ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರ ಪತ್ನಿ ಸುನಂದಾ ಪುಷ್ಕರ್‌ ಅವರು ಸಾವಿಗೆ 9 ದಿನಗಳ ಮುನ್ನ ‘ನನಗೆ ಬದುಕುವ ಇಚ್ಛೆಯಿಲ್ಲ.. ಸಾವು ಬರಲಿ ಎಂದು ಬೇಡಿಕೊಳ್ಳುತ್ತಿದ್ದೇನೆ’ ಎಂದು ಪತಿಗೆ ಇ-ಮೇಲ್‌ ಕಳಿಸಿದ್ದರು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ನವದೆಹಲಿ : ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರ ಪತ್ನಿ ಸುನಂದಾ ಪುಷ್ಕರ್‌ ಅವರು ಸಾವಿಗೆ 9 ದಿನಗಳ ಮುನ್ನ ‘ನನಗೆ ಬದುಕುವ ಇಚ್ಛೆಯಿಲ್ಲ.. ಸಾವು ಬರಲಿ ಎಂದು ಬೇಡಿಕೊಳ್ಳುತ್ತಿದ್ದೇನೆ’ ಎಂದು ಪತಿಗೆ ಇ-ಮೇಲ್‌ ಕಳಿಸಿದ್ದರು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ನಾಲ್ಕೂವರೆ ವರ್ಷದ ಹಿಂದೆ ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ಸಂಭವಿಸಿದ್ದ ಸುನಂದಾ ಪುಷ್ಕರ್‌ ಅವರ ಅನುಮಾನಾಸ್ಪದ ಸಾವಿನ ತನಿಖೆ ನಡೆಸಿದ ಪೊಲೀಸರು ಕಳೆದ ಮೇ 14ರಂದು ತಿರುವನಂತಪುರಂ ಸಂಸದ ಶಶಿ ತರೂರ್‌ ಅವರನ್ನು ಈ ಪ್ರಕರಣದ ಏಕೈಕ ಆರೋಪಿಯನ್ನಾಗಿಸಿ ಕೋರ್ಟ್‌ಗೆ ದಾಖಲೆ ಸಲ್ಲಿಸಿದ್ದರು. ಆ ದಾಖಲೆಯಲ್ಲಿ, ಸುನಂದಾ ಪುಷ್ಕರ್‌ ಸಾವಿಗೂ ಮುನ್ನ ಶಶಿಗೆ ಕಳುಹಿಸಿದ್ದ ಇ-ಮೇಲನ್ನು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ್ದ ಪೋಸ್ಟ್‌ಗಳನ್ನು ಮರಣಪೂರ್ವ ಹೇಳಿಕೆಯನ್ನಾಗಿ ದಾಖಲಿಸಿಕೊಂಡಿದ್ದೇವೆ. ನ್ಯಾಯಾಲಯ ಕೂಡಾ ಇದನ್ನು ಮಾನ್ಯ ಮಾಡಬೇಕು ಎಂದು ಕೋರಿಕೆ ಸಲ್ಲಿಸಿದ್ದಾರೆ.

ಇನ್ನು, ಸುನಂದಾ ಅವರ ಆತ್ಮಹತ್ಯೆಗೆ ಶಶಿ ತರೂರ್‌ ಪ್ರಚೋದನೆ ನೀಡಿದ್ದಕ್ಕೆ ನಮ್ಮ ಬಳಿ ಸಾಕಷ್ಟುಸಾಕ್ಷ್ಯವಿದೆ. ಅವರನ್ನು ವಿಚಾರಣೆಗೆ ಕರೆಸಬೇಕು ಎಂದೂ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಈ ಕುರಿತು ಜೂ.5ರಂದು ಆದೇಶ ಹೊರಡಿಸುವುದಾಗಿ ಜಡ್ಜ್‌ ಸೋಮವಾರದ ವಿಚಾರಣೆ ವೇಳೆ ತಿಳಿಸಿದರು. ಸುನಂದಾ ಅವರ ಸಾವು ವಿಷದಿಂದ ಸಂಭವಿಸಿದೆ. ಅವರ ಕೋಣೆಯಲ್ಲಿ 27 ಮಾತ್ರೆಗಳು ಸಿಕ್ಕಿದ್ದವು. ಆದರೆ, ಎಷ್ಟುಮಾತ್ರೆಗಳನ್ನು ಆಕೆ ಸೇವಿಸಿದ್ದರು ಎಂಬುದು ಖಚಿತವಿಲ್ಲ ಎಂದು ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಸುನಂದಾ 2014ರ ಜ.17ರಂದು ದಕ್ಷಿಣ ದೆಹಲಿಯ ಐಷಾರಾಮಿ ಹೋಟೆಲ್‌ನಲ್ಲಿ ಸಾವನ್ನ$್ಪಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಘಟನೆ ಕುರಿತು ತನಿಖೆ ನಡೆಸಿದ್ದ ದೆಹಲಿ ಪೊಲೀಸರು, ಮರಣೋತ್ತರ ಪರೀಕ್ಷೆ ವೇಳೆ ಸುನಂದಾ ದೇಹದಲ್ಲಿ ಗಾಯದ ಗುರುತು ಪತ್ತೆಯಾಗಿತ್ತು. ಇದು ಸಾವಿಗೂ ಮುನ್ನ ಆಗಿದ್ದ ಗಾಯಗಳು ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದರು.