ಬೆಂಗಳೂರು [ಆ.12]: ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿದ್ದರೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಕಣ್ಣುಮುಚ್ಚಿ ಕುಳಿತಿದ್ದಾರೆ. ನರೇಂದ್ರ ಮೋದಿಯವರು ಕೂಡಲೇ ಪ್ರವಾಹ ಸ್ಥಿತಿ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದ ಒಂದು ಲಕ್ಷ ಕೋಟಿ ರು.ಗಳಿಗೂ ಅಧಿಕ ಮೌಲ್ಯದ ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ತಕ್ಷಣದ ಪರಿಹಾರ ಕಾರ್ಯಗಳಿಗಾಗಿ 5 ಸಾವಿರ ಕೋಟಿ ರು. ಪರಿಹಾರ ಘೋಷಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌ ರಾಜ್ಯದ ಪ್ರವಾಹ ಸ್ಥಿತಿ ಗಮನಿಸಿದರೂ ಯಾವುದೇ ಘೋಷಣೆ ಮಾಡಿಲ್ಲ. 20ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಲ್ಲದೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಜಾನುವಾರುಗಳನ್ನೂ ರೈತರು ಕಳೆದುಕೊಂಡಿದ್ದಾರೆ. ರಾಜ್ಯದ ಶೇ.50ರಷ್ಟುಭಾಗ ಜಲಾವೃತವಾಗಿದ್ದು, ಪ್ರವಾಹದ ಇಂತಹ ಭೀಕರತೆಯನ್ನು ರಾಜ್ಯ ಹಿಂದೆಂದೂ ಕಂಡಿರಲಿಲ್ಲ. ರಸ್ತೆ, ಸೇತುವೆ, ರೈಲ್ವೆ ಹಳಿಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಹೀಗಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸದಿರುವುದು ಅಕ್ಷಮ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪರಿಹಾರ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಪದೇ ಪದೇ ಕೇಳಿಕೊಳ್ಳಲು ನಾವೇನೂ ಭಿಕ್ಷುಕರಲ್ಲ. ಕೇಂದ್ರ ಸರ್ಕಾರ ನಮಗೆ ದಾನವನ್ನೇನೂ ಕೊಡುತ್ತಿಲ್ಲ. ಹೀಗಾಗಿ ರಾಜ್ಯದ ನ್ಯಾಯಯುತ ಬೇಡಿಕೆಗೆ ಹಾಗೂ ಜನರ ಕಷ್ಟಕ್ಕೆ ಕೂಡಲೇ ಕೇಂದ್ರ ಸರ್ಕಾರ ಸ್ಪಂದಿಸಬೇಕು. ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದ ಒಂದು ಲಕ್ಷ ಕೋಟಿಗೂ ಅಧಿಕ ಮೌಲ್ಯದ ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ಹೇಳಿದರು.

ಮಲತಾಯಿ ಧೋರಣೆ ನಿಲ್ಲಲಿ:  ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಮಂತ್ರಿಗಳಾಗಿದ್ದ ಮನಮೋಹನ್‌ ಸಿಂಗ್‌ ಹಾಗೂ ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿಯವರು ರಾಜ್ಯಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿ 1,600 ಕೋಟಿ ರು. ಪರಿಹಾರ ಘೋಷಿಸಿದ್ದರು. ಪ್ರಸ್ತುತ ನಾಮ್‌ಕೆವಾಸ್ತೆ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುವುದಾಗಿ ಹೇಳಿದೆ ಎಂದು ಇದೇ ವೇಳೆ ಸಿದ್ದರಾಮಯ್ಯ ಹರಿಹಾಯ್ದರು.

ಕೇಂದ್ರ ಸರ್ಕಾರವು ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಮಾಡುವುದನ್ನು ನಿಲ್ಲಿಸಬೇಕು. ಅದರಲ್ಲೂ ಇಂತಹ ಕೆಟ್ಟಪರಿಸ್ಥಿತಿಯಲ್ಲಿ ಈ ರೀತಿ ನಡೆದುಕೊಳ್ಳಬಾರದು. 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ ರಾಜ್ಯದ ಜನತೆ ಮಾಡಿರುವ ತಪ್ಪಾದರೂ ಏನು ಎಂದು ಖಾರವಾಗಿ ಪ್ರಶ್ನಿಸಿದರು.

ಗದಗದಲ್ಲಿ ಪ್ರವಾಹ ಸಂತ್ರಸ್ತರ ಮೇಲೆ ಲಾಠಿ ಪ್ರಹಾರ ಮಾಡಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ಷಮೆ ಯಾಚಿಸಬೇಕು. ಯಡಿಯೂರಪ್ಪ ಅವರು ಏಕ ಪಾತ್ರಾಭಿನಯದ ಮೂಲಕ ಪರಿಸ್ಥಿತಿ ಎದುರಿಸುವುದು ಸುಲಭವಲ್ಲ. 20 ಮಂದಿಗೆ ಸಚಿವ ಸ್ಥಾನವನ್ನು ಕೊಟ್ಟು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಉಸ್ತುವಾರಿಗಳನ್ನಾಗಿ ನೇಮಕ ಮಾಡಬೇಕು. ಇದರಿಂದ ಪರಿಹಾರ ಕಾರ್ಯಕ್ರಮಗಳು ಚುರುಕಾಗುತ್ತವೆ. ಸಚಿವರಿಲ್ಲದ ಕಾರಣ ಈಗ ಪರಿಹಾರ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂದು ಸಲಹೆ ನೀಡಿದರು.