ಮುಂಬೈ: ಗಾಳಿ ಬಂದಾಗ ತೂರಿಕೋ ಎನ್ನುವಂತೆ, ಕೆಲ ಪಕ್ಷಗಳು ಪದೇ ಪದೇ ನಿಷ್ಠೆ ಬದಲಾಯಿಸುವ ಮೂಲಕ ಅಧಿಕಾರ ಹಿಡಿಯುವ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದು ರಾಜಕೀಯದಲ್ಲಿ ಸಾಮಾನ್ಯ. 

ಹಾಗೆಂದು ಇದನ್ನು ಯಾರೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆದರೆ ಹಾಲಿ ಎನ್‌ಡಿಎದ ಭಾಗವಾಗಿರುವ ಆರ್‌ಪಿಐ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ರಾಮ್‌ದಾಸ್‌ ಅಠಾವಳೆ, ಈ ವಿಷಯದಲ್ಲಿ ನಿಜ ಒಪ್ಪಿಕೊಂಡಿದ್ದಾರೆ.

 ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಠಾವಳೆ ‘ಈ ಹಿಂದೆ ನಾನು 10-15 ವರ್ಷ ಕಾಂಗ್ರೆಸ್‌ ಜೊತೆ ಇದ್ದೆ. ಇದೀಗ ಎನ್‌ಡಿಎದ ಭಾಗವಾಗಿರುವೆ. ಇಲ್ಲೇ 15-20 ವರ್ಷ ಇರಬೇಕೆಂಬುದು ನನ್ನ ಆಶಯ. ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಅದರ ಜೊತೆಗೆ ಇರುವೆ. ಮುಂದೆ ಗಾಳಿ ಯಾವ ಕಡೆ ತಿರುಗುತ್ತದೆಯೋ ಗೊತ್ತಿಲ್ಲ. ಆಗ ಮೈತ್ರಿಕೂಟ ಬದಲಾವಣೆಯ ಚಿಂತೆ ಮಾಡುತ್ತೇನೆ’ ಎಂದು ಹೇಳಿದ್ದಾರೆ.