ಇಸ್ಲಾಮಾಬಾದ್(ಜು.26): ಹಿಂಸಾಚಾರದ ನಡುವೆಯೇ ಮುಗಿದ ಪಾಕಿಸ್ತಾನದ ಚುನಾವಣೆ ಹೊಸದೊಂದು ಇತಿಹಾಸ ಬರೆದಿರುವುದು ಸುಳ್ಳಲ್ಲ.  ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್ ಪಾಕಿಸ್ತಾನದ ನೂತನ ಪ್ರಧಾನಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. 

ಚುನಾವಣೆಯಲ್ಲಿ ತಮ್ಮ ಪಕ್ಷ ಜಯಭೇರಿ ಬಾರಿಸುತ್ತಿದ್ದಂತೇ ದೇಶವನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್‌ ಖಾನ್‌, 22 ವರ್ಷಗಳ ಹೋರಾಟದ ನಂತರ ತಮಗೆ ಪಾಕಿಸ್ತಾನದ ಸೇವೆ ಮಾಡಲು ಅವಕಾಶ ದೊರೆತಿದೆ ಎಂದರು.

ಈ ವೇಳೆ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಇಮ್ರಾನ್ ಖಾನ್, ಸಮಸ್ಯೆ ಪರಿಹಾರಕ್ಕೆ ಮಾತುಕತೆಗೆ ಸಿದ್ಧ ಎಂದು ಸಂದೇಶ ರವಾನಿಸಿದ್ದಾರೆ. ಭಾರತದ ಜತೆ ಉತ್ತಮ ಸೌಹೌರ್ದ ಸಂಬಂಧ ಹೊಂದುವುದು ತಮ್ಮ ಪ್ರಮುಖ ಆದ್ಯತೆ ಎಂದಿರುವ ಇಮ್ರಾನ್, ಉಭಯ ದೇಶಗಳ ನಡುವಿನ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದರು. 

ಕೆಲವು ಮಾಧ್ಯಮಗಳಲ್ಲಿ ನನ್ನನ್ನು ಭಾರತ ವಿರೋಧಿ ಎಂಬಂತೆ ಬಿಂಬಿಸಲಾಗಿದೆ. ಇದು ಅವರ ನಕಾರಾತ್ಮಕ ಗುಣಗಳನ್ನು ತೋರಿಸುತ್ತದೆ. ದಕ್ಷಿಣ ಏಷ್ಯಾ ಖಂಡ ಅಭಿವೃದ್ಧಿಯಾಗಿರಬೇಕಾದರೆ ಬಡತನ ಮುಕ್ತ ದೇಶವಾಗಬೇಕು. ಇದಕ್ಕಾಗಿ ಉಭಯ ದೇಶಗಳು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಭಾರತ ಒಂದು ಹೆಜ್ಜೆ ಇಟ್ಟರೆ, ಪಾಕಿಸ್ತಾನ ಎರಡು ಹೆಜ್ಜೆ ಇಡಲಿದೆ ಎಂದು ಇಮ್ರಾನ್ ಮಾರ್ಮಿಕವಾಗಿ ಹೇಳಿದರು.