ನವದೆಹಲಿ (ಅ.31): ಚೀನಾ ಜತೆಗೆ ನಂಟು ಹೊಂದಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಎರಡು ತಿಂಗಳ ತರುವಾಯ, ಜನಪ್ರಿಯ ಗೇಮಿಂಗ್‌ ಆ್ಯಪ್‌ ಆದ ‘ಪಬ್‌ಜೀ’ ಆಟ ದೇಶದ ಮೊಬೈಲ್‌ಗಳಲ್ಲಿ ಶುಕ್ರವಾರದಿಂದ ಬಂದ್‌ ಆಗಿದೆ.

ಪಬ್‌ಜಿ ಮೊಬೈಲ್‌ ಹಾಗೂ ಪಬ್‌ಜಿ ಮೊಬೈಲ್‌ ಲೈಟ್‌ ಸೇರಿ 118 ಆ್ಯಪ್‌ಗಳಿಗೆ ಕೇಂದ್ರ ಸರ್ಕಾರ ಸೆ.2ರಂದು ನಿಷೇಧ ಹೇರಿತ್ತು. ಹೀಗಾಗಿ ಅಂದಿನಿಂದ ಈ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಆದರೆ ನಿಷೇಧಕ್ಕೂ ಮೊದಲೇ ಈ ಆ್ಯಪ್‌ಗಳನ್ನು ಮೊಬೈಲ್‌ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡಿದ್ದವರಿಗೆ ಯಾವುದೇ ಸಮಸ್ಯೆಯೂ ಆಗಿರಲಿಲ್ಲ. ಇದೀಗ ಸರ್ಕಾರದ ಆದೇಶ ಪಾಲಿಸುವ ಸಲುವಾಗಿ ಚೀನಾದ ಟೆನ್ಸೆಂಟ್‌ ಗೇಮ್ಸ್‌ ಕಂಪನಿ ಈ ಆ್ಯಪ್‌ಗಳಿಗೆ ಒದಗಿಸುತ್ತಿದ್ದ ಎಲ್ಲ ಸೇವೆ, ಸಂಪರ್ಕಗಳನ್ನು ರದ್ದುಗೊಳಿಸಿರುವುದಾಗಿ ಹೇಳಿದೆ.

ಪಬ್‌ಜಿ ಮೊಬೈಲ್‌ ನಾರ್ಡಿಕ್‌ ಮ್ಯಾಪ್‌: ಲಿವಿಕ್‌ ಮತ್ತು ಪಬ್‌ಜಿ ಮೊಬೈಲ್‌ ಲೈಟ್‌ ಸೇರಿದಂತೆ ಒಟ್ಟಾರೆ ಪಬ್‌ಜಿ ಮೊಬೈಲ್‌ ಸೇವೆಯನ್ನು ಶುಕ್ರವಾರದಿಂದ ಸ್ಥಗಿತಗೊಳಿಸಲಾಗಿದೆ. ಇವುಗಳ ಮೊಬೈಲ್‌ ಆವೃತ್ತಿಯನ್ನು ಭಾರತದಲ್ಲಿ ಪ್ರಕಟಿಸಲು ಪಡೆದಿದ್ದ ಹಕ್ಕನ್ನು ಅವುಗಳ ಬೌದ್ಧಿಕ ಹಕ್ಕು ಹೊಂದಿರುವ ಸಂಸ್ಥೆಗೆ ಮರಳಿಸಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೆನ್ಸೆಂಟ್‌ ಕಂಪನಿ ಬರೆದುಕೊಂಡಿದೆ.

ಈ ಕ್ರಿಕೆಟಿಗರೂ ಪಬ್ ಜೀಗೆ ಆಗಿದ್ದರು ಅಡಿಕ್ಟ್

ದಕ್ಷಿಣ ಕೊರಿಯಾ ಮೂಲದ ಪಬ್‌ಜಿ ಕಾರ್ಪೋರೇಷನ್‌ ಸಂಸ್ಥೆಯು ಪಬ್‌ಜಿ ಆನ್‌ಲೈನ್‌ ಗೇಮ್‌ ಅನ್ನು ಅಭಿವೃದ್ಧಿಪಡಿಸಿದೆ. ಅದರ ಮೊಬೈಲ್‌ ಅವತರಣಿಕೆಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ಹಕ್ಕನ್ನು ಚೀನಾದ ಟೆನ್ಸೆಂಟ್‌ಗೆ ನೀಡಿತ್ತು. ಮೊಬೈಲ್‌ ವರ್ಷನ್‌ ದೇಶದಲ್ಲಿ ಬ್ಲಾಕ್‌ ಆಗಿದೆಯಾದರೂ, ವೆಬ್‌ಸೈಟ್‌ ಅವತರಣಿಕೆ ಹಕ್ಕು ಈಗಲೂ ದಕ್ಷಿಣ ಕೊರಿಯಾದ ಪಬ್‌ಜಿ ಕಾರ್ಪೋರೇಷನ್‌ ಬಳಿಯೇ ಇದೆ. ಹೀಗಾಗಿ ಕಂಪ್ಯೂಟರ್‌ನಲ್ಲಿ ಪಬ್‌ಜೀ ಆಡಬಹುದಾಗಿದೆ.