ನವದೆಹಲಿ[ಡಿ.04]: ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿರುವ ಮತ್ತು ಅವರ ಸಂಶೋಧನೆಗಳಿಂದ ಸಮಾಜದ ಮೇಲೆ ಪರಿಣಾಮ ಉಂಟಾಗಿರುವ ವಿಶ್ವದ 4000 ಪ್ರಭಾವಿ ವಿಜ್ಞಾನಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ‘ಭಾರತ ರತ್ನ’ ಪುರಸ್ಕೃತ ಕನ್ನಡಿಗ ಸಿಎನ್‌ಆರ್‌. ರಾವ್‌ ಸೇರಿದಂತೆ 10 ಭಾರತೀಯ ವಿಜ್ಞಾನಿಗಳು ಸ್ಥಾನ ಪಡೆದಿದ್ದಾರೆ.

ಪಟ್ಟಿಯಲ್ಲಿ ಸ್ಥಾನ ಪಡೆದ ಇತರೆ ಭಾರತೀಯರೆಂದರೆ ದೆಹಲಿ ಜೆಎನ್‌ಯುದ ದಿನೇಶ್‌ ಮೋಹನ್‌, ಐಐಟಿ ಕಾನ್ಪುರದ ಅವಿನಾಶ್‌ ಅಗರ್‌ವಾಲ್‌, ಸಿಎಸ್‌ಐಆರ್‌ನ ಅಶೋಕ್‌ ಪಾಂಡೆ, ಎನ್‌ಐಟಿ ಭೋಪಾಲ್‌ನ ಅಲೋಕ್‌ ಮಿತ್ತಲ್‌ ಮತ್ತು ಜ್ಯೋತಿ ಮಿತ್ತಲ್‌, ಐಐಟಿ ಮದ್ರಾಸ್‌ನ ರಜನೀಶ್‌ ಕುಮಾರ್‌, ಭುವನೇಶ್ವರದ ಲೈಫ್‌ ಸೈನ್ಸ್‌ಸನ ಸಂಜೀಬ್‌ ಸಾಹು, ಹೈದ್ರಾಬಾದ್‌ನ ರಾಜೀವ್‌ ವರ್ಷಣೆ, ಕೊಯಮತ್ತೂರಿನ ಶಕ್ತಿವೇಲ್‌ ರತ್ನಸ್ವಾಮಿ.

ಕ್ಲಾರಿವೇಟ್‌ ಅನಾಲೆಟಿಕ್ಸ್‌ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ 60 ದೇಶಗಳ ವಿಜ್ಞಾನಿಗಳಿದ್ದು, ಈ ಪೈಕಿ ಹಾರ್ವಡ್‌ ವಿವಿಯ 186 ವಿಜ್ಞಾನಿಗಳು ಸ್ಥಾನ ಪಡೆದಿದ್ದಾರೆ. ಇನ್ನು ದೇಶಗಳ ಪಟ್ಟಿಯಲ್ಲಿ ಅಮೆರಿಕ (2639), ಬ್ರಿಟನ್‌ (546), ಚೀನಾ (482), ಜರ್ಮನಿ (356)ಮತ್ತು ಆಸ್ಪ್ರೇಲಿಯಾ (245) ಟಾಪ್‌ 5 ಸ್ಥಾನ ಪಡೆದಿವೆ.