ಹುಣಸೂರು (ನ.07): ರಾಜ್ಯದಲ್ಲಿ ಶೀಘ್ರ ಉಪ ಚುನಾವಣೆ ನಡೆಯುತ್ತಿದೆ. ಉಪ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ವೇಳೆ ಶಾಸಕ ವಿಶ್ವನಾಥ್ ಅನರ್ಹತೆಯಿಂದ ತೆರವಾದ ಹುಣಸೂರು ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿದೆ. 

ಜೆಡಿಎಸ್ ನಿಂದ ಸ್ಥಳೀಯ ಅಭ್ಯರ್ಥಿಗೆ ಮಣೆಹಾಕುವ ಯತ್ನಗಳು ನಡೆಯುತ್ತಿದ್ದು, ಕಾಂಗ್ರೆಸ್ ಎಚ್.ಪಿ ಮಂಜುನಾಥ್ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ. ಇದರ ನಡುವೆ ಬಿಜೆಪಿ ಕೂಡ ಸ್ಥಳೀಯ ಅಭ್ಯರ್ಥಿಗೆ ಮಣೆ ಹಾಕುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. 

ಡಿಸೆಂಬರ್ 5ರಂದು ನಡೆಯುವ ಉಪ ಚುನಾವಣೆಗೆ ಹುಣಸೂರು ತಾಲೂಕು ಘಟಕದ ಅಧ್ಯಕ್ಷ ಯೋಗಾನಂದ್ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಇದೆ. ಯೋಗಾನಂದ್ ಹುಸಣೂರು ಬಿಜೆಪಿ ಸ್ಥಳೀಯ ಮುಖಂಡರಾಗಿದ್ದು, ಅನರ್ಹ ಶಾಸಕ ವಿಶ್ವನಾಥ್ ಬಿಜೆಪಿ ಟಿಕೆಟ್ ಬೇಡವೆಂದರೆ ಯೋಗಾನಂದ್ ಅವರೇ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ. 

ಉಪ ಚುನಾವಣೆ : ಹುಣಸೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಫಿಕ್ಸ್?..

ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದಲೂ ಅಭ್ಯ ದೊರೆತಿದೆ ಎನ್ನಲಾಗಿದೆ. ಈಗಾಗಲೇ ಈ ಸಂಬಂಧ ಒಂದು ಸುತ್ತಿನ ಮಾತುಕತೆಯೂ ಕೂಡ ನಡೆದಿದೆ. ಆದರೆ ಸ್ಥಳೀಯ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿರುವ ಯೋಗಾನಂದ್ ಅವರುದ್ದು, ವಿಶ್ವನಾಥ್ ಬಿಜೆಪಿ ಅಭ್ಯರ್ಥಿಯಾಗಲು ಬಿಜೆಪಿಗರಿಂದ ವಿರೋಧ ವ್ಯಕ್ತವಾಗುತ್ತಿದೆ.

ಅಲ್ಲದೇ ಸಿ.ಪಿ ಯೋಗೇಶ್ವರ್ ಅವರೂ ಹುಣಸೂರು ಕ್ಷೇತ್ರಕ್ಕೆ ಬೇಡ  ಎಂದು ಸ್ಥಳೀಯ ಮುಖಂಡರು ಹೇಳುತ್ತಿದ್ದು, ಈ ನಿಟ್ಟಿನಲ್ಲಿ ಹುಣಸೂರು ಕ್ಷೇತ್ರದಲ್ಲಿ ಯೋಗಾನಂದ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. 

ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ.