Asianet Suvarna News Asianet Suvarna News

ಹರಕೆ ಆಟ - ಕಲಿಕೆಯ ಪಾಠ: ಯಕ್ಷಗಾನದ ಯೂನಿವರ್ಸಿಟಿ ಶ್ರೀ ಕ್ಷೇತ್ರ ಗುಂಡಬಾಳ

Uttara Kannada ಜಿಲ್ಲೆಯ ಹೊನ್ನಾವರದ ಗುಂಡಬಾಳ ಕ್ಷೇತ್ರದ ಆರಾಧ್ಯ ದೇವತೆ ಶ್ರೀ ಮುಖ್ಯಪ್ರಾಣ ಲಕ್ಷ್ಮೀ ವೆಂಕಟೇಶ. ದೇಗುಲದ ಸರಿ ಎದುರಿನ ಬಯಲಲ್ಲಿರುವ ರಂಗಸ್ಥಳದಲ್ಲಿ ಯಕ್ಷಗಾನ ಪ್ರಿಯ ಮುಖ್ಯಪ್ರಾಣನಿಗೆ ನಿರಂತರವಾಗಿ ಯಕ್ಷಗಾನ ಸೇವೆ ನಡೆಯುತ್ತಿರುತ್ತದೆ.

dakshina kannada folk culture yakshagana university shri kshetra gundabala
Author
First Published May 26, 2024, 11:41 AM IST

ಲೇಖನ- ರಾಘವೇಂದ್ರ ಅಗ್ನಿಹೋತ್ರಿ

ಚಿತ್ರಗಳು- ರಾಮಚಂದ್ರ ಭಟ್‌ ಉಳ್ಳಾಲ

ಹಿಂದೆ ಸಂಪರ್ಕ ಸಾಧನಗಳು ಇಲ್ಲದ ಸಮಯದಲ್ಲಿ, ಮಡಲುಗರಿಯ ಸೂಡಿ (ಸೂಟೆ) ಹೊತ್ತಿಸಿ ಗುಂಡಬಾಳದತ್ತ ಮುಖ ಮಾಡಿ ಹೊರಟರೆ ಸಾಕು, ಯಕ್ಷಗಾನದ ಸ್ಥಳ ತಲುಪುತ್ತಿದ್ದರಂತೆ, ದೇವರು ಆಟಕ್ಕೆ ಕರೆಸಿಕೊಳ್ಳುತ್ತಾನೆ ಎಂಬುದು ಜನರ ನಂಬಿಕೆಯಾಗಿತ್ತು. ಇಂದಿಗೂ ಇಂಥಾ ಅದೆಷ್ಟೋ ನಂಬಿಕೆ, ಭಕ್ತಿಭಾವಗಳಿಂದ ಈಗಲೂ ದಿನಂಪ್ರತಿ ಯಕ್ಷಗಾನ ನಡೆಯುವ ಕ್ಷೇತ್ರವಿದ್ದರೆ ಅದು ಗುಂಡಬಾಳ ಮಾತ್ರ.

ಜಗವೆಲ್ಲ ಮಲಗಿದ್ದರೂ ಇಲ್ಲಿ ರಾತ್ರಿಯಿಂದ ಬೆಳಗಿನವರೆಗೆ ನಿರಂತರವಾಗಿ ಯಕ್ಷಗಾನ ನಡೆಯುತ್ತಲೇ ಇರುತ್ತದೆ. ಪ್ರೇಕ್ಷಕರ ಸಂಖ್ಯೆ ಇಲ್ಲಿ ಮುಖ್ಯವೇ ಅಲ್ಲ. ಕೆಲವೊಮ್ಮೆ ನೂರಾರು ಪ್ರೇಕ್ಷಕರಿಂದ ಸಭಾಂಗಣ ತುಂಬಿರಬಹುದು, ಕೆಲವೊಮ್ಮೆ ಬೆರಳೆಣಿಕೆಯ ಪ್ರೇಕ್ಷಕರಿದ್ದರೂ ರಾತ್ರಿ ಬೆಳಗಿನವರೆಗೆ ಹರಕೆಯ ಯಕ್ಷಗಾನ ನಡೆಯುತ್ತಲೇ ಇರುತ್ತದೆ. ವರ್ಷದಲ್ಲಿ ಐದು ತಿಂಗಳು (ಮಾರ್ಗಶಿರ ಶುದ್ಧ ದಶಮಿಯಿಂದ ಆರಂಭಿಸಿ ವೈಶಾಖ ಶುದ್ಧ ಅಷ್ಟಮಿಯವರೆಗೆ) ಒಂದೇ ಕ್ಷೇತ್ರದ ಒಂದೇ ರಂಗಸ್ಥಳದಲ್ಲಿ ನಿರಂತರ ಹರಕೆಯ ಯಕ್ಷಗಾನ ನಡೆಯುವ ರಾಜ್ಯದ ಏಕೈಕ ಕ್ಷೇತ್ರವೆಂದರೆ ಅದು ಗುಂಡಬಾಳ ಕ್ಷೇತ್ರ. ಈ ಕ್ಷೇತ್ರದಲ್ಲಿ ಮುಂದಿನ ಎಂಟು ವರ್ಷಗಳ ವರೆಗಿನ ಹರಕೆಯ ಸೇವೆಯಾಟ ಈಗಾಗಲೇ ಮುಂಗಡವಾಗಿ ಬುಕ್ಕಿಂಗ್‌ ಆಗಿದೆ!

ಮಹಿಷನ ಅವತಾರದಲ್ಲಿ ಪ್ರಜ್ವಲ್ ದೇವರಾಜ್: ಯಕ್ಷಗಾನ ಕಲಾವಿದನಾದ ಡೈನಾಮಿಕ್ ಪ್ರಿನ್ಸ್!

ಗುಂಡಬಾಳ ಕ್ಷೇತ್ರ ಭಕ್ತರಿಗೆ ಹರಕೆಯ ತಾಣವಾದರೆ ಕಿರಿಯ ಕಲಾವಿದರಿಗೆ ಕಲಿಕೆಯ ತಾಣ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗುಂಡಬಾಳ ಕ್ಷೇತ್ರದ ಆರಾಧ್ಯ ದೇವತೆ ಶ್ರೀ ಮುಖ್ಯಪ್ರಾಣ ಲಕ್ಷ್ಮೀ ವೆಂಕಟೇಶ. ದೇಗುಲದ ಸರಿ ಎದುರಿನ ಬಯಲಲ್ಲಿರುವ ರಂಗಸ್ಥಳದಲ್ಲಿ ಯಕ್ಷಗಾನ ಪ್ರಿಯ ಮುಖ್ಯಪ್ರಾಣನಿಗೆ ನಿರಂತರವಾಗಿ ಯಕ್ಷಗಾನ ಸೇವೆ ನಡೆಯುತ್ತಿರುತ್ತದೆ. ಶರಾವತಿ ನದಿಯ ಉಪನದಿ ಗುಂಡಬಾಳ ನದಿಯ ತಪ್ಪಲಿನ ಪಶ್ಚಿಮ ಘಟ್ಟದ ಈ ತಾಣ ಯಕ್ಷ ಕಾಶಿ, ಯಕ್ಷಗಾನದ ತವರು ಎಂದೇ ಪ್ರಸಿದ್ಧಿ ಪಡೆದಿದೆ.

ಖಾಯಂ ಚೌಕಿ ರಂಗಸ್ಥಳ ಹೊಂದಿರುವ ಯಕ್ಷಗಾನದ ಸೀಸನ್‌ನಲ್ಲಿ ಪ್ರತಿದಿನವೂ ತಪ್ಪದೇ ಯಕ್ಷಗಾನ ನಡೆಯುವ ರಾಜ್ಯದ ಏಕೈಕ ತಾಣವೂ ಹೌದು. ಇಂತಹ ರಂಗಭೂಮಿ ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲಿಯೇ ಎಲ್ಲೂ ಇಲ್ಲ ಎನ್ನುತ್ತಾರೆ ಇಲ್ಲಿನ ದೇವಾಲಯದ ಟ್ರಸ್ಟಿಗಳಲ್ಲಿ ಒಬ್ಬರಾದ ಮಾರುತಿ ಪ್ರಭು.

ಯಕ್ಷಗಾನವೆನ್ನುವುದು ಇಲ್ಲಿ ವ್ಯವಹಾರಕ್ಕಾಗಿ ನಡೆಯುತ್ತಿಲ್ಲ, ತಲತಲಾಂತರಗಳಿಂದ ಭಕ್ತಿಯಿಂದ ನಡೆದು ಬಂದಿದೆ, ಇನ್ನೂ ನಡೆಯುತ್ತಲೇ ಇದೆ. ಸಂಕಷ್ಟ ಎದುರಾದಾಗ ಇಲ್ಲಿ ಹರಕೆ ಹೊತ್ತು ಪರಿಹಾರ ಕಂಡುಕೊಂಡ ಸಾಕಷ್ಟು ಉದಾಹರಣೆಗಳನ್ನು ದೇವಾಲಯದ ಆಡಳಿತ ಮಂಡಳಿಯವರು ನೀಡುತ್ತಾರೆ. ಸುಮಾರು ಅಂದಾಜು 500 ವರ್ಷಗಳಿಂದ ನಿರಂತರವಾಗಿ ಯಕ್ಷಗಾನ ಸೇವೆ ನಡೆಯುತ್ತಾ ಬಂದಿದೆ. ಕೇವಲ ಸ್ಥಳೀಯರಷ್ಟೇ ಅಲ್ಲ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಮುಂಬೈ, ಮಂಗಳೂರಿಂದಲೂ ತಂಡಗಳು ಬಂದು ಇಲ್ಲಿ ಹರಕೆ ಹೊತ್ತು ಆಟ ಆಡಿ ಕೃತಾರ್ಥರಾಗುತ್ತಾರೆ.

6ನೇ ಕ್ಲಾಸ್​​ನಲ್ಲಿ ಯಕ್ಷ ಪಯಣ: ಯಕ್ಷಗಾನ ಧಾರಿಯಾದ ರಿಷಬ್​ ಶೆಟ್ಟಿಯ ಅಪರೂಪದ ಫೋಟೋ ವೈರಲ್​

ಗುಂಡಬಾಳ ಮೇಳದಲ್ಲಿ ಕಲಿಯುವ ಕಿರಿಯರೂ ಇದ್ದಾರೆ, ಹಿರಿಯ ಕಲಾವಿದರೂ ಇದ್ದಾರೆ. ಕಿರಿಯರು ಇಲ್ಲಿ ಶ್ರದ್ಧೆಯಿಂದ ಯಕ್ಷಗಾನ ಕಲಿತರೆ ಮುಂದೆ ಅವರ ಭವಿಷ್ಯ ಉಜ್ವಲವೆಂಬುದಕ್ಕೆ ಹಲವು ತಲೆಮಾರುಗಳ ಯಕ್ಷಸಾಧಕರೇ ಸಾಕ್ಷಿ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿದ ಬಡಗುತಿಟ್ಟಿನ ಕಲಾವಿದರೆಲ್ಲ ಇಲ್ಲಿ ಹೆಜ್ಜೆ ಹಾಕಿದ್ದಾರೆ. ರಾಷ್ಟ ಪ್ರಶಸ್ತಿ ಪುರಸ್ಕೃತ ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೊಂಡದಕುಳಿ ರಾಮ ಹೆಗಡೆ, ಕೃಷ್ಣ ಯಾಜಿಯವರಂಥ ಅತಿರಥ ಮಹಾರಥರು ಯಕ್ಷಗಾನದ ಹರಕೆಯ ಸೇವೆ ಸಲ್ಲಿಸಿದ್ದಾರೆ. ಕರ್ಕಿ ಹಾಸ್ಯಗಾರ ಮೇಳದ ಕಲಾವಿದರು ಸೇರಿ ಜಿಲ್ಲೆಯ ಹೆಚ್ಚಿನ ಕಲಾವಿದರು ಇಲ್ಲಿ ಹರಕೆಯ ಸೇವೆ ಸಲ್ಲಿಸಿದ್ದಾರೆ. ಈಗಲೂ ವೃತ್ತಿಪರ ಮೇಳಗಳಿಗೆ ಉತ್ತಮ ಕಲಾವಿದರನ್ನು ಇಲ್ಲಿಂದಲೇ ಆಯ್ಕೆ ಮಾಡಿ ಸೇರ್ಪಡೆಗೊಳ್ಳುತ್ತಿದ್ದಾರೆ.

ಇಲ್ಲಿ ಏನೆಲ್ಲಾ ಹರಕೆ?
ಈ ಕ್ಷೇತ್ರದಲ್ಲಿ ಯಕ್ಷಗಾನ ಆಡಿಸುವುದು ಒಂದು ಹರಕೆಯಾದರೆ, ಯಕ್ಷಗಾನ ನೋಡುವುದು ಇಲ್ಲಿ ಹರಕೆಯೇ. ಒಂದು, ಐದು ಯಕ್ಷಗಾನ ನೋಡುತ್ತೇನೆ ಎಂದೂ ಇಲ್ಲಿ ಹರಕೆ ಹೊತ್ತುಕೊಳ್ಳುತ್ತಾರೆ. ಇಲ್ಲಿಯೇ ಪ್ರಥಮವಾಗಿ ಕುಣಿದು ರಂಗಪ್ರವೇಶ ಮಾಡುವ ಬಗ್ಗೆಯೂ ಹರಕೆ ಹೊತ್ತುಕೊಂಡು ಇಲ್ಲಿ ಮೊದಲ ಬಾರಿಗೆ ಗೆಜ್ಜೆ ಕಟ್ಟಿ ಕುಣಿದು ಧನ್ಯರಾಗುತ್ತಾರೆ. ರಂಗಸ್ಥಳದ ಮಣ್ಣನ್ನು ಹಣೆಗೆ ಹಚ್ಚಿಕೊಳ್ಳುವ ಬಗ್ಗೆಯೂ ಹರಕೆ ಹೊತ್ತುಕೊಳ್ಳುತ್ತಾರೆ.

ಯಕ್ಷಗಾನ ಹರಕೆ ಹೇಗೆ?
ಗುಂಡಬಾಳ ಶ್ರೀ ಮುಖ್ಯಪ್ರಾಣ ಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಬಂದು ದೇವರಿಗೆ ಪೂಜೆ ಮಾಡಿಸಿ ಅರ್ಚಕರಲ್ಲಿ ಹೇಳಿ ಸಂಕಲ್ಪಿಸಬೇಕು. ಬಳಿಕ ದೇವಸ್ಥಾನದ ಕಚೇರಿಯಲ್ಲಿ ಯಕ್ಷಗಾನ ಬುಕಿಂಗ್‌ ಮಾಡಬೇಕು. ಸರದಿಯ ದಿನಾಂಕ ಬಂದಾಗ ಕಚೇರಿಯಿಂದ ಬುಕಿಂಗ್‌ ಮಾಡಿದವರಿಗೆ ತಿಳಿಸುತ್ತಾರೆ. ಆ ದಿನ ಅಂದರೆ ಯಕ್ಷಗಾನ ಪ್ರದರ್ಶನವಾಗುವ ದಿನ 9900 ರುಪಾಯಿ ವೀಳ್ಯದ ಹಣ ದೇವಸ್ಥಾನದ ಕೌಂಟರ್‌ನಲ್ಲಿ ನೀಡಿ ಸೇವೆಯಾಟ ಆಡಿಸಬೇಕು. ಹೀಗೆ ಹರಕೆಯ ಸಂಪ್ರದಾಯ ನಡೆದು ಬಂದಿದೆ. ಆರಂಭದಲ್ಲಿ ದಿನಕ್ಕೆ ಒಂದೇ ಯಕ್ಷಗಾನ ನಡೆಯುತ್ತಿತ್ತು, ಆಗ ಹರಕೆಯ ಆಟ ಆಡಿಸಲು ತುಂಬಾ ವರ್ಷಗಳವರೆಗೆ ಕಾಯಬೇಕಿತ್ತು. 2002 ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಈ ಕ್ಷೇತ್ರಕ್ಕೆ ಬಂದಿದ್ದಾಗ ದಿನಕ್ಕೆ ಎರಡು ಆಟ ಆಡಿಸುವ ಸಲಹೆ ನೀಡಿದ್ದರು. ಅದರಂತೆ ದೇವರಲ್ಲಿ ಈ ಬಗ್ಗೆ ಪ್ರಸಾದ ಕೇಳಿದ ಬಳಿಕ ದಿನಕ್ಕೆ ಇಬ್ಬರು ಹರಕೆದಾರರ ಹರಕೆಯಾಟ ಪ್ರದರ್ಶನವಾಗುತ್ತಿದೆ. ಆದರೂ ಈಗ ಹೊಸದಾಗಿ ಯಕ್ಷಗಾನ ಹರಕೆ ಹೊತ್ತವರಿಗೆ ಯಕ್ಷಗಾನ ಪ್ರದರ್ಶನವಾಗಬೇಕು ಎಂದರೆ ಆರೆಂಟು ವರ್ಷ ಕಾಯಲೇಬೇಕು. ಅಷ್ಟು ಆಟಗಳು ಬುಕ್ಕಿಂಗ್‌ ಆಗಿದೆ ಎನ್ನುತ್ತಾರೆ ಗುಂಡಬಾಳ ಯಕ್ಷಗಾನ ಮೇಳದ ವ್ಯವಸ್ಥಾಪಕ ಪ್ರಭಾಕರ ಚಿಟ್ಟಾಣಿಯವರು.

ಕೋಲ ಆಯ್ತು, ಈಗ ಯಕ್ಷಗಾನ…. ಶ್ರೀ ಗೌರಿ ಸೀರಿಯಲ್‌ಗೂ ತಟ್ಟಿದ ಅಸಮಧಾನದ ಬಿಸಿ

ಹೇಗೆ ತಲುಪುವುದು?
ಹೊನ್ನಾವರದಿಂದ ಗುಂಡಬಾಳಕ್ಕೆ 15 ಕಿ.ಮೀ. ದೂರವಿದೆ. ಹೊನ್ನಾವರ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 9 ಕೀ.ಮೀ. ಸಾಗಿದರೆ ಹಡಿನಬಾಳ. ಹಡಿನಬಾಳದಲ್ಲಿ ಗುಂಡಬಾಳ ಮಹಾದ್ವಾರವಿದ್ದು, ಅಲ್ಲಿಂದ 6 ಕೀ.ಮೀ. ಸಾಗಿದರೆ ಗುಂಡಬಾಳ ಶ್ರೀ ಕ್ಷೇತ್ರ ತಲುಪಬಹುದು. ಹೊನ್ನಾವರ ಬಸ್‌ ನಿಲ್ದಾಣದಿಂದ ಬೆಳಿಗ್ಗೆಯಿಂದ ಸಂಜೆ 7 ರವರೆಗೆ ಬಸ್‌ ವ್ಯವಸ್ಥೆ ಇದೆ. ಖಾಸಗಿ ಹಾಗೂ ಬಾಡಿಗೆ ವಾಹನದ ಮೂಲಕವೂ ಇಲ್ಲಿಗೆ ತಲುಪಬಹುದು.

Latest Videos
Follow Us:
Download App:
  • android
  • ios