Asianet Suvarna News Asianet Suvarna News

ಕೊಡಗಿಗೆ 1 ಕೋಟಿ ಜನರಿಕ್ ಔಷಧಿ ರವಾನೆ

ಸಾಂಕ್ರಾಮಿಕ ರೋಗಗಳ ಸಮಸ್ಯೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೊಡಗು ಜನತೆಗೆ ಸೂಕ್ತ ಔಷಧಿಗಳ ಅಗತ್ಯ ಇರುವ ಕಾರಣ ಒಂದು ಕೋಟಿ ರು. ಮೌಲ್ಯದ ಜನರಿಕ್ ಔಷಧಿಗಳನ್ನು ಕಳುಹಿಸಿಕೊಡಲಾಗುವುದು ಎಂದು
ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದ್ದಾರೆ. 

1 crore Generic Medicine Supply To Kodagu
Author
Bengaluru, First Published Aug 22, 2018, 12:30 PM IST

ಬೆಂಗಳೂರು : ಮಳೆಯ ಪ್ರಮಾಣ ತಗ್ಗಿದ ಬಳಿಕ ಕೊಡಗು ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಸಮಸ್ಯೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜನತೆಗೆ ಸೂಕ್ತ ಔಷಧಿಗಳ ಅಗತ್ಯ ಇರುವ ಕಾರಣ ಒಂದು ಕೋಟಿ ರು. ಮೌಲ್ಯದ ಜನರಿಕ್ ಔಷಧಿಗಳನ್ನು ಕಳುಹಿಸಿಕೊಡಲಾಗುವುದು ಎಂದು
ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದ್ದಾರೆ. 

ಸಂತ್ರಸ್ತರ ನೆರವಿಗಾಗಿ ಸಂಗ್ರಹಿಸಿದ್ದ ಪರಿಹಾರ ಸಾಮಗ್ರಿಗಳನ್ನು ಹೊತ್ತ 15 ಕ್ಕೂ ಹೆಚ್ಚು ವಾಹನಗಳಿಗೆ ಮಂಗಳವಾರ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಸಿರು ನಿಶಾನೆ ತೋರಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವ ನೆರೆ ಅನಾಹುತವನ್ನು ಕುಟುಂಬದ ಸಮಸ್ಯೆ ಬಗೆಹರಿದಂತೆ ಸಮರೋಪಾದಿಯಲ್ಲಿ ನಿವಾರಣೆ ಮಾಡಬೇಕು. 

ಕೊಡಗಿನ ಜನತೆಗೆ ಸ್ಪಂದಿಸುತ್ತಿರುವುದು ನೆರವು ಅಲ್ಲ. ಬದಲಿಗೆ ಅದು ನಮ್ಮೆಲ್ಲರ ಕರ್ತವ್ಯ. ಮಳೆ ಬಂದು ಒಂದು ರೀತಿಯಲ್ಲಿ ಅನಾಹುತವಾದರೆ, ಮಳೆ ನಿಂತ ಬಳಿಕ ಮತ್ತೊಂದು ರೀತಿಯ ಅವಾಂತರವಾಗಲಿದೆ. ಸಾಂಕ್ರಾಮಿಕ ರೋಗಗಳ ಸಮಸ್ಯೆ ಎದುರಾಗುವ ಸಾಧ್ಯತೆ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಜನರಿಕ್ ಔಷಧಿಗಳನ್ನು ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಸಂತ್ರಸ್ತರಿಗೆ ಕಳುಹಿಸಿಕೊಡುವ ಜನರಿಕ್ ಔಷಧಿಯ ಮೌಲ್ಯವು ಮಾರುಕಟ್ಟೆಯ ದರದಲ್ಲಿ ಮೂರು ಕೋಟಿ ರು. ಆಗಲಿದೆ. ಜನರಿಕ್ ಔಷಧಿವುಳ್ಳ ಎರಡು ಲಾರಿ ಬುಧವಾರದಂದು ಬೆಂಗಳೂರಿನಿಂದ ತೆರಳಲಿದೆ. ಒಂದು ಕೇರಳದತ್ತ ಸಾಗಿದರೆ, ಮತ್ತೊಂದು ಕೊಡಗಿಗೆ ಹೋಗಲಿದೆ. ತಾವು ಸೇರಿದಂತೆ ಉಪ ಮುಖ್ಯಮಂತ್ರಿ ಆರ್. ಅಶೋಕ್ ಸೇರಿದಂತೆ ಇತರೆ ಕೆಲವು ನಾಯಕರು ಕೊಡಗಿಗೆ ತೆರಳಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಪ್ರಯತ್ನ ಮಾಡಲಾಗು ವುದು. ಇದು ಕೊಡಗು ಜಿಲ್ಲೆಗೆ ಸಲ್ಲಿಸುವ ಅಳಿಲು ಸೇವೆ ಎಂದು ಅಭಿಪ್ರಾಯಪಟ್ಟರು.

ಕೇರಳಕ್ಕೆ ಭೇಟಿ ನೀಡಿ ಕೊಡಗಿಗೆ ಭೇಟಿ ನೀಡದ ಪ್ರಧಾನಿ ನರೇಂದ್ರ ಮೋದಿ ನಡೆಗೆ ಪ್ರತಿಪಕ್ಷಗಳು ಟೀಕೆ ಮಾಡುತ್ತಿರುವುದು   ಸರಿಯಲ್ಲ. ಕೊಡಗಿನ ಬಗ್ಗೆಯೂ ಸಹ ಮೋದಿ ಅವರು ಕಾಳಜಿ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಸಂಸ್ಕಾರ ನಂತರ ಕೇರಳಕ್ಕೆ ಭೇಟಿ ನೀಡಲಾಗಿದೆ. ಇಡೀ ರಾಜ್ಯವೇ ಮಳೆಯಿಂದ ತತ್ತರಿಸಿದೆ. ಹೀಗಾಗಿ ಕೇರಳಕ್ಕೆ ಭೇಟಿ ನೀಡಿದ್ದರು. ಅಲ್ಲದೇ, ಅನ್ಯ ಕಾರ್ಯಕ್ರಮ ನಿಮಿತ್ತ ಕೊಡಗಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಈ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ಕೊಡಗು ಜಿಲ್ಲೆಗೆ ವಿಶೇಷ ನೀಡುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ಇದೆ. ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಾಣ ಮಾಡಲು ಹಂತ ಹಂತವಾಗಿ ಕ್ರಮ ಕೈಗೊಳ್ಳಬೇಕಿದೆ. ಜೀವ ರಕ್ಷಣೆ, ಪರಿಹಾರ ಕಾರ್ಯಗಳು ಭರದಿಂದ ಸಾಗಿದೆ. ಎರಡನೇ ಹಂತದ ಕಾರ್ಯಗಳನ್ನು ಆರಂಭಿಸಬೇಕಾದ ಅಗತ್ಯ ಇದ್ದು, ಪ್ರತಿಯೊಬ್ಬರು ನೆರವು ನೀಡಲು ಮುಂದಾಗಬೇಕು ಎಂದರು.  

Follow Us:
Download App:
  • android
  • ios