ಪ್ರಧಾನಿಗೆ ಭದ್ರತೆ ಹೆಚ್ಚಿಸಿದ ಕೇಂಧ್ರ ಗೃಹ ಇಲಾಖೆಜೀವ ಬೆದರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆಗೆ ಅಸ್ತುಸಚಿವರು, ಅಧಿಕಾರಿಗಳೂ ಮೋದಿ ಬಳಿ ಹೋಗುವಂತಿಲ್ಲಹೊಸ ನಿಯಮಾವಳಿಯಲ್ಲಿ ಇರುವ ಅಂಶಗಳೇನು?

ನವದೆಹಲಿ(ಜೂ.26): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಇಲಾಖೆ ಪ್ರಧಾನಿ ಅವರ ಭದ್ರತೆಗೆ ಹೊಸ ನೀತಿ ರೂಪಿಸಿದೆ. ಈ ಹೊಸ ನೀತಿ ನಿಯಮಾವಳಿಗಳ ಕುರಿತು ಎಲ್ಲಾ ರಾಜ್ಯ ಸರ್ಕಾರಗಳಿಗೂ ಸುತ್ತೋಲೆ ಕೂಡ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇಂದ್ರ ಗೃಹ ಇಲಾಖೆ ಹೊಸ ಭದ್ರತಾ ನಿಯಮಾವಳಿ ಪ್ರಕಾರ ಇನ್ನು ಮುಂದೆ ಯಾರೂ ಕೂಡ ಪ್ರಧಾನಿ ಸಮೀಪ ಬರುವಂತಿಲ್ಲ. ಈ ನಿಯಮದ ಅನ್ವಯ ಸಚಿವರು, ಅಧಿಕಾರಿಗಳು ಕೂಡ ಪರವಾನಿಗೆ ಇಲ್ಲದೇ ಅವರ ಬಳಿ ಹೋಗುವಂತಿಲ್ಲ. ಪ್ರಧಾನಿ ಅವರ ಭದ್ರತಾ ಸಿಬ್ಬಂದಿ ಪರವಾನಿಗೆ ಪಡೆದ ಮೇಲೆಯೇ ಸಚಿವರು ಮತ್ತು ಅಧಿಕಾರಿಗಳು ಅವರ ಬಳಿ ತೆರಳಬಹುದು ಎಂದು ನಿಯಮಾವಳಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಎಲ್ಲಾ ರಾಜ್ಯ ಸರ್ಕಾರಗಳ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಇಲಾಖೆ, ಪ್ರಧಾನಿ ಅವರಿಗೆ ಅನಾಮಿಕ ವ್ಯಕ್ತಿಗಳು ಅಥವಾ ಸಂಘಟನೆಗಳಿಂದ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಈ ಹೊಸ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದೆ. 2019 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಭಯೋತ್ಪಾದಕ ಸಂಘಟನೆಗಳು ಮೋದಿ ಅವರನ್ನು ಟಾರ್ಗೆಟ್ ಮಾಡಬಹುದು ಎಂದು ರಾಷ್ಟ್ರೀಯ ಭದ್ರತಾ ಮಂಡಳಿ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಕೇಂದ್ರ ಗೃಹ ಇಲಾಖೆ ಈ ಆದೇಶ ಹೊರಡಿಸಿದೆ.

ನಕ್ಸಲರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ ಮಾದರಿಯಲ್ಲೇ ಹತ್ಯೆಗೈಯ್ಯುವ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾದ ಬಳಿಕ, ಅವರ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಅವರ ಭದ್ರತೆಗೆ ನಿಯೋಜನೆಗೊಂಡಿರುವ ಎಸ್‌ಪಿಜಿ ಪರವಾನಿಗೆ ಇಲ್ಲದೇ ಯಾರೂ ಅವರ ಬಳಿ ಹೋಗದಂತೆ ನೋಡಿಕೊಳ್ಳಲು ಆದೇಶ ನೀಡಲಾಗಿದೆ.