Asianet Suvarna News Asianet Suvarna News

2 ದಿನದಲ್ಲಿ ರಾಜ್ಯದಲ್ಲಿ ಸಾಲಮನ್ನಾ ಆಗಿಲ್ಲವೆಂದು 10 ರೈತರ ಆತ್ಮಹತ್ಯೆ

ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ಕರ್ನಾಟಕ ಬಂದ್‌ ಆಚರಿಸಿದ ಸಂದರ್ಭದಲ್ಲಿ ಸಾಲಬಾಧೆಯಿಂದ ನೊಂದು ಸೋಮವಾರ ಮತ್ತೆ ರಾಜ್ಯದ 6 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರವೂ ಸಾಲ ಶೂಲದಿಂದಾಗಿ 4 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರೊಂದಿಗೆ ಕಳೆದ 2 ದಿನದಲ್ಲಿ ರಾಜ್ಯದ 10 ರೈತರು ಪ್ರಾಣ ತ್ಯಜಿಸಿದಂತಾಗಿದೆ.
 

10 Farmers Commit Suicide In 2 Days

ಬೆಂಗಳೂರು :  ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ಕರ್ನಾಟಕ ಬಂದ್‌ ಆಚರಿಸಿದ ಸಂದರ್ಭದಲ್ಲಿ ಸಾಲಬಾಧೆಯಿಂದ ನೊಂದು ಸೋಮವಾರ ಮತ್ತೆ ರಾಜ್ಯದ 6 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರವೂ ಸಾಲ ಶೂಲದಿಂದಾಗಿ 4 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರೊಂದಿಗೆ ಕಳೆದ 2 ದಿನದಲ್ಲಿ ರಾಜ್ಯದ 10 ರೈತರು ಪ್ರಾಣ ತ್ಯಜಿಸಿದಂತಾಗಿದೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಚಿಕ್ಕಕಲ್ಬಾಳ್‌ ಗ್ರಾಮದ ಪೆರೇಗೌಡ (52), ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕಿನ ಬೈಲಾಪುರ ಗ್ರಾಮದ ಕಾಳೇಗೌಡ(60), ರಾಯಚೂರು ಜಿಲ್ಲೆ ಲಿಂಗಸ್ಗೂರು ತಾಲೂಕಿನ ಅನ್ವರಿ ಗ್ರಾಮದ ಆದಪ್ಪ ಅಮರಪ್ಪ ಬಾವಿ(52), ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಲಕ್ಷ್ಮೇಪುರದ ಆನಂದ್‌ರಾವ್‌ ಬಡಿಗೇರ(54), ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಾಲೋಹಳ್ಳಿಯ ಬಸವಂತಪ್ಪ ನರಸಾಪುರ(49) ಹಾಗೂ ಬಳ್ಳಾರಿ ಜಿಲ್ಲೆ ಕೂಡ್ಲಿಗೆ ತಾಲೂಕಿನ ಖಾನಾಹೊಸಹಳ್ಳಿಯ ದೊಡ್ಡಣ್ಣ(23) ಸೋಮವಾರ ಆತ್ಮಹತ್ಯೆ ಮಾಡಿಕೊಂಡ ರೈತರು.

ರಾಮನಗರ ಜಿಲ್ಲೆಯ ರೈತ ಪರೇಗೌಡ ಅವರು ರೇಷ್ಮೆ ಬೆಳೆದಿದ್ದು, ಸಹಕಾರ ಸಂಘದಲ್ಲಿ .1 ಲಕ್ಷ ಸೇರಿ ವಿವಿಧೆಡೆ .4 ಲಕ್ಷ ಸಾಲಮಾಡಿದ್ದರು. ಮನೆಯಲ್ಲಿ ಯಾರೂ ಇಲ್ಲದಾಗ ನೇಣಿಗೆ ಶರಣಾಗಿದ್ದಾರೆ. ಮೈಸೂರು ಜಿಲ್ಲೆಯ ಕಾಳೇಗೌಡ ಅವರು, ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಸಹಕಾರ ಸಂಘದಲ್ಲಿ .2.50 ಲಕ್ಷ ಸಾಲ ಮಾಡಿದ್ದರು. ಇತ್ತೀಚೆಗೆ ಅವರ ಜಮೀನಿನಲ್ಲಿ ಬೆಳೆ ನಾಶವಾಗಿತ್ತು. ಸಾಲಬಾಧೆಯಿಂದ ನೊಂದು ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಯಚೂರು ಜಿಲ್ಲೆಯ ಆದಪ್ಪ ಅವರು, .6 ಲಕ್ಷ ಸಾಲ ಮಾಡಿಕೊಂಡಿದ್ದು, ತಮ್ಮ ಜಮೀನಿನಲ್ಲಿದ್ದ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಬಸವಂತಪ್ಪ ಅವರು, ಗ್ರಾಮೀಣ ವಿಕಾಸ ಬ್ಯಾಂಕ್‌ನಲ್ಲಿ .1.30 ಲಕ್ಷ ಸೇರಿ ವಿವಿಧೆಡೆ .4 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದರು.

ಸಾಲಗಾರರ ಕಿರುಕುಳದಿಂದ ಆತ್ಮಹತ್ಯೆ

ಆತ್ಮಹತ್ಯೆ ಮಾಡಿಕೊಂಡ ಐವರ ಪೈಕಿ ಯಾದಗಿರಿ ಜಿಲ್ಲೆಯ ರೈತ ಆನಂದ್‌ರಾವ್‌ ಅವರು .3 ಲಕ್ಷ ಸಾಲ ಮಾಡಿಕೊಂಡಿದ್ದು, ಸಾಲ ನೀಡಿದವರು ಅವರಿಗೆ ಬಡ್ಡಿ ಹಾಗೂ ಸಾಲಮರುಪಾವತಿ ಮಾಡುವಂತೆ ಒತ್ತಡ ಹೇರಿದ್ದರು. ಇದರಿಂದ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿನ್ನೆ ನಾಲ್ವರು ಆತ್ಮಹತ್ಯೆ:  ರಾಜ್ಯದಲ್ಲಿ ಭಾನುವಾರವಷ್ಟೇ ಸಾಲಬಾಧೆಯಿಂದ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳಗಾವಿ ಜಿಲ್ಲೆಯ ಚಂದನಹೊಸೂರು ಗ್ರಾಮದ ಸಿದ್ದಪ್ಪ ಪರಪ್ಪ ಬಸರಿ ಕಟ್ಟಿ(52), ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅಂಜಳ ಗ್ರಾಮದ ಹನುಮಂತರಾಯ(55), ಹಾವೇರಿ ಜಿಲ್ಲೆ ಕಳ್ಳಿಹಾಳ ಗ್ರಾಮದ ನಾಗಪ್ಪ ಬಸವಣ್ಣೇಪ್ಪ ಕೋರಿ(58) ಹಾಗೂ ಹಾಸನ ಜಿಲ್ಲೆ ಹಾಲೂರು ತಾಲೂಕಿನ ಎಚ್‌.ಎಂ.ಪುರ ಗ್ರಾಮದ ವಸಂತ(55) ಆತ್ಮಹತ್ಯೆ ಮಾಡಿಕೊಂಡವರು.

ಸಾಲಮನ್ನಾ ಮಾಡದ್ದಕ್ಕೆ ವಿಷ ಸೇವನೆ:  ಸಿದ್ದಪ್ಪ ಅವರು ಲಕ್ಷಾಂತರ ರು. ಸಾಲ ಮಾಡಿಕೊಂಡಿದ್ದು, ನೂತನ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದರೆ ಸಾಲಮನ್ನಾವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಸರ್ಕಾರ ಅಧಿಕಾರಕ್ಕೆ ಬಂದು ಮೂರ್ನಾಲ್ಕು ದಿನಗಳಾದರೂ ಸಾಲಮನ್ನಾ ಮಾಡದಿದ್ದರಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹನುಂತರಾಯ ಅವರು .8ಲಕ್ಷ, ನಾಗಪ್ಪ ಅವರು .4.6 ಲಕ್ಷ ಹಾಗೂ ವಸಂತ ಅವರು .4ಲಕ್ಷ ಸಾಲ ಮಾಡಿಕೊಂಡಿದ್ದರು. ಮೂವರು ಸಾಲ ಬಾಧೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

Follow Us:
Download App:
  • android
  • ios