು ರಾಜ್ಯಗಳ ಸಿಎಂಗಳು ಸೌಹಾರ್ದಯುತವಾಗಿ ವಾದವನ್ನು ಬಗೆಹರಿಸಿಕೊಳ್ಳಬಹುದು ಎಂಬ ಸಲಹೆಯನ್ನು ನೀಡಿತು. ಈ ಕಾರಣಕ್ಕಾಗಿ ಒಂದು ಬಾರಿ ಸರ್ವಪಕ್ಷ ನಿಯೋಗ ಪ್ರಧಾನಿ ಮಂತ್ರಿಗಳ ಬಳಿಯೂ ತೆರಳಿದ್ದುಂಟು. ಪ್ರಧಾನಮಂತ್ರಿಗಳು ನೀವು ನಿಮ್ಮ ಪಕ್ಷದ ಮುಖಂಡರನ್ನು ಒಪ್ಪಿಸಿಕೊಂಡು ಬನ್ನಿ ಎಂದು ಸಲಹೆ ನೀಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದಾಯಿತಲ್ಲದೇ, ಕಾಂಗ್ರೆಸ್‌-ಬಿಜೆಪಿ- ಜೆಡಿಎಸ್‌ಗಳ ನಡುವೆ ಕೆಸರೆರಚಾಟಕ್ಕೆ ಹಾದಿ ಮಾಡಿಕೊಟ್ಟಿತು.

ಅಸ್ತ್ರ-ಬ್ರಹ್ಮಾಸ್ತ್ರ: ಇವುಗಳ ಮಧ್ಯೆಯೇ ಗೋವಾದಲ್ಲಿ ಚುನಾವಣೆ, ಮಾಜಿ ಸಿಎಂ ಶೆಟ್ಟರ್‌ ಮನೆ ಮುಂದೆ ಧರಣಿ, ಡಿ.15ರೊಳಗೆ ನೀರು ತರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೊಟ್ಟಮಾತು, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ಸಭೆ, ಗೋವಾ ಸಿಎಂ ಯಡಿಯೂರಪ್ಪಗೆ ಬರೆದ ಪತ್ರ, ಅದನ್ನು ಬಿಜೆಪಿ ಪರಿವರ್ತನಾ ರಾರ‍ಯಲಿಯಲ್ಲಿ ಓದಿದ್ದು, ಅದನ್ನು ನಂಬದ ರೈತರಿಂದ ಬಿಜೆಪಿ ಕಚೇರಿಯೆದುರು ಧರಣಿ ನಡೆಸಿದ್ದು... ಹೀಗೆ ಒಂದರ ಮೇಲೆ ಒಂದರಂತೆ ಈ ವಿಷಯವಾಗಿ ರಾಜಕಾರಣ ಬೆಳೆಯುತ್ತಲೆ ಹೋಯಿತೇ ವಿನಃ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ.

ತೀರ್ಪಿನತ್ತ ಚಿತ್ತ: ಈ ಎಲ್ಲ ಬೆಳವಣಿಗೆಗಳ ನಡುವೆಯೇ ನ್ಯಾಯಾಧಿಕರಣ ತನ್ನ ಅಂತಿಮ ವಿಚಾರಣೆಯನ್ನು ಫೆ.22ರಿಂದ ಆರಂಭಿಸಿತು. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳೆಲ್ಲ ತಮ್ಮ ವಾದವಾದವನ್ನು ಮಂಡಿಸಿವೆ. ನ್ಯಾಯಾಧಿಕರಣವೂ ಇಲ್ಲಿನ ಹೋರಾಟದ ಬಿಸಿ ನೋಡಿಯೇನೋ ಶನಿವಾರ, ಭಾನುವಾರ ಎನ್ನದೇ ವಿಚಾರಣೆಯನ್ನೂ ಪೂರ್ಣ ಮುಗಿಸಿದೆ. ಇದೀಗ ತೀರ್ಪು ಕೊಡುವುದೊಂದು ಮಾತ್ರ ಬಾಕಿ ಉಳಿದಿದೆ.

ಚುನಾವಣಾ ನಿಲುವು ಬಗ್ಗೆ ಇಂದು ನಿರ್ಧಾರ

ಹೋರಾಟ ಸಾವಿರ ದಿನಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ರೈತಸೇನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ್ದು, ‘ನಮ್ಮ ಸಂಘಟನೆಯ ಯಾವುದೇ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಒಂದೊಮ್ಮೆ ಯಾರಾದರೂ ಸ್ಪರ್ಧಿಸಿದರೆ, ಅವರಿಗೂ ನಮ್ಮ ಸಂಘಟನೆಗೂ ಯಾವುದೇ ಸಂಬಂಧವಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

‘ಇನ್ನು ಚುನಾವಣೆಯಲ್ಲಿ ಮತದಾನ ಮಾಡಬೇಕೋ ಅಥವಾ ಮಾಡಬಾರದೋ ಅಥವಾ ಚುನಾವಣೆಯನ್ನು ಬಹಿಷ್ಕರಿಸಬೇಕೋ ಎಂಬುದನ್ನು ಮಂಗಳವಾರ ನಿರ್ಧರಿಸಲಿದ್ದೇವೆ. ಆದರೆ, ನಮ್ಮ ನಿಲುವೇನು ಎಂಬುದನ್ನು ಈಗಲೇ ಹೇಳುವುದಿಲ್ಲ. ಈ ಚುನಾವಣೆಯಲ್ಲಿ ಮೂರು ಪಕ್ಷಗಳಿಗೆ ತಕ್ಕಪಾಠ ಕಲಿಸುವುದು ಗ್ಯಾರಂಟಿ. ಯಾವ ರೀತಿ ಎಂಬುದನ್ನು ಸದ್ಯಕ್ಕೆ ಬಹಿರಂಗಗೊಳಿಸುವುದಿಲ್ಲ. ಏಕೆಂದರೆ ನಮ್ಮ ಒಗ್ಗಟ್ಟನ್ನು ಮುರಿಯಬೇಕೆಂದು ಸಾಕಷ್ಟುರಾಜಕಾರಣಿಗಳು ಷಡ್ಯಂತ್ರ ಮಾಡುತ್ತಿದ್ದಾರೆ’ ಎಂದಿದ್ದಾರೆ.

loader