ಬೆಂಗಳೂರು (ಜ. 15): ಸಂಕ್ರಾಂತಿಯೆಂದು ಊರಿಗೆ ಊರೇ ಎಳ್ಳ, ಬೆಲ್ಲ, ಕೊಬ್ಬರಿ, ಕಡಲೆ ಮಿಶ್ರಣವನ್ನು ಹಂಚುತ್ತಾ ‘ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನ್ನಾಡೋಣ ಎಂದು ಹೇಳುತ್ತಾ ಒಬ್ಬರಿಗೊಬ್ಬರು ಶುಭಕೋರುವ ಜನ, ಒಮ್ಮೆ ಅಗೆದರೆ ಸಿಹಿಯಾದ ರಸವ ಚೆಲ್ಲುತ್ತಾ ಸುಖ ಸಂತೋಷ ಸಮೃದ್ಧಿಯಿಂದ ಬಾಳು ಹಸನಾಗಲಿ ಎನ್ನುವ ಕಬ್ಬು. ಇದೆಲ್ಲ ನಮ್ಮ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯ ಆಚರಣೆ. ಸಂಕ್ರಾಂತಿ ಎಂದ ಕೂಡಲೇ ನಮ್ಮ ಕಣ್ಣೆದುರು ಬರುವುದು ಇದಿಷ್ಟು ಸಂಗತಿಗಳು.

ವಿಜ್ಞಾನದ ಪ್ರಕಾರ ಸಂಕ್ರಾಂತಿ

* ಪೂರ್ವದಲ್ಲಿ ಸೂರ್ಯನ ಉದಯ ಮತ್ತು ಪಶ್ಚಿಮದಲ್ಲಿ ಅಸ್ತವಾಗುವ ಸೂರ್ಯ ಸರಿಯಾಗಿ ಹುಟ್ಟಿಮುಳುಗುವುದು ವರ್ಷದಲ್ಲಿ ಕೇವಲ ಎರಡು ದಿನ ಮಾತ್ರ. ಉಳಿದ ದಿನಗಳಲ್ಲಿ ಹೀಗೆ ಇರುವುದಿಲ್ಲ. ಇದಲ್ಲೆ ವಿಜ್ಞಾನದಲ್ಲಿ ಈಕ್ವಿನಾಕ್ಸ್‌ ಎನ್ನುತ್ತಾರೆ. ಅಂದು ಹಗಲಿರುಳನ್ನು ಸಮಾನವಾಗಿ ಅಂದರೆ 12 ಗಂಟೆ ಹಗಲು ಹಾಗೂ 12 ಗಂಟೆ ಇರುಳನ್ನು ಸರಿ ಪ್ರಮಾಣದಲ್ಲಿ ಹಂಚಿಕೊಳ್ಳುತ್ತವೆ.

* ಚಳಿಗಾಲದಲ್ಲಿ ಹಗಲು ಕಡಿಮೆ ಇದ್ದು ಇರುಳು ಜಾಸ್ತಿ ಇರುತ್ತಾದೆ. ಈ ಕಾಲದಲ್ಲಿ ಸೂರ್ಯ ದಕ್ಷಿಣದಲ್ಲಿ ಹುಟ್ಟುತ್ತಾನೆ. ಒಂದು ದಿನ ದಕ್ಷಿಣ ತುತ್ತತುದಿ ತಲುಪಿ ಮರುದಿನ ಬೆಳಗ್ಗೆ ಉತ್ತರದಲ್ಲಿ ಗೋಚರಿಸುತ್ತಾನೆ. ಅಂದರೆ ದಕ್ಷಿಣದ ಕಡೆ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿ ಉತ್ತರದಲ್ಲಿ ಕಾಣಿಸಿಕೊಳ್ಳುವ ಕಾಲವೇ ಉತ್ತರಾಯಣದ ದಿನ ಎನ್ನುತ್ತಾರೆ. ಇದು ಚಳಿಗಾಲ ಮುಗಿಯುವ ಕಾಲ ಎನ್ನಲಾಗುತ್ತದೆ.

* ಸೂರ್ಯ ತನ್ನ ಪಥವನ್ನು ಬದಲಾಯಿಸಿ ಅಂದರೆ ಉತ್ತರಕ್ಕೆ ತಿರುಗಿದ ನಂತರ ಅಲ್ಲಿಂದ ಆರು ತಿಂಗಳು ಉತ್ತರದಲ್ಲೇ ಗೋಚರಿಸುತ್ತಾನೆ. ಆಗ ಹಗಲಿನ ಪ್ರಮಾಣ ಹೆಚ್ಚಾಗಿ, ಇರುಳು ಕಡಿಮೆಯಾಗಿರುತ್ತದೆ. ಹೀಗೆ ಸೂರ್ತ ಪಥ ಬದಲಾಯಿಸಿದಾಗ ಬೇಸಿಗೆ ಆರಂಭವಾಯಿತೆಂದು ಅರ್ಥ. ಹೀಗೆ ಮುಂದೆ ಉತ್ತರದ ಕೊನೆಯ ಹಂತ ತಲುಪಿ ತನ್ನ ವಿರುದ್ಧ ದಿಕ್ಕು ಅಂದರೆ ದಕ್ಷಿಣಕ್ಕೆ ಪ್ರವೇಶಿಸಿ ಗೋಚರಿಸುತ್ತಾನೆ. ಆಗ ಬೇಸಿಗೆ ಮುಗಿದು ಮತ್ತೆ ಚಳಿಗಾಲ ಆರಂಭವಾಯಿತೆಂದು ಅರ್ಥ. ಇದನ್ನು ಕರ್ಕಾಟಕ ಸಂಕ್ರಾಂತಿ ಎಂದು ಕರೆಯುತ್ತಾರೆ.

*ಹೀಗೆ ಸೂರ್ಯ ತನ್ನ ಚನಲೆಯಿಂದ ಭೂಮಿಯ ಕಕ್ಷೆ ಸುಮಾರು 22 1/2 ಡಿಗ್ರಿ ಬಾಗಿರುವುದರಿಂದ ಯಾವುದಾದರೊಂದು ಸ್ಥಾನದಲ್ಲಿ ದಿನವೂ ಉದಯಿಸುತ್ತಾನೆ. ಇದು 8 ರ ಆಕೃತಿಯಂತೆ ಕಾಣುತ್ತದೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ‘ಅನಲೆಮ್ಮ’ ಎನ್ನುತ್ತಾರೆ. ಈ ಆಕೃತಿಯ ಒಂದು ನೆತ್ತಿಯ ಬಿಂದುವನ್ನು ‘ಸಮ್ಮರ್‌ ಸಾಲಿಸ್ಟಿಸ್‌’, ಅದರ ಅಡಿಯ ಬಿಂದುವನ್ನು ‘ವಿಂಟರ್‌ ಸಾಲಿಸ್ಟಿಸ್‌’ ಅಂದರೆ ಮಕರ ಸಂಕ್ರಾಂತಿಯ ದಿನವೆಂದು ಕರೆಯುತ್ತಾರೆ. ಅಂದರೆ 8ರ ಆಕೃತಿಯ ಮಧ್ಯದಲ್ಲಿ ಹಾದು ಹೋಗಿರುವ ರೇಖೆಗಳು ಪರಸ್ಪರ ಹಾದು ಹೋಗಿರುವ ಆ ಬಿಂದು ಈಕ್ವಿನೊಕ್ಸ್‌ ದಿನಗಳು ಎನ್ನಲಾಗುತ್ತದೆ. ಅದರ ಮುಂದೆ ಸಂಚರಿಸಿ ಅಡಿಯ ಬಿಂದುವನ್ನು ತಲುಪುವ ಕೇಂದ್ರವನ್ನು ದಕ್ಷಿಣಾಯನ ದಿನಗಳು ಎಂದು ಕರೆಯುತ್ತಾರೆ.

ಸಂಕ್ರಾಂತಿ ಶ್ಲೋಕ

ಪ್ರತಿಯೊಂದು ಹಬ್ಬದಲ್ಲಿ ನಮ್ಮ ಶಾಸ್ತ್ರಗಳು ಒಂದು ಒಂದು ವಿಷಯಗಳನ್ನು ಹೇಳಿದ್ದಾರೆ. ಅದರಲ್ಲಿ ಸಂಕ್ರಾಂತಿಯ ಕುರಿತಾಗಿ ನಿರ್ಣಯಸಿಂಧುವಿನಲ್ಲಿ ಹೀಗೆ ಹೇಳಲಾಗಿದೆ...

ತಸ್ಯಾಂ ಕೃಷ್ಣತೈಲೈಃ ಸ್ನಾನ ಕಾರ್ಯಂ ಚೀದ್ವರ್ತನಂ ಸುಭೈಃ

ತಿಲಾ ದೇಯಾಶ್ಚ ವಿಪ್ರೇಭ್ಯೌ ಸರ್ವದೇವೋತ್ತರಾಯಣೇ

ತಿಲ ತೈಲೇನ ದೀಪಾಶ್ಚ ದೇಯಾಃ ದೇವಗೃಹೇ ಶುಭಾಶಿಷಃ

ಸಂಕ್ರಾಂತಿಯಂದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಬ್ರಾಹ್ಮಣರಿಗೆ ಎಳ್ಳು ದಾನ ಕೊಡಬೇಕು. ದೇವಾಲಯಗಳಲ್ಲಿ ಎಳ್ಳಣ್ಣೆಯ ದೀಪ ಬೆಳಗಬೇಕು ಎಂಬುದಾಗಿದೆ.

ಇದರೊಂದಿಗೆ ಧರ್ಮ ಸಿಂಧುವಿನಲ್ಲಿ ಮತ್ತೊಂದು ಬಗೆಯಲ್ಲಿ ಸಂಕ್ರಾಂತಿಯನ್ನು ಹೀಗೆ ವಿವರಿಸಿದ್ದಾರೆ..

ಸಂಕ್ರಾಂತೌ ಯಾನಿ ದತ್ತಾನಿ ಹವ್ಯ-ಕವ್ಯಾನಿ ದಾತೃಭಿಃ

ತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿ ಜನ್ಮನಿ

ತಿಲಾ ದೇಯಾಶ್ಚ ಹೋತವ್ಯಾ ಭಕ್ಷಾಶ್ಬೆೃವೋತ್ತರಾಯಣೇಪಿ

ಇದರರ್ಥ ಉತ್ತರಾಯಣದ ಪುಣ್ಯಕಾಲದಂದು ನಾವು ಮಾಡಿದ ದಾನ ಧರ್ಮಗಳು ಜನ್ಮ ಜನ್ಮದಲ್ಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಈ ಶುಭದಿನ ತಿಲದಾನ, ತಿಲಹೋಮ, ತಿಲಭಕ್ಷಣಗಳಿಗೆ ವಿಶೇಷ ಪ್ರಾಶಸ್ತ್ಯವಿದೆ.