ಕೆ.ಆರ್‌.ಪೇಟೆ [ನ.04] :  17 ಶಾಸಕರ ತ್ಯಾಗದಿಂದ ಸಿಎಂ ಯಡಿಯೂರಪ್ಪರ ನೇತೃತ್ವದಲ್ಲಿ ಬಿಜೆಪಿಯ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ ಹೇಳಿದರು.

ಪಟ್ಟಣದ ತಾಲೂಕು ಬಿಜೆಪಿ ಕಚೇರಿಯಲ್ಲಿ ನಡೆದ ತಾಲೂಕು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಯಾರಿಗೆ ಟಿಕೆಚ್‌ ನೀಡಿದರೂ ಎಲ್ಲರೂ ಸಾಂಘಿಕವಾಗಿ ಹೋರಾಟ ಮಾಡಿ ಗೆಲ್ಲಿಸಿ ಯಡಿಯೂರಪ್ಪರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದರು.

ಸಿಎಂ ಯಡಿಯೂರಪ್ಪರಿಗೆ ತಾಲೂಕಿನ ಮೇಲೆ ಅತಿಯಾದ ಪ್ರೀತಿಯಿದೆ. ತಾಲೂಕಿನಾದ್ಯಂತ ಸಾವಿರ ಕೋಟಿ ಅಷ್ಟುಅನುದಾನದಲ್ಲಿ ಅಭಿವೃದ್ಧಿ ಕೆಲಸವಾಗಿದೆ. ಇನ್ನು ಹೆಚ್ಚಿನ ಕೆಲಸ ಮಾಡುವ ಅಭಿಲಾಷೆ ಇದೆ. ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದರೇ ತಾಲೂಕಿನಾದ್ಯಂತ ನೂರಾರು ಕಾರ್ಯಕರ್ತರು ಮುಖಂಡರಾಗುತ್ತಾರೆ. ಅಧಿಕಾರಿಗಳು ತಮ್ಮ ಕೆಲಸಗಳನ್ನು ಮಾಡಿಕೊಡುತ್ತಾರೆ. ಆದ್ದರಿಂದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಹೊರಬೇಕು ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ವೇಳೆಅನರ್ಹ ಶಾಸಕ ನಾರಾಯಣಗೌಡ ಅವರ ಬೆಂಬಲಿಗ ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್‌ ಬಿಜೆಪಿಗೆ ಸೇರ್ಪಡೆಗೊಂಡರು. ಶ್ರೀನಿವಾಸ್‌ ಹಾಗೂ ಅವರ ತಂದೆ ಕೂಡ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ಯಡಿಯೂರಪ್ಪ ಕೆಜಿಪಿ ಸ್ಥಾಪನೆ ಮಾಡಿದ್ದಾಗ ಅವರು ಮಾಜಿ ಸ್ಪೀಕರ್‌ ಕೃಷ್ಣ ಅವರ ಜತೆ ಕಾಂಗ್ರೆಸ್‌ಗೆ ಹೋಗಿದ್ದರು. ಕೃಷ್ಣರ ರಾಜಕೀಯ ನಿವೃತ್ತಿ ಹಿನ್ನೆಲೆಯಲ್ಲಿ ನಾರಾಯಣಗೌಡರಿಗೆ ಬೆಂಬಲ ನೀಡಿ ಜೆಡಿಎಸ್‌ಗೆ ಬಂದಿದ್ದರು. ಅವರ ರಾಜೀನಾಮೆ ನೀಡಿದ ಬಳಿಕ ಅನರ್ಹ ಶಾಸಕರೊಂದಿಗಿದ್ದಾರೆ.

ಸಭೆಯಲ್ಲಿ ಬಿಜೆಪಿಯ ಮೈಸೂರು ಉಸ್ತುವಾರಿ ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್‌, ತಾಲೂಕು ಅಧ್ಯಕ್ಷ ಬೂಕಹಳ್ಳಿ ಮಂಜು, ಪ್ರಧಾನ ಕಾರ್ಯದರ್ಶಿ ಹರೀಶ್‌, ಪುರಸಭೆ ಮಾಜಿ ಸದಸ್ಯ ವಿನೋದ್‌ ಇದ್ದರು.