ಪಾಂಡವಪುರ[ಅ.30]: ತಾಲೂಕಿನ ಸುಂಕಾತೊಣ್ಣೂರು ಮಾಡರಹಳ್ಳಿ ಗ್ರಾಮದ ರಸ್ತೆಯನ್ನು ದುರಸ್ತಿ ಮಾಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ರಸ್ತೆಯಲ್ಲಿ ನಾಟಿ ಮಾಡಿ ಧರಣಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಸುಂಕಾತೊಣ್ಣೂರು ಮಾಡರಹಳ್ಳಿ ಗ್ರಾಮದ ಸಂಪರ್ಕದ ಕೆರೆ ಏರಿ ಪಕ್ಕದಲ್ಲಿ ಹಳ್ಳ ಬಿದ್ದಿರುವ ಮಣ್ಣಿನ ರಸ್ತೆಯಲ್ಲಿ ಗ್ರಾಮಸ್ಥರು ಭತ್ತದ ಪೈರನ್ನು ಹಿಡಿದು ನಾಟಿ ಮಾಡಿ ಶಾಸಕ ಪುಟ್ಟರಾಜು ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತಕ್ಷಣ ರಸ್ತೆ ಡಾಂಬರೀಕರಣ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲದೇ ಹೋದರೆ ಮುಂದಿನ ಚುನಾವಣೆಗೆ ಬಹಿಷ್ಕಾರ ಹಾಕುತ್ತೇವೆ. ಶಾಸಕರನ್ನು ಗ್ರಾನಕ್ಕೆ ಪ್ರವೇಶಿಸದಂತೆ ದಿಗ್ಭಂದನ ವಿಧಿಸಲಾಗವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.

ಗ್ರಾಮಸ್ಥರಿಗೆ ತೊಂದರೆ:

ಗ್ರಾಮದ ಸಂಪರ್ಕ ರಸ್ತೆ ಸುಂಕಾತೊಣ್ಣೂರು ಗ್ರಾಮದಿಂದ ಮಾಡರಹಳ್ಳಿ ಗ್ರಾಮಕ್ಕೆ ಸುಮಾರು 3 ಕಿ.ಮೀ ದೂರದಷ್ಟು ಮಣ್ಣಿನ ರಸ್ತೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಸೇರಿದಂತೆ ಗ್ರಾಮಸ್ಥರು ತಿರುಗಾಡಲು ತುಂಬಾ ತೊಂದರೆ ಉಂಟಾಗುತ್ತಿದೆ. ಮಾಡರಹಳ್ಳಿ ಗ್ರಾಮದಿಂದ ಸುಂಕಾತೊಣ್ಣೂರು, ಪಾಂಡವಪುರ ಪಟ್ಟಣಕ್ಕೆ ತೆರಳಬೇಕಾದರೆ 3 ಕಿ.ಮೀ ದೂರ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಸುಂಕಾತೊಣ್ಣೂರು ಹಾಗೂ ಪಾಂಡವಪುರ ಶಾಲಾ ಕಾಲೇಜಿಗೆ ತೆರಳಬೇಕಾದ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಭಯದಿಂದ ಸಂಜೆ ವೇಳೆ ನಡೆದುಕೊಂಡು ಹೋಗಬೇಕಾದ ವಾತಾವರಣ ಸೃಷ್ಟಿಯಾಗಿದೆ.

ಸುಂಕಾತೊಣ್ಣೂರು ಕೆರೆ ಏರಿ ದಡದ ಕೆಳಗಿರುವ ಈ ರಸ್ತೆಯಲ್ಲಿ ಅಕ್ಕಪಕ್ಕದಲ್ಲಿ ಗಿಡಗಂಟೆಗಳು ಬೆಳೆದು ತೊಂದರೆ ಉಂಟಾಗಿದೆ. ಹಳ್ಳದಿಂದ ಕೂಡಿರುವ ಮಣ್ಣಿನ ರಸ್ತೆಯಲ್ಲಿ ವಾಹನಗಳು ಸಂಚರಿಸಲು ತುಂಬಾ ಕಷ್ಟದ ಪರಿಸ್ಥಿತಿಯಿದೆ. ಇದನ್ನು ಅರ್ಥ ಮಾಡಿಕೊಂಡು ಶಾಸಕರು ಕೂಡಲೇ ರಸ್ತೆ ರಿಪೇರಿ ಮಾಡಿಸಿ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನೀರು ಶುದ್ಧಿ ಕರಣ ಘಟಕ ಹದಗೆಟ್ಟಿದೆ:

ಗ್ರಾಮದಲ್ಲಿ ಜಲ ಶುದ್ದೀಕರಣ ಘಟಕ ಪ್ರಾರಂಭಿಸಿ ಒಂದು ವರ್ಷವಾಗಿದೆ. ಉದ್ಘಾಟನೆಗೊಂಡು ಕೆಲ ದಿನಗಳಷ್ಟೇ ಚೆನ್ನಾಗಿತ್ತು. ನಂತರ ಕೆಟ್ಟು ನಿಂತೋಗಿದೆ. ಆಲ ಶುದ್ಧೀಕರಣ ಘಟಕ ಇದ್ದು ಇಲ್ಲದಂತಾಗಿದೆ. ಗ್ರಾಮದಿಂದ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಸಂಜೆ ವೇಳೆ ಭಯದಿಮದ ಗ್ರಾಮಕ್ಕೆ ಬರುವ ಪರಿಸ್ಥಿತಿ ಉಂಟಾಗಿದೆ. ಹೆಣ್ಣು ಮಕ್ಕಳು ಭಯದಿಂದ ಶಾಲಾ ಕಾಲೇಜಿಗೆ ತೆರಳಲು ಹೆದರುವ ಪರಿಸ್ಥಿತಿ ಉಂಟಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ 15 ವರ್ಷದಿಂದ ಹಳ್ಳದಿಂದ ಕೂಡಿರುವ ಮಣ್ಣಿನ ರಸ್ತೆಯನ್ನು ತಕ್ಷಣ ಡಾಂಬರೀಕರಣ ಮಾಡಬೇಕು. ಇಲ್ಲದಿದ್ದರೆ ಮುಂದಿನ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜನಪ್ರತಿನಿಧಿಗಳನ್ನು ಗ್ರಾಮಕ್ಕೆ ಬರದಂತೆ ಬಹಿಷ್ಕಾರ ಹಾಕಿ ಜೊತೆಗೆ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಎಂ.ಎಸ್‌.ಜವರೇಗೌಡ, ಶಂಕರ್‌,ಮುಖಂಡರಾದ ಚಿಕ್ಕತಾಯಮ್ಮ, ಮಂಜೇಗೌಡ, ಪುಟ್ಟಸ್ವಾಮಿ, ಜಯರಾಮ, ಕೃಷ್ಣೇಗೌಡ, ನಾರಾಯಣಗೌಡ, ಶೇಖರ್‌ ಪಾಲ್ಗೊಂಡಿದ್ದರು.