ಮಡಿಕೇರಿ[ಜ.18]: ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಬೇಡಿಕೆಯ ನಟಿಯಾಗಿ ಬೆಳೆಯುತ್ತಿರುವ ‘ಕಿರಿಕ್‌ ಪಾರ್ಟಿ’ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರ ಕೊಡಗಿನ ವಿರಾಜಪೇಟೆ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಶುಕ್ರವಾರ ಮಧ್ಯಾಹ್ನ ಮುಕ್ತಾಯಗೊಂಡಿದೆ. ಬುಧವಾರ ಬೆಳಗ್ಗೆ 7 ಗಂಟೆಗೆ ಆಗಮಿಸಿದ್ದ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಸುಮಾರು 10 ಮಂದಿ ಐಟಿ ಅಧಿಕಾರಿಗಳು ಸತತ 29 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿದ ಬಳಿಕ ಗುರುವಾರ ಮಧ್ಯಾಹ್ನ 12 ಗಂಟೆಗೆ ವಾಪಸಾಗಿದ್ದಾರೆ. ಈ ವೇಳೆ ನಟಿ ರಶ್ಮಿಕಾ ಮತ್ತವರ ಕುಟುಂಬಸ್ಥರನ್ನು ವಿಚಾರಣೆ ನಡೆಸಿರುವ ಅಧಿಕಾರಿಗಳು ಮಹತ್ವದ ದಾಖಲೆಗಳ ಪ್ರತಿಗಳನ್ನು ಸಂಗ್ರಹಿಸಿದ್ದಾರೆ.

ಬುಧವಾರ ಬೆಳಗ್ಗೆ 7 ಗಂಟೆಗೆ ಎರಡು ಕಾರುಗಳಲ್ಲಿ ಆಗಮಿಸಿದ್ದ 10 ಅಧಿಕಾರಿಗಳ ತಂಡ ತಡರಾತ್ರಿ 2.30ರವರೆಗೂ ಮನೆಗಳಲ್ಲಿ ಶೋಧ ನಡೆಸಿ ರಶ್ಮಿಕಾ ಮಂದಣ್ಣ ತಂದೆ ಮದನ್‌ ಮಂದಣ್ಣ, ತಾಯಿ ಸುಮನ್‌ ಮಂದಣ್ಣ ಅವರನ್ನು ವಿವಿಧ ಆಯಾಮಗಳಲ್ಲಿ ಪ್ರಶ್ನಿಸುವ ಮೂಲಕ ಮಾಹಿತಿ ಸಂಗ್ರಹಿಸಿಕೊಂಡಿದ್ದರು.

ವಸತಿ ಶಾಲೆ ಆರಂಭಕ್ಕೆ ಸಿದ್ಧತೆ ನಡೆಸುತ್ತಿದ್ದ ರಶ್ಮಿಕಾ ತಂದೆ

ಬುಧವಾರ ಐಟಿ ದಾಳಿ ನಡೆದ ವೇಳೆ ಹೈದರಾಬಾದ್‌ನಲ್ಲಿದ್ದ ರಶ್ಮಿಕಾ ರಾತ್ರಿ 9.30ರ ಸುಮಾರಿಗೆ ವಿರಾಜಪೇಟೆಯ ಮನೆಗೆ ಆಗಮಿಸಿ ಅಧಿಕಾರಿಗಳ ವಿಚಾರಣೆಯನ್ನೆದುರಿಸಿದರು. ಅಧಿಕಾರಿಗಳು ಈ ವೇಳೆ ಸಿನಿಮಾ, ಜಾಹೀರಾತು ಕ್ಷೇತ್ರದ ಸಂಭಾವನೆ, ತಂದೆಯ ಜತೆಗೆ ಉದ್ಯಮ ನಡೆಸಲು ಹಾಕಿದ್ದ ಯೋಜನೆ ಬಗ್ಗೆ ತಡರಾತ್ರಿ 2.30ರವರೆಗೂ ಪ್ರಶ್ನೆಗಳನ್ನು ಕೇಳಿದರು. ಅಧಿಕಾರಿಗಳ ಅನುಮತಿಯೊಂದಿಗೇ ಶುಕ್ರವಾರ ಬೆಳಗ್ಗೆ 9.15ಕ್ಕೆ ರಶ್ಮಿಕಾ ಮನೆಯಿಂದ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದರು.

ರಶ್ಮಿಕಾ ತಂದೆಯ ದಾಖಲೆ ಪರಿಶೀಲನೆ:

ರಾತ್ರಿ ಮದನ್‌ ಮಂದಣ್ಣ ಅವರ ಮಾಲೀಕತ್ವದ ಸೆರೆನಿಟಿ ಹಾಲ್‌ನಲ್ಲಿ ತಂಗಿದ್ದ ಅಧಿಕಾರಿಗಳು ಬೆಳಗ್ಗೆ 9.30ರ ಸುಮಾರಿಗೆ ಮತ್ತೆ ರಶ್ಮಿಕಾ ಅವರ ಮನೆಗೆ ಆಗಮಿಸಿ ಕಾರ್ಯಾಚರಣೆ ಮುಂದುವರಿಸಿದರು. ಈ ವೇಳೆ ರಶ್ಮಿಕಾ ತಂದೆ ಮದನ್‌ ಮಂದಣ್ಣ ಮಾಲೀಕತ್ವದ ವಾಣಿಜ್ಯ ಚಟುವಟಿಕೆ ಹಾಗೂ ಇತರೆ ದಾಖಲೆಗಳನ್ನು ಪರಿಶೀಲನೆ ನಡೆಸಿದ ಐಟಿ ತಂಡ ಆ ವಿಚಾರವಾಗಿ ಮನೆಯವರ ಹೇಳಿಕೆಗಳನ್ನೂ ಪಡೆದುಕೊಂಡಿದೆ. ಹೊಸದಾಗಿ ಆರಂಭಿಸಲು ಉದ್ದೇಶಿಸಿದ್ದ ಉದ್ಯಮಕ್ಕೆ ಸಂಬಂಧಪಟ್ಟಹಾಗೆ ಸುದೀರ್ಘ ವಿಚಾರಣೆ ನಡೆದಿರುವುದಾಗಿ ತಿಳಿದುಬಂದಿದೆ.

ವಿಚಾರಣೆ ನಡೆದ ಪ್ರಕ್ರಿಯೆ ಹಾಗೂ ಸಂಗ್ರಹಿಸಿಕೊಂಡ ದಾಖಲೆಗಳ ಪ್ರತಿಗೆ ಮನೆಯವರ ಸಹಿ ಪಡೆದುಕೊಂಡಿದ್ದಾರೆ. ಬಳಿಕ ಮೂರು ಹ್ಯಾಂಡ್‌ ಬ್ಯಾಗ್‌, ಒಂದು ಸೂಟ್‌ಕೇಸ್‌, ಒಂದು ಬಾಕ್ಸ್‌ ಸಹಿತ ರಶ್ಮಿಕಾ ಮನೆಯಿಂದ ಅಧಿಕಾರಿಗಳು ತೆರಳಿದ್ದು, ಆ ಬ್ಯಾಗ್‌ಗಳಲ್ಲಿ ಏನೇನು ಇದ್ದವು ಎಂಬ ಬಗ್ಗೆ ವಿವರಗಳು ಲಭ್ಯವಾಗಿಲ್ಲ.

5 ಲಕ್ಷದಿಂದ ಶುರುವಾದ ರಶ್ಮಿಕಾ ಸಿನಿ ಜರ್ನಿ, ಈಗಿರುವ ಸಂಭಾವನೆ ಅಬ್ಬಬ್ಬಾ...!

ದಾಳಿ ಆಶ್ಚರ್ಯ ತಂದಿದೆ: ಸುಮನಾ ಮಂದಣ್ಣ

ರಶ್ಮಿಕಾ ಅವರಿಗೆ ಕೋಟಿ ರು.ಗಳ ಸಂಭಾವನೆ ಇದೆ ಎಂಬುದು ಶುದ್ಧ ಸುಳ್ಳಾಗಿದ್ದು, ಅವಳ ಚಿತ್ರ ಬದುಕಿನ ಬೆಳವಣಿಗೆಯ ಸಮಯದಲ್ಲಿ ಇಂತಹ ದಾಳಿ ನಮಗೆ ಬೇಸರ ತಂದಿದೆ ಎಂದು ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್‌ ತಿಳಿಸಿದ್ದಾರೆ. ಐಟಿ ದಾಳಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐಟಿ ದಾಳಿ ನಮಗೆ ಆಶ್ಚರ್ಯ ಆಗಿದ್ದು, ಯಾತಕ್ಕೋಸ್ಕರ ದಾಳಿ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ರಾಜಕೀಯ ಕಾರಣದಿಂದ ಈ ದಾಳಿಯಾಗಿದೆ ಎನ್ನುವುದು ಸರಿಯಲ್ಲ. ಅಧಿಕಾರಿಗಳು ಕೇಳಿರುವ ಪ್ರಶ್ನೆಗಳಿಗೆ ನಾವು ಸರಿಯಾದ ಉತ್ತರವನ್ನು ನೀಡಿದ್ದೇವೆ ಎಂದರು

ನಗು ಮುಖದಿಂದಲೇ ಹೊರಟ ರಶ್ಮಿಕಾ!

ಗುರುವಾರ ರಾತ್ರಿ 9.30ಕ್ಕೆ ಹೈದರಾಬಾದ್‌ನಿದಂ ವಿರಾಜಪೇಟೆಗೆ ಆಗಮಿಸಿದ ರಶ್ಮಿಕಾ ಅವರು ಮಾಧ್ಯಮದವರ ಕ್ಯಾಮೆರಾ ಕಣ್ಣಿಗೆ ಬೀಳದಂತೆ ಕಾರಿನಲ್ಲೇ ಮನೆ ಸೇರಿಕೊಂಡರು. ಶುಕ್ರವಾರ ಬೆಳಗ್ಗೆ 9.15ಕ್ಕೆ ತಂದೆಯ ಕಾಲಿಗೆ ನಮಸ್ಕರಿಸಿ ಹೈದರಾಬಾದ್‌ ಕಡೆಗೆ ಪ್ರಯಾಣ ಮುಂದುವರಿಸಿದರು. ವಿರಾಜಪೇಟೆಯ ತಮ್ಮ ಮನೆಯಿಂದ ಹೊರಡುವ ವೇಳೆ ನಗುಮುಖದಿಂದಲೇ ಮಾಧ್ಯಮಗಳತ್ತ ಕೈ ಬೀಸಿ ತೆರಳಿದರು.

ರಶ್ಮಿಕಾ ಮಂದಣ್ಣ ವಯಸ್ಸಿನ್ನೂ 23, ಸಂಪಾದನೆ ಮಾತ್ರ ಕೋಟಿ ಕೋಟಿ!