ಚಿತ್ರದಲ್ಲಿ ಬರುವ ವಿಲನ್‌ ಪಾತ್ರವೂ ಸೇರಿದಂತೆ ಗಡ್ಡ ಬಿಟ್ಟ ಎಲ್ಲಾ ರೌಡಿಗಳ ಪಾತ್ರಗಳು ‘ಕೆಜಿಎಫ್‌’, ಉಗ್ರಂ ಚಿತ್ರಗಳ ಡಾರ್ಕ್‌ ಮೋಡ್‌ ನೆನಪಿಸುತ್ತಾರೆ. ಮೇಕಿಂಗ್‌ ಕೂಡ ಅದೇ ರೀತಿ ಮಾಡುವುದಕ್ಕೆ ಪ್ರಯತ್ನಿಸಿರುವುದು ‘ಹಚ್ಚೆ’ ಚಿತ್ರದ ಮತ್ತೊಂದು ಹೈಲೈಟ್‌.

ಆರ್‌. ಕೇಶವಮೂರ್ತಿ

ಸಸ್ಪೆನ್ಸ್‌, ಥ್ರಿಲ್ಲರ್‌ ಚಿತ್ರಗಳಲ್ಲಿ ಇತಿಹಾಸವನ್ನು ತರುವುದು ಅಪರೂಪ. ಆದರೆ, ‘ಹಚ್ಚೆ’ ಇದಕ್ಕೆ ಭಿನ್ನವಾಗಿದೆ. ಕುತೂಹಲಕಾರಿಯಾದ ಸಸ್ಪೆನ್ಸ್‌ ನೆರಳಿನಲ್ಲಿ ಸಾಗುವ ಚಿತ್ರಕ್ಕೆ ಇತಿಹಾಸದ ಸ್ಪರ್ಶ ಕೊಡಲಾಗಿದೆ. ಆ ಇತಿಹಾಸ ಯಾವುದು, ಅಲ್ಲಿರುವ ರಹಸ್ಯ ಏನೆಂಬುದನ್ನು ತಿಳಿಯಬೇಕು ಎಂದರೆ ಸಿನಿಮಾ ನೋಡಬೇಕು. ಗ್ಯಾರೇಜಿನಲ್ಲಿ ಕೆಲಸ ಮಾಡುವ ಸೂರ್ಯ ಮತ್ತು ಕಾನೂನು ಬಾಹಿರ ವ್ಯವಹಾರಗಳಲ್ಲಿ ತೊಡಗಿರುವ ಉಗ್ರಸೇನನ ನಡುವಿನ ಕಾದಾಟದಲ್ಲಿ ಪೊಲೀಸು ವ್ಯವಸ್ಥೆ, ಡ್ರಗ್‌ ಮಾಫಿಯಾ ಸೇರಿದಂತೆ ಹಲವು ಕತ್ತಲ ಜಗತ್ತಿನ ರೆಕ್ಕೆಗಳು ಸದ್ದು ಮಾಡುತ್ತವೆ.

ಚಿತ್ರದಲ್ಲಿ ಬರುವ ವಿಲನ್‌ ಪಾತ್ರವೂ ಸೇರಿದಂತೆ ಗಡ್ಡ ಬಿಟ್ಟ ಎಲ್ಲಾ ರೌಡಿಗಳ ಪಾತ್ರಗಳು ‘ಕೆಜಿಎಫ್‌’, ಉಗ್ರಂ ಚಿತ್ರಗಳ ಡಾರ್ಕ್‌ ಮೋಡ್‌ ನೆನಪಿಸುತ್ತಾರೆ. ಮೇಕಿಂಗ್‌ ಕೂಡ ಅದೇ ರೀತಿ ಮಾಡುವುದಕ್ಕೆ ಪ್ರಯತ್ನಿಸಿರುವುದು ‘ಹಚ್ಚೆ’ ಚಿತ್ರದ ಮತ್ತೊಂದು ಹೈಲೈಟ್‌. ಈ ನಡುವೆ ಖಳನಾಯಕ ಹಾಗೂ ನಾಯಕ ಇಬ್ಬರ ಪುನರ್‌ಜನ್ಮದ ರಹಸ್ಯ ಗೊತ್ತಾಗಿ ಮುಂದೇನಾಗುತ್ತದೆ ಎನ್ನುವ ಹೊತ್ತಿಗೆ ಕುದುರೆಯನ್ನು ಬೆನ್ನಟ್ಟಿದ ಹದ್ದು, ಕಾಣೆಯಾದ ಒಂದು ಸಾಮ್ರಾಜ್ಯ, ಮುಸುಕುಧಾರಿ ಬೇಟೆಗಾರನೊಬ್ಬನ ಚಿತ್ರ ಮೂಡುತ್ತದೆ. ಅಂದರೆ ಕತೆ ಮುಂದುವರಿಯುತ್ತದೆ!

ಚಿತ್ರ: ಹಚ್ಚೆ
ತಾರಾಗಣ: ಅಭಿಮನ್ಯು, ಆದ್ಯಾಪ್ರಿಯ, ಗುರುರಾಜ್‌ ಹೊಸಕೋಟೆ, ಚಂದ್ರು ಬಂಡೆ, ಅನುಪ್ರೇಮ, ದುಷ್ಯಂತ್‌
ನಿರ್ದೇಶನ: ಯಶೋಧರ
ರೇಟಿಂಗ್‌: 3

ರೆಗ್ಯುಲರ್ ಆ್ಯಕ್ಷನ್‌ ಥ್ರಿಲ್ಲರ್‌ ಕತೆಯ ಹೇಳುತ್ತಲೇ ಕೊನೆಯಲ್ಲಿ ನಿರ್ದೇಶಕರು ಕೊಡುವ ತಿರುವು ಗಮನ ಸೆಳೆಯುತ್ತದೆ. ಚಿತ್ರದ ನಾಯಕ ಸೂರ್ಯ ಪಾತ್ರಧಾರಿ ಅಭಿಮನ್ಯು ಅವರು ಆ್ಯಕ್ಷನ್‌ ದೃಶ್ಯಗಳಲ್ಲಿ ಹೆಚ್ಚು ಸ್ಕೋರ್‌ ಮಾಡುತ್ತಾರೆ. ನಾಯಕಿ ಆದ್ಯಾಪ್ರಿಯ ಅವರದ್ದು ಲೆಕ್ಕಕ್ಕಿಡಬಹುದಾದ ಪಾತ್ರ ಮತ್ತು ನಟನೆ. ಒಂದು ಸಾಧಾರಣ ಕತೆಗೆ ರೋಚಕತೆ ಬಣ್ಣ ಕಟ್ಟಿ ನಿರೂಪಿಸಿರುವುದು ನಿರ್ದೇಶಕರ ಶ್ರಮ ಮತ್ತು ಹೆಚ್ಚುಗಾರಿಕೆಯನ್ನು ತೋರಿಸುತ್ತದೆ.