ವಿದೇಶ ಬಿಟ್ಟು ಗದ್ದೆ ಕೆಲಸಕ್ಕೆ ಇಳಿದ ಎಂಎಸ್ಸಿ ಪದವೀಧರ

M.Se Graduate left job and Opt Agriculture
Highlights

ಸ್ವೀಡನ್‌ನಲ್ಲಿ ಇಂಟರ್ನ್‌ಶಿಪ್, ಬೆಲ್ಜಿಯಂನ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೈತುಂಬ ಸಂಬಳದ ಕೆಲಸ. ಆದರೆ  ಕೃಷಿಯ ಆಸಕ್ತಿ ಮುಂದೆ ಉಳಿದದ್ದೆಲ್ಲ ಗೌಣ ಅನಿಸಿದ್ದೇ  ಕೆಲಸಕ್ಕೆ ಗುಡ್‌ಬೈ ಹೇಳಿ ಕೃಷಿಯಲ್ಲಿ ತೊಡಗಿಸಿಕೊಂಡರು ಅಭಿಷೇಕ್ ಗಟ್ಟಿ. ಸಾವಯವ ರೀತಿಯಲ್ಲಿ ಕೃಷಿ ಮಾಡಿ ವಿವಿಧ  ಪ್ರಯೋಗಗಳ ಮೂಲಕ ಯಶಸ್ವಿ ರೈತ ಎನಿಸಿಕೊಂಡದ್ದು  ಇವರ ಹೆಗ್ಗಳಿಕೆ.

ಸ್ವೀಡನ್‌ನಲ್ಲಿ ಇಂಟರ್ನ್‌ಶಿಪ್, ಬೆಲ್ಜಿಯಂನ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೈತುಂಬ ಸಂಬಳದ ಕೆಲಸ. ಆದರೆ  ಕೃಷಿಯ ಆಸಕ್ತಿ ಮುಂದೆ ಉಳಿದದ್ದೆಲ್ಲ ಗೌಣ ಅನಿಸಿದ್ದೇ  ಕೆಲಸಕ್ಕೆ ಗುಡ್‌ಬೈ ಹೇಳಿ ಕೃಷಿಯಲ್ಲಿ ತೊಡಗಿಸಿಕೊಂಡರು ಅಭಿಷೇಕ್ ಗಟ್ಟಿ. ಸಾವಯವ ರೀತಿಯಲ್ಲಿ ಕೃಷಿ ಮಾಡಿ ವಿವಿಧ  ಪ್ರಯೋಗಗಳ ಮೂಲಕ ಯಶಸ್ವಿ ರೈತ ಎನಿಸಿಕೊಂಡದ್ದು  ಇವರ ಹೆಗ್ಗಳಿಕೆ.

ಮೂಡುಬಿದ್ರೆಯಿಂದ ಸಿದ್ದಕಟ್ಟೆ ಬಸ್‌ಸ್ಟಾಂಡಿನಲ್ಲಿ ಇಳಿದು ಎಡಬದಿಯ ರಸ್ತೆಯಲ್ಲಿ 1 ಕಿ.ಮೀ. ಪಯಣಿಸಿದರೆ ಸಿಗುವುದೇ ಕಂಗೆರಬೆಟ್ಟು. ಅಭಿಷೇಕ್ ಗಟ್ಟಿ ಅವರು ಬಂದಾಗ  ಇದು ಕಾಡು ಗುಡ್ಡೆಯಂತಿತ್ತು. ಇವರು ನಿರ್ವಹಿಸಿದ ಮೊಟ್ಟ ಮೊದಲ ಕೆಲಸ ಭೂಮಿಯನ್ನು ಸಮತಟ್ಟುಗೊಳಿಸಿದ್ದು. ಆರು ಎಕರೆಯ ಬೃಹತ್ ಕಾಡುಗುಡ್ಡೆಯ ಜಾಗದಲ್ಲಿ 52 ಸೆನ್ಸ್  ಜಾಗವನ್ನು ಕೃಷಿಗೆ ಅಣಿಗೊಳಿಸಿದರು. ಆ ಭೂಮಿಯ ನಡುವಿನಲ್ಲೇ ಕೃಷಿ ಕಾಯಕಕ್ಕಾಗಿ ಒಂದು ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡಿದ್ದಾರೆ.

ಸ್ವಂತ ಬಾವಿ ತೋಡಿದರು:

ಮೊದಲೇ ತೀರ್ಮಾನಿಸಿಕೊಂಡ ಹಾಗೆ ಸಂಪೂರ್ಣ ಸಾವಯವ ಕೃಷಿಗೆ ಇಳಿದ ಅಭಿಷೇಕ್ ಗಟ್ಟಿಯವರು ನೀರಿನ ಆಸರೆಗಾಗಿ ಬಾವಿ ತೋಡ ತೊಡಗಿದರು. ಅಭಿಷೇಕ್ ಹಾಗೂ ಮತ್ತೊರ್ವರೊಂದಿಗೆ ದಿನಕ್ಕೆ ಸ್ವಲ್ಪ ಸ್ವಲ್ಪ ತೋಡ ತೊಡಗಿದರು. ಪ್ರಸ್ತುತ 24 ಅಡಿ ಆಳಕ್ಕೆ ತೋಡುವಾಗ ಮಣ್ಣು ಕುಸಿಯ ತೊಡಗಿತು. ಅದಕ್ಕೆ ರಿಂಗ್ ಹಾಕದೆ ಬೇರೆ  ಮಾರ್ಗವೇ ಇರಲಿಲ್ಲ. ಈಗ ಬಾವಿಯಲ್ಲಿ ಒಸರಿದ್ದು, ಕೃಷಿಗೆ ಅದರ ನೀರನ್ನೇ ಬಳಸಿಕೊಳ್ಳುತ್ತಿದ್ದಾರೆ.

ನೀರಿನ ಕಟ್ಟ: 
ಅಭಿಷೇಕ್ ಗಟ್ಟಿಯವರು ನೀರಿಗಾಗಿ ಅಳವಡಿಸಿದ ಇನ್ನೊಂದು ವಿನೂತನ ಕ್ರಮವೇನೆಂದರೆ ತೋಡಿನಲ್ಲಿ ಹರಿಯುತ್ತಿದ್ದ ನೀರಿಗೆ ಕಟ್ಟ ಹಾಕಿದ್ದು. ನಾಲ್ಕು ಉದ್ದ ಕಂಬಗಳನ್ನು ಹುಗಿದು, ಅದಕ್ಕೆ ನಾಲ್ಕು ಅಡ್ಡ ಕಂಬಗಳನ್ನು ಕಟ್ಟಿ ಎರಡು ಅಡಿ ಮಣ್ಣು ಹಾಕುತ್ತಾ ಅದರ ಮೇಲ್ಮೆಗೆ ಬೈ ಹುಲ್ಲನ್ನು ಹಾಕುತ್ತಾ ಹೋದರು. ಮತ್ತೆ ಅದರ ಮೇಲೆ ಮಣ್ಣನ್ನು ಹಾಕುತ್ತಾ ಹೋಗಿ, ಪುನಃ ಬೈ ಹುಲ್ಲನ್ನು  ಹಾಕುತ್ತಾ ಹೀಗೆ ಐದು ಪದರದಲ್ಲಿ ಕಟ್ಟ ನಿರ್ಮಿಸಿದರು. ಇದರ ಫಲವಾಗಿ ಈಗಲೂ ನೀರಿದೆ. ಭೂಮಿಯಲ್ಲಿ ನೀರಿನ  ಪಸೆಯಿದೆ.
 

ಸಾವಯವದಲ್ಲಿ ಹತ್ತಾರು ಪ್ರಯೋಗ:

ಸುಮಾರು 10 ಸೆಂಟ್ಸ್ ಜಾಗದಲ್ಲಿ ಬಾಳೆ ಕೃಷಿ ಮಾಡಿದ್ದಾರೆ. ಇದಕ್ಕೆ ತರಗೆಲೆ, ಸಗಣಿ, ಜೀವಾಮೃತವನ್ನಷ್ಟೇ ಹಾಕುತ್ತಾರೆ. ವಾರಕ್ಕೊಮ್ಮೆ ನೀರು ಪೂರೈಸುತ್ತಾರೆ. ಕದೋಳಿ, ಬೂದು, ನೇಂದ್ರ ಇತ್ಯಾದಿಗಳು ಭರ್ಜರಿ ಇಳುವರಿ ಪಡೆದಿದ್ದನ್ನು ಹೇಳಿಕೊಳ್ಳುತ್ತಾರೆ. ಸುಮಾರು 30 ಸೆಂಟ್ಸ್ ಜಾಗದಲ್ಲಿ ನಿರಂತರ ಇಳುವರಿ ಪಡೆಯುವ ತೊಂಡೆ, ಅಲಸಂಡೆ, ಪಡುವಳಕಾಯಿ, ಬಸಳೆ, ಮುಳ್ಳುಸೌತೆ, ಹರಿವೆ ಇತ್ಯಾದಿಗಳನ್ನು ನಾಟಿ ಮಾಡಿದ್ದಾರೆ.  ತೊಂಡೆ, ಅಲಸಂಡೆ, ಪಡುವಲ ಕಾಯಿಗೆ ಸಾಲು ಮಾಡಿ  ಬೀಜ ಹಾಕಿ, ಮೊಳಕೆಯೊಡೆದಾಗ, ಕೋಲೂರಿದ್ದಾರೆ. ನಾಲ್ಕು  ಕಡೆ ಕಂಬ ಹಾಕಿ ಅದಕ್ಕೆ ಅಡ್ಡಕೋಲು ಕಟ್ಟಿ ಅದರ ಮೇಲೆ
ಹೆಗ್ಗೆಗಳನ್ನು ಹಾಕಿದ್ದಾರೆ. ಬಳ್ಳಿಯನ್ನು ಆ ಚಪ್ಪರಕ್ಕೆ ಹಾಯ ಬಿಟ್ಟಿದ್ದಾರೆ. ಪ್ರಸ್ತುತ ವಾರಕ್ಕೊಮ್ಮೆ ತೊಂಡೆ, ಅಲಸಂಡೆ,  ಪಡುವಲ ಕಾಯಿ ಕೊಯಿಲು ಮಾಡಿ ಮಂಗಳೂರಿನ ಸಾವಯವ ಕೃಷಿ ಕೇಂದ್ರಕ್ಕೆ ಕೊಂಡೊಯ್ದು ತಾವೇ ಮಾರಾಟ  ಮಾಡುತ್ತಾರೆ. ಕಾಡಿನ ನಡುವೆ ಬೆಳೆದ ಶುಂಠಿ, ಅರಸಿನ, ಮೆಣಸು, ಜೀರಿಗೆ, ಲಾವಂಚ, ವಿಟಮಿನ್ ಸೊಪ್ಪು  ಇತ್ಯಾದಿಗಳನ್ನು ಶೇಖರಿಸಿ ಸಾವಯವ ಕೇಂದ್ರದಲ್ಲಿ
ಮಾರಾಟ ಮಾಡುತ್ತಾರೆ.

80 ಕೆಜಿ ತೂಗುವ ಮರಗೆಣಸು:

ಸಾಲು ಗೆಣಸು ಬೆಳೆಯಿಸಿದ್ದು, ಅದರಿಂದ ಅತ್ಯುತ್ತಮ ಇಳುವರಿ ಇದೆ. ಕೃಷಿ ಜಾಗದಲ್ಲಿ ಬದಿಯಲ್ಲಿ ಮರಗೆಣಸು ಹಾಕಿದ್ದು ಅದರಲ್ಲಿ 40 ರಿಂದ 80 ಕೆ.ಜಿಯಷ್ಟು ತೂಕದ ಗೆಣಸು ಪಡೆದಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈ ಮರಗೆಣಸನ್ನು ಬೆಳಿಗ್ಗೆ 7 ಕ್ಕೆ ಮಾರಾಟಕ್ಕೆ ಕೃಷಿ ಕೇಂದ್ರಕ್ಕೆ ಕೊಂಡೊಯ್ದಾಗ ಅರ್ಧ  ಗಂಟೆಯಲ್ಲಿ ಖಾಲಿಯಾಗಿ ಬಹಳಷ್ಟು ಮಂದಿ ಬೇಡಿಕೆ  ಸಲ್ಲಿಸಿದ್ದರಂತೆ. ದ.ಕ.ದಲ್ಲಿ ತೊಗರಿ ಬೇಳೆ ಬೆಳೆಯುವುದಿಲ್ಲ  ಎನ್ನುವವರಿಗೆ ಪ್ರಯೋಗಾತ್ಮಕವಾಗಿ ತೊಗರಿಬೆಳೆ ಬೆಳೆದು  ಇಳುವರಿ ಪಡೆದಿದ್ದಾರೆ. ಮುಂದಿನ ವರ್ಷಗಳಲ್ಲಿ ಬೃಹತ್  ಪ್ರಮಾಣದಲ್ಲಿ ಬೆಳೆಯುವ ಯೋಜನೆ ಹಾಕಿಕೊಂಡಿದ್ದಾರೆ.

ಕುಟ್ಟಿ ಅಕ್ಕಿ ಮಾಡ್ತಾರೆ!:

ತಮ್ಮ ಕೃಷಿ ಭೂಮಿಯಲ್ಲಿ ನಶಿಸಿ  ಹೋಗುತ್ತಿರುವ ತಳಿಯನ್ನು ಬೆಳೆಯಿಸಿದ್ದಾರೆ. ಇಳುವರಿ ಪಡೆದಿದ್ದನ್ನು ಬೇಯಿಸಿ ತಾವೇ ಕುಟ್ಟಿ ಅಕ್ಕಿ ಮಾಡಿರುತ್ತಾರೆ.  ಈಗ ಮಿಲ್‌ಗಳಲ್ಲಿ ಅಕ್ಕಿ ಮಾಡಿ ಅದರಲ್ಲಿರುವ ಪಿಷ್ಠ ಮಾಯವಾಗಿರುತ್ತದೆ. ಈಗ ಕುಟ್ಟಿ ಮಾಡಿದ ಅಕ್ಕಿಗೆ ಬಹಳಷ್ಟು  ಬೇಡಿಕೆಯಿದೆ. ಇವರು ಕುಟ್ಟಿ ಮಾಡಿದ ಅಕ್ಕಿ ಕೊಂಡು ಹೋದ  ಕೆಲವೇ ನಿಮಿಷಗಳಲ್ಲಿ ಮಾರಾಟವಾಗುವುದಲ್ಲದೆ, ನೂರಾರು
ಕೆ.ಜಿ.ಯ ಬೇಡಿಕೆ ಸಲ್ಲಿಸುತ್ತಾರೆ ಎಂಬುದು ಅಭಿಷೇಕ್‌ರವರ  ಹೇಳಿಕೆ. ಹೆಚ್ಚಿನ ಮಾಹಿತಿಗೆ ಅಭಿಷೇಕ್‌ರವರ ಸಂಪರ್ಕ ಸಂಖ್ಯೆ 9686753573
 

loader