ಹಾಸನದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಕನ್ನ ಹಾಕಿದ್ದಾರೆ. ಹಾಸನ ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಹಾಸನ (ಆ.23): ನಗರದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕದೀಮರು ಮನೆಗೆ ಕನ್ನ ಹಾಕಿ ಹಾಕಿರುವ ಘಟನೆ ಹಾಸನ ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇತ್ತೀಚಿಗೆ ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳ್ಳರ ಅಟ್ಟಹಾಸ ಹೆಚ್ಚಾಗಿದ್ದು, ಸದಾಶಿವ ನಗರದ ಖಾಸಗಿ ಬ್ಯಾಂಕ್ ಉದ್ಯೋಗಿ ನವೀನ್ ಮನೆಯಲ್ಲಿ 1 ಕೆಜಿ ಚಿನ್ನ , 15 ಲಕ್ಷ ರೂ.ಗೂ ಅಧಿಕ ನಗದು ಕಳ್ಳತನವಾಗಿದೆ. ವರ ಮಹಾಲಕ್ಷ್ಮಿ ಹಬ್ಬಕ್ಕೆಂದು ಬ್ಯಾಂಕ್ ಲಾಕರ್‌ನಿಂದ ಕೋಟ್ಯಾಂತರ ಬೆಲೆ ಬಾಳೋ ಚಿನ್ನ ಬೆಳ್ಳಿ ಆಭರಣ‌ಗನ್ನ ನವೀನ್‌ ತಂದು ಮನೆಯಲ್ಲಿಟ್ಟುಕೊಂಡಿದ್ದರು. ಗುರುವಾರ ರಾತ್ರಿ ಮನೆಗೆ ಬೀಗ ಹಾಕಿ ಹೊರ ಹೋಗಿದ್ದ ನವೀನ್ ಕುಟುಂಬ, ಇಂದು ಬೆಳಗ್ಗೆ 8 ಗಂಟೆಗೆ ಮನೆಗೆ ಬಂದು ನೋಡಿದಾಗ ಕೃತ್ಯ ಬೆಳಕಿದೆ ಬಂದಿದೆ. ಗುರುವಾರದಿಂದ ನವೀನ್ ಕುಟುಂಬ ತಮ್ಮ ಪತ್ನಿಯ ತಾಯಿ ಮನೆಯಲ್ಲೇ ಉಳಿದುಕೊಂಡಿದ್ದರು. ಆದರೆ, ಈ ನವೀನ್ ಹಾಲಿ ವಾಸವಿರುವ ಮನೆಯ ಎದುರಿನಲ್ಲೆ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಈ ಮನೆಯ ಕಾಮಗಾರಿ ಸಲುವಾಗಿಯೇ ನಗದು ಹಣವನ್ನ ಬ್ಯಾಂಕ್‌ನಿಂದ ತಂದಿಟ್ಟಿದ್ದರು. ಮೊನ್ನೆ ಗುರುವಾರ ರಾತ್ರಿ ಒಂದು ದಿನ ನವೀನ್‌ ದಂಪತಿ ಮನೆಯಲಿಲ್ಲದನ್ನ ಗಮನಿಸಿದ ಕದೀಮರು ಕಳ್ಳತನ ಎಸಗಿದ್ದಾರೆ.

ಮನೆ ಕಳ್ಳತನ ಪ್ರಕರಣಗಳು ಸ್ಥಳೀಯರಲ್ಲಿ ಆತಂಕವನ್ನ ಮೂಡಿಸಿದೆ. ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಹಾಸನ ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.