ಲಂಡನ್ (ಜ. 13): ಫೋಟೋ ಹಂಚಿಕೊಳ್ಳಲು ಇರುವ ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣವು ಮನುಷ್ಯನ ಮೆದುಳಿನ ಮೇಲೆ ಕೆಟ್ಟಪರಿಣಾಮ ಬೀರುವ ಸಾಮಾಜಿಕ ತಾಣ ಎಂದು ಸಂಶೋಧನೆಯೊಂದು ಹೇಳಿದೆ.

‘ರಾಯಲ್‌ ಸೊಸೈಟಿ ಫಾರ್‌ ಪಬ್ಲಿಕ್‌ ಹೆಲ್ತ್‌ ಅಂಡ್‌ ಯಂಗ್‌ ಹೆಲ್ತ್‌ ಮೂಮೆಂಟ್‌’ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಮಾನವ ಮೆದುಳಿನ ಮೇಲೆ ಕೆಟ್ಟಪರಿಣಾಮ ಬೀರುವ ವಿಚಾರದಲ್ಲಿ ಇನ್‌ಸ್ಟಾಗ್ರಾಂ ಮೊದಲ ಸ್ಥಾನ ಮತ್ತು ಸ್ನಾ್ಯಪ್‌ಚಾಟ್‌ 2ನೇ ಜಾಲತಾಣ ಎಂಬ ಅಪಖ್ಯಾತಿಗೆ ಗುರಿಯಾಗಿದೆ.

ಈ ಸಂಶೋಧನೆಯಲ್ಲಿ ಪಾಲ್ಗೊಂಡ ಒಟ್ಟು 14ರಿಂದ 24 ವಯೋಮಾನದ 1500 ಯುವಕ-ಯುವತಿಯರಿಗೆ ತಮ್ಮ ನಿದ್ದೆ, ಆತಂಕ, ಗಾಬರಿ, ಏನನ್ನೋ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂಬ ಭಾವನೆ ಸೇರಿದಂತೆ ಇತರ ಅಂಶಗಳ ಮೇಲೆ ಯಾವ ಸಾಮಾಜಿಕ ಮಾಧ್ಯಮ ಪರಿಣಾಮ ಬೀರುತ್ತದೆ. ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯರು ಮತ್ತು ಯುವತಿಯರಿಗೆ ತಮ್ಮ ಅಂದ ಚೆಂದದ ಫೋಟೋ ಹಾಕಲು ಉತ್ತಮ ವೇದಿಕೆಯಾಗಿದ್ದರೂ, ಆ ಫೋಟೋ ಪ್ರಕಟಿಸಿದ ಬಳಿಕ, ತಮ್ಮ ಫೋಟೊವನ್ನು ಇತರರ ಫೋಟೋ ಜೊತೆಗೆ ಯುವತಿಯರು ಹೋಲಿಸಿಕೊಳ್ಳುತ್ತಾರೆ. ಇದರಿಂದ ಅವರಲ್ಲಿ ಅಭದ್ರತೆಯ ಭಾವ ಕಾಡುತ್ತದೆ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.