- ಭಾಗ್ಯ ನಂಜುಂಡಸ್ವಾಮಿ

ಸಾಮಾನ್ಯವಾಗಿ ಬೇಸಿಗೆಯಲ್ಲಿ ಅದರಲ್ಲೂ ಅತ್ಯಂತ ಉರಿ ಬಿಸಿಲಿನ ಸಮಯದಲ್ಲಿ ‘ಡಿಹೈಡ್ರೇಷನ್’ ಅಥವಾ ನಿರ್ಜಲೀಕರಣ ಉಂಟಾಗುತ್ತದೆ. ದೇಹದಿಂದ ಸುಮಾರು 75%ಕ್ಕಿಂತಲೂ ಅಧಿಕವಾಗಿ ನೀರು ಹೊರಹೋದಾಗ ಈ ಲಕ್ಷಣಗಳು ಕಂಡುಬರುತ್ತವೆ. ಇದು ಜೀವಿಯೊಂದರಲ್ಲಿರುವ ದ್ರವಾಂಶದ ಕೊರತೆಯನ್ನು ಸೂಚಿಸುತ್ತದೆ. 

ನಿರ್ಜಲೀಕರಣ ಸ್ಥಿತಿಯು ಕೇವಲ ಜಲ ಅಥವಾ ನೀರಿನ ಕೊರತೆಯಷ್ಟೇ ಅಲ್ಲ, ರಕ್ತದ ಪ್ಲಾಸ್ಮಾದಲ್ಲಿರುವ ಪ್ರಮಾಣ ಕ್ಕನುಗುಣವಾಗಿ ಬಹುಮಟ್ಟಿಗೆ ಸಮಾನ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಕಾರಣ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು ಅಥವಾ ದೇಹದಲ್ಲಿನ ಪರಿಚಲನಾ ವ್ಯವಸ್ಥೆಗೆ ಧಕ್ಕೆಯುಂಟಾಗುವುದಾಗಿದೆ.

ಬಿಸಿಲಿನ ಝಳವಿರುವ ಕಡೆ ನೀರು ಸೇವನೆ ಮಾಡದೇ ಬೆವರು ಹರಿಸುವಂತಹ ಕೆಲಸ ಮಾಡಿದರೆ ಡಿಹೈಡ್ರೇಶನ್ ಆಗುತ್ತೆ.  ದೀರ್ಘಕಾಲೀನ ಒಣಗಾಳಿ ಸೇವನೆ, ರಕ್ತ ನಷ್ಟ ಅಥವಾ ದೈಹಿಕ ಗಾಯದಿಂದಾಗಿ ಒತ್ತಡ ಹೀನತೆಯೂ ಕೂಡ ಕಾರಣ.  ಇದರೊಂದಿಗೆ ಅತಿಸಾರಭೇದಿ, ವಾಂತಿ, ಕಾಲರಾ, ಜಠರದ ಉರಿ ಯೂತ, ಕಾಮಾಲೆ, ಅಪೌಷ್ಠಿಕತೆಗಳಿಂದಲೂ ನಿರ್ಜಲೀಕರಣ ಸಮಸ್ಯೆಯಾಗುತ್ತದೆ.

ರಕ್ತದಲ್ಲಿ ಸೋಡಿಯಂ ಪ್ರಮಾಣದ ಇಳಿಕೆ, ತ್ವರಿತ ತೂಕ ಇಳಿಕೆಯ ಕ್ರಮವೂ ಕೂಡ ನಿರ್ಜಲೀಕರಣಕ್ಕೆ ಪ್ರಮುಖ ಕಾರಣವಾಗಿದೆ. ಲಕ್ಷಣ  ಮೈಭಾರ, ತಲೆನೋವು, ಸ್ನಾಯು ಸೆಳೆತ, ಸುಸ್ತು, ನಿಶ್ಯಕ್ತಿ, ಹಸಿವು ಕಡಿಮೆಯಾಗುವುದು.  ಮೈಯಲ್ಲಿ ಬೆವರಿನ ಗುಳ್ಳೆಗಳು ಕಾಣಿಸುವುದು, ತುಟಿ ಒಣಗಿದಂತಾಗುವುದು, ಪ್ರಜ್ಞೆಯಿಲ್ಲದಿರುವಿಕೆ, ನಾಲಿಗೆಯಲ್ಲಿ ಊತ
ಎಳೆಯ ಹಸುಗೂಸುಗಳಿಗೆ ಗುಳಿಬಿದ್ದ ನೆತ್ತಿಸುಳಿ ಲಕ್ಷಣಗಳೂ ಕಂಡುಬರುತ್ತದೆ.

ಗೊತ್ತಾಗೋದು ಹೇಗೆ?
ನಿರ್ಜಲೀಕರಣವನ್ನು ಕಂಡುಹಿಡಿಯಬೇಕಾದರೆ ವ್ಯಕ್ತಿಯ ಮೂತ್ರ ವಿಸರ್ಜನೆಯತ್ತ ಗಮನವಿಡುವಿವುದು ಅತ್ಯಗತ್ಯ. ಓರ್ವ ವ್ಯಕ್ತಿ ಪ್ರತಿ 3 ರಿಂದ 5 ಗಂಟೆಗಳಿ ಗೊಮ್ಮೆ ಮೂತ್ರಿಸುತ್ತಿದ್ದರೆ, ಮೂತ್ರವು ದಟ್ಟ ವರ್ಣದ್ದಾಗಿದ್ದರೆ ಮೂತ್ರ ವಿಸರ್ಜನೆಗೆ ತಕ್ಕಷ್ಟು ನೀರಿನ ಪ್ರಮಾಣ ದೇಹದಲ್ಲಿಲ್ಲವೆಂದು ಅರ್ಥೈಸಿ ಕೊಳ್ಳಬೇಕು. ಮಕ್ಕಳಲ್ಲಿ ಡಿಹೈಡ್ರೇಶನ್ಯಾದರೆ ನಿದ್ರಾಹೀನತೆ, ಕಿರಿಕಿರಿ, ಬಾಯಾರಿಕೆ, ಕಣ್ಣೀರು ಇಲ್ಲದಿರುವಿಕೆ, ಮೂತ್ರ ವಿಸರ್ಜನೆಯು ಕಡಿಮೆ ಯಾಗುವುದು ಉಂಟಾ ಗುವುದು. ಹೀಗಾದ್ರೆ ತಕ್ಷಣ
ವೈದ್ಯರಿಗೆ ತೋರಿಸಿ. 

ನಿರ್ಜಲೀಕರಣ ತಡೆಯುವ ಬಗೆ?
- ಹೆಚ್ಚು ನೀರನ್ನು ಸೇವನೆ- ಪ್ರಮುಖವಾಗಿ ಬಿಸಿಲಿನಲ್ಲಿ ಕಾರ್ಯ ನಿರ್ವಹಿಸುವವರು, ಕ್ರೀಡಾಪಟುಗಳು ದಿನಕ್ಕೆ ಕನಿಷ್ಠ ಎರಡು ಲೀಟರಿನಷ್ಟಾದರೂ ನೀರನ್ನು ಸೇವಿಸಿ.
- ನೀರಿನಂಶವುಳ್ಳ ಹಣ್ಣು ತಿನ್ನಿ - ಕಲ್ಲಂಗಡಿ, ಸ್ಟ್ರಾಬೆರಿ, ಬಾಳೆಹಣ್ಣು, ಹಲಸಿನಹಣ್ಣು, ದ್ರಾಕ್ಷಿ ತಿನ್ನುವುದರ ಜೊತೆಗೆ ತಾಜಾ ಹಣ್ಣಿನ ರಸವನ್ನು ಕುಡಿಯಿರಿ. 
- ನೀರಿನಂಶವುಳ್ಳ ತರಕಾರಿ - ಸೌತೆಕಾಯಿ, ಟೊಮೋಟೋ, ಕ್ಯಾರೆಟ್, ಬೀಟ್‌ರೂಟ್, ಸೋರೆಕಾಯಿಗಳನ್ನು ಹಸಿಯಾಗಿ ತಿನ್ನಿ. ಸಲಾಡ್ ರೀತಿ ತರಕಾರಿ ಪಾನೀಯದೊಂದಿಗೆ ಚಿಟಿಕೆ ಉಪ್ಪು ಬೆರಸುವುದರಿಂದಲೂ ನಿರ್ಜಲೀಕರಣ ವನ್ನು ತಡೆಗಟ್ಟಬಹುದು.
- ಗಂಜಿ ಊಟ- ರಾಗಿ ಗಂಜಿ, ಅಂಬಲಿ, ಅಕ್ಕಿ ಗಂಜಿ ಊಟ ಮಾಡಿ. ಇದಕ್ಕೆ ಸ್ವಲ್ಪ ಸಕ್ಕರೆ, ಬೆಲ್ಲ ಅಥವಾ ಉಪ್ಪನ್ನು ಸೇರಿಸಿ ತಿಂದರೂ ದೇಹಕ್ಕೆ ತಂಪು.
- ಎಳನೀರು, ತಣ್ಣೀರಿನ ಸ್ನಾನ, ಮಜ್ಜಿಗೆ ಉತ್ತಮ.ಜೊತೆಗೆ ಸ್ಪೈಸಿ ಫುಡ್‌ಗಳಿಗೆ ಕಡಿವಾಣ ಹಾಕಿ.