ಬೆಂಗಳೂರು :  ಎಟಿಎಂ ಕೇಂದ್ರಕ್ಕೆ ತುಂಬುವ ಸುಮಾರು 1 ಕೋಟಿಯನ್ನು ಸಿಬ್ಬಂದಿಯೇ ಕಳವು ಮಾಡಿಕೊಂಡು ಹೋಗಿರುವ ಘಟನೆ ಆಡುಗೋಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಡುಗೋಡಿಯ ನಿವಾಸಿ ಸೆಕ್ಯೂರ್‌ ವ್ಯಾಲ್ಯೂ ಕಂಪನಿ ಕಸ್ಟೋಡಿಯನ್‌ ಕಿಶೋರ್‌ ಕುಮಾರ್‌ (28) ಹಾಗೂ ಈತನ ಸ್ನೇಹಿತ ಹಣದೊಂದಿಗೆ ಪರಾರಿಯಾಗಿದ್ದು, ಕಂಪನಿಯ ಮ್ಯಾನೇಜರ್‌ ರಾಜು ಎಂಬುವವರು ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಸೆಕ್ಯೂರ್‌ ವ್ಯಾಲ್ಯೂ ಎಟಿಎಂ ಕೇಂದ್ರಗಳಿಗೆ ಹಣ ತುಂಬುವ ಕೆಲಸ ಮಾಡುತ್ತಿದೆ. ಈ ಕಂಪನಿಯಲ್ಲಿ ಕಿಶೋರ್‌ ಕಸ್ಟೋಡಿಯನ್‌ ಆಗಿದ್ದು, ರೂಟ್‌ ಸಂಖ್ಯೆ-1ರಲ್ಲಿ ಕೆಲಸ ಮಾಡುತ್ತಿದ್ದ. ಮೇ 1ರಂದು ಕೆಲವು ಬ್ಯಾಂಕುಗಳಿಗೆ ಹಣ ತುಂಬುವ ಕೆಲಸ ಮಾಡಿದ್ದ. ಆದರೆ ಮೇ 2ರಂದು ಏಕಾಏಕಿ ಕೆಲಸಕ್ಕೆ ಗೈರಾಗಿದ್ದ. ಈ ಹಿನ್ನೆಲೆಯಲ್ಲಿ ಇತರೆ ಕಸ್ಟೋಡಿಯನ್‌ಗಳಾದ ಸಮೀರ್‌ ಮತ್ತು ನವೀನ್‌ ಅವರನ್ನು ರೂಟ್‌ ಸಂಖ್ಯೆ-1ರಲ್ಲಿ ಕೆಲಸಕ್ಕೆ ತೆರಳಿದ್ದರು. ಸಿಬ್ಬಂದಿ ಲ್ಯಾಂಗ್‌ಫೋರ್ಡ್‌ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್‌ ಎಟಿಎಂ ಕೇಂದ್ರಕ್ಕೆ ಹಣ ತುಂಬಲು ಹೋಗಿದ್ದಾಗ ಎಟಿಎಂ ಕೇಂದ್ರದಿಂದ 47.83 ಲಕ್ಷ ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಅದೇ ರೀತಿ ರತ್ನಾಕರ ಸಹಕಾರ ಬ್ಯಾಂಕ್‌ ಎಟಿಎಂನಲ್ಲಿ 51.30 ಲಕ್ಷ ಲಪಟಾಯಿಸಿರುವುದು ಗಮನಕ್ಕೆ ಬಂದಿತ್ತು. ಈ ವಿಚಾರವನ್ನು ಸಿಬ್ಬಂದಿ ಮ್ಯಾನೇಜರ್‌ ರಾಜು ಗಮನಕ್ಕೆ ತಂದಿದ್ದರು. ಸೆಕ್ಯೂರಿಟಿ ವಾಲ್ಯೂ ಕಂಪನಿಯ ಸಿಬ್ಬಂದಿಯೇ ಹಣ ಲಪಟಾಯಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಆರೋಪಿ ಕಿಶೋರ್‌ ಕುಮಾರ್‌ ಮೊಬೈಲ್‌ ಕೂಡ ಸ್ವಿಚ್‌ಆಫ್‌ ಆಗಿತ್ತು. ಕೂಡಲೇ ಸಂಸ್ಥೆಯವರು ಎಟಿಎಂ ಕೇಂದ್ರದಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಕಿಶೋರ್‌ಕುಮಾರ್‌ ತನ್ನ ಸ್ನೇಹಿತನ ಜತೆ ಸೇರಿ 99.13 ಲಕ್ಷ ಲಪಟಾಯಿಸಿರುವುದು ಗೊತ್ತಾಗಿದೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದರು.