ಯುವತಿಯರಷ್ಟೇ ಅಲ್ಲ, ಯುವಕರೂ ಮೂಗಿನ ಕೂದಲು ಸ್ವಲ್ಪ ಹೊರಗಿಣುಕಿದರೂ ಅದನ್ನು ಕಟ್ ಮಾಡಿ ಸೌಂದರ್ಯಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳೋದು ಮಾಮೂಲು. ಆದರೆ ಈಗ ಮೂಗಿನ ಕೂದಲು ಉದ್ದವಿದ್ದಷ್ಟೂ ಸೌಂದರ್ಯ ಹೆಚ್ಚುತ್ತದೆ ಎಂಬ ಹೊಸ ಟ್ರೆಂಡ್ ಶುರುವಾಗಿದೆ. ಇನ್ನು ಮೇಲೆ ಕಣ್ಣಿನಲ್ಲಿ ನೀರು ಸುರಿಸುತ್ತಾ ಮೂಗಿನ ಕೂದಲನ್ನು ಕೀಳುವ ಅಭ್ಯಾಸಕ್ಕೆ ಬೈಬೈ ಹೇಳಬಹುದು. 

ಇಂಥದೊಂದು ಬ್ರೇವ್ ಆ್ಯಂಡ್ ಬ್ಯೂಟಿಫುಲ್(?) ಟ್ರೆಂಡ್ ಹುಟ್ಟುಹಾಕಿದ್ದು ಇನ್ಸ್ಟಾಗ್ರಾಮರ್ ಗ್ರೆಟ್ ಚೆನ್ ಚೆನ್. (@gret_chen_chen.) ಆಕೆ ಆರ್ಟಿಫಿಶಿಯಲ್ ಐಲ್ಯಾಶ್ ಅನ್ನು ಮೂಗಿಗೆ ಬಳಸಿ ಈ ಲುಕ್ ಸಾಧಿಸಿದ್ದಾಳೆ. ಆದರೆ, ನಿಮಗೆ ನ್ಯಾಚುರಲ್ ಆಗಿಯೇ ಮೂಗಿನಲ್ಲಿ ಉದ್ದ ಕೂದಲು ಹುಟ್ಟುವಂತಿದ್ದರೆ ಬೇರೆ ಕೂದಲು ಇಟ್ಟುಕೊಳ್ಳುವ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. 

ಚೆನ್ ಚೆನ್‌ಳ ಈ ಪ್ರಯೋಗಕ್ಕೆ ಬಹಳಷ್ಟು ಫಾಲೋವರ್ಸ್ ಹುಟ್ಟಿಕೊಂಡಿದ್ದು ನೋಸ್ ಹೇರ್ ಎಕ್ಸ್ಟೆನ್ಶನ್ ಟ್ಯಾಗ್ (#nosehairextensions) ಸಖತ್ ಫೇಮಸ್ ಆಗಿದೆ. ಹಾಗಿದ್ದರೆ ಇನ್ನು ಮುಂದೆ ಮೂಗಿನ ಕೂದಲು ಬಾಚಲು ಪುಟ್ಟ ಉಗುರುದ್ದದ ಬಾಚಣಿಕೆಗಳು ಮಾರುಕಟ್ಟೆಗೆ ಬಂದರೂ ಆಶ್ಚರ್ಯ ಪಡಬೇಕಿಲ್ಲ! 

ಫ್ಯಾಷನ್‌ಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಂದು ವೇಳೆ ನಿಮಗೆ ಈ ಬ್ಯೂಟಿ ಟ್ರೆಂಡ್ ಬಗ್ಗೆ ಕ್ರೇಜ್ ಹುಟ್ಟಿದ್ದಲ್ಲಿ, ನಾಸ್ಟ್ರಿಲ್ ಹೇರ್ ಬಗ್ಗೆ ಕೆಲ ಆಸಕ್ತಿಕರ ವಿಷಯಗಳನ್ನು ತಿಳಿಸುತ್ತೇವೆ ಕೇಳಿ. ಮೂಗಿನ ಈ ಕೂದಲು ದಿನವೊಂದಕ್ಕೆ 0.35 ಮಿಮೀ ಅಷ್ಟು ಉದ್ದ ಬೆಳೆಯುತ್ತದೆ. ಧೂಳು, ಕ್ರಿಮಿ ಇತರೆ ಬೇಡದ ವಸ್ತುಗಳು ದೇಹಕ್ಕೆ ನುಸುಳದಂತೆ ಇದು ತನ್ನ ಮಟ್ಟಿಗೆ ಕೆಲಸ ಮಾಡುತ್ತದೆ. ಆರೋಗ್ಯ ಕಾಪಾಡುತ್ತಿದ್ದ ಮೂಗಿನೊಳಗಿನ ಮೀಸೆ ಇದೀಗ ಅಂದ ಹೆಚ್ಚಿಸಲೂ ಸಜ್ಜಾಗಿದೆ.