ಮೌತ್‌ವಾಶ್ ಬಳಸೋದು ಹೇಗೆ?
ಬಾಯಿ ಸ್ವಚ್ಛವಾಗಿರಲು ಮೌತ್‌ವಾಶ್ ಎಷ್ಟರಮಟ್ಟಿಗೆ ಸಹಕಾರಿ? ಹಲ್ಲುಜ್ಜದೇ ಕೇವಲ ಮೌತ್‌ವಾಶ್ ಅಷ್ಟೇ ಮಾಡಿದರೆ ಏನಾಗುತ್ತೆ? ನಿತ್ಯ ನಮ್ಮ ಬಾಯಿ, ಹಲ್ಲುಗಳ ಕ್ಲೀನಿಂಗ್ ಯಾವ ಥರ ಇರಬೇಕು? ಇಲ್ಲಿದೆ ಉತ್ತರ.
‘ಬೆಳಿಗ್ಗೆ ಎದ್ದೊಡನೆ ಬಾಯಿ ವಾಸನೆ ಬರುತ್ತೆ.ಬ್ರಶ್ ಮಾಡೋಕೆ ಟೈಮೇ ಇರಲ್ಲ.ಅದಕ್ಕೇ ಮೌತ್ ವಾಶ್ ಹಾಕಿ ಚೆನ್ನಾಗಿ ಬಾಯಿ ತೊಳೀತೀನಿ. ಮಾಡಲೂ ಸುಲಭ, ಬಾಯಿಯೂ ಫ್ರೆಶ್ ಆಗಿರುತ್ತೆ’ ಆಫೀಸಿನಲ್ಲಿ ಕೆಲಸ ಮಾಡುವ ಪುಟ್ಟ ಮಗುವಿನ ತಾಯಿ ನೀತಾಳ ನುಡಿ.
ಮೌತ್ ವಾಶ್ ಉಪಯೋಗಿಸುವುದೇನೋ ಸರಿ, ಆದರೆ ಅದು ಬ್ರಶಿಂಗ್ ಗೆ ಬದಲಿಯಲ್ಲ,ಪೂರಕ ಅಷ್ಟೇ.
ಇಂದು ಮಾರುಕಟ್ಟೆಯಲ್ಲಿ ನಾನಾ ರುಚಿ, ಸುವಾಸನೆಯ ಮೌತ್ ವಾಶ್‌ಗಳು ಲಭ್ಯವಿದೆ. ಅತಿ ಸಾಮಾನ್ಯವಾಗಿ ಬಾಯಿಯ ದುರ್ವಾಸನೆ ಹೋಗಲಾಡಿಸಿ ಆಹ್ಲಾದಕರ ಸುಗಂಧಕ್ಕಾಗಿ ಇವುಗಳನ್ನು ಉಪಯೋಗಿಸಲಾಗುತ್ತದೆ.
ಸಾಮಾಜಿಕವಾಗಿ ಇನ್ನೊಬ್ಬರೊಡನೆ ಬೆರೆಯುವಾಗ ಹಿಂಜರಿಕೆ ಇಲ್ಲದೇ ಒಡನಾಡಲು ಆತ್ಮ ವಿಶ್ವಾಸವನ್ನು ಇದು ತುಂಬುತ್ತದೆ. ಇದಲ್ಲದೆ ಫ್ಲೋರೈಡ್ ಇರುವಂಥ ಮೌತ್‌ವಾಶ್ ಗಳನ್ನು ಬಳಸಿದಾಗ ಅದು ಹಲ್ಲುಗಳನ್ನು ಬಲಪಡಿಸುತ್ತದೆ. ಬಾಯಲ್ಲಿರುವ ಹಾನಿಕಾರಕ ಸೂಕ್ಷ್ಮಾಣುಜೀವಿಗಳನ್ನು ನಿಯಂತ್ರಿಸುತ್ತದೆ. ಹೀಗಾಗಿ ಉತ್ಪತ್ತಿಯಾಗುವ ಆಸಿಡ್ ವಿರುದ್ಧ ಹೋರಾಡುತ್ತವೆ. ಆ ಮೂಲಕ ಹುಳುಕನ್ನು ನಿಯಂತ್ರಿಸುವಲ್ಲಿ ಸಹಾಯಕ ಎನ್ನಲಾಗುತ್ತದೆ.
ವಸಡಿನ ಉರಿಯೂತ ಮತ್ತು ಮೂಳೆಯ ಸೋಂಕು ಇದ್ದಾಗಲೂ ಬಾಯಿಯನ್ನು ರೋಗಾಣುಗಳಿಂದ ದೂರವಿಡಲು ಇವುಗಳನ್ನು ಬಳಸಲಾಗುತ್ತದೆ.ಕೆಲವು ಬಾರಿ ಫಂಗಲ್ ಸೋಂಕು ಇದ್ದಾಗ ವಿಶೇಷ ರೀತಿಯ ಮೌತ್ ವಾಶ್ ಬಳಸುವ ಸೂಚನೆ ನೀಡಲಾಗುತ್ತದೆ.ಹೀಗೆ ಆಯಾ ಪರಿಸ್ಥಿತಿಗೆ ತಕ್ಕದಾಗಿ ಮೌತ್‌ವಾಶ್‌ಗಳ ರಾಸಾಯನಿಕಗಳು ಭಿನ್ನವಾಗಿರುತ್ತವೆ.
ಮೌತ್‌ವಾಶ್ ಬಳಸುವ ವಿಧಾನ:
- ಬಳಸುವ ವಿಧಾನ ಕುರಿತು ತಯಾರಕರು, ಸೂಚನೆಗಳನ್ನು ಬಾಟಲ್’ನಲ್ಲಿ ಮುದ್ರಿಸಿರುತ್ತಾರೆ.ಅದನ್ನು ಬಳಸುವ ಮುನ್ನ ಓದಬೇಕು. ಕೆಲವನ್ನು ಹಾಗೇ ನೇರವಾಗಿ ಬಳಸಿದರೆ ಮತ್ತೆ ಕೆಲವನ್ನು ನೀರಿನೊಡನೆ ಬೆರೆಸಿ ಉಪಯೋಗಿಸಬೇಕು. ತೆಗೆದುಕೊಳ್ಳಬೇಕಾದ ಪ್ರಮಾಣವೂ ಕಂಪನಿಗಳ ಮೇಲೆ ನಿರ್ಧಾರವಾಗಿರುತ್ತದೆ.
- ಸಾಧಾರಣವಾಗಿ 15-20 ಮಿಲಿ ಲೀ ಮೌತ್‌ವಾಶ್ ಬಳಸಬೇಕಾಗುತ್ತದೆ.
- ಮೂವತ್ತು ಸೆಕೆಂಡ್ ಕಾಲ ಮೌತ್‌ವಾಶ್ ಬಾಯಲ್ಲಿಟ್ಟು ಎಲ್ಲಾ ಕಡೆಗೆ ತಾಗುವಂತೆ
- ಚಲನೆ ಮಾಡಬೇಕು. ನಂತರ ಮೌತ್‌ವಾಶ್ ನಿಂದ ಒಂದು ನಿಮಿಷ ಬಾಯಿ ಮುಕ್ಕಳಿಸ
- ಬೇಕು. ಇದರಿಂದ ಬಾಯಿಯ ಮತ್ತು ನಾಲಿಗೆಯ ಹಿಂಭಾಗ ತೊಳೆಯಲ್ಪಡುತ್ತದೆ.
- ಮೌತ್‌ವಾಶ್ ನುಂಗದೇ ಹೊರಗೆ ಉಗುಳಬೇಕು.
ಹಲ್ಲಿನ ಸ್ವಚ್ಛತೆ ಹೀಗಿರಲಿ:
- ಮೊದಲು ದಂತದಾರ ಬಳಸಿ ಹಲ್ಲಿನ ಸಂದಿಗಳಲ್ಲಿ ಸಿಲುಕಿರುವ ಆಹಾರದ ಸಣ್ಣ ಕಣಗಳನ್ನು ತೆಗೆಯಬೇಕು.
- ಸ್ವಚ್ಛ ಶುದ್ಧ ನೀರಿನಲ್ಲಿ ಬಾಯಿ ಮುಕ್ಕಳಿಸಿ ಆ ಸಣ್ಣಕಣಗಳನ್ನು ಉಗಿಯಬೇಕು.
- ಮೌತ್‌ವಾಶ್ ಬಳಸಿ ಚೆನ್ನಾಗಿ ಬಾಯಿ ಮುಕ್ಕಳಿಸಬೇಕು.
- ಬಾಯಿಗೆ ನೀರು ಹಾಕದೇ ಪೇಸ್ಟ್ ಮತ್ತು ಬ್ರಶ್ ಉಪಯೋಗಿಸಿ ಮೂರು ನಿಮಿಷ ಹಲ್ಲು ಉಜ್ಜಬೇಕು.ಕಡೆಯಲ್ಲಿ ಪೇಸ್ಟ್ ನೊರೆ ಉಗಿಯಬೇಕು.
- ಕೂಡಲೇ ಬಾಯಿಗೆ ನೀರು ಹಾಕಿ ತೊಳೆಯಬಾರದು,ಏಕೆಂದರೆ ಪೇಸ್ಟ್ ಮತ್ತು ಮೌತ್‌ವಾಶ್‌ನಲ್ಲಿರುವ ಉಪಯುಕ್ತ ವಸ್ತುಗಳ ಪರಿಣಾಮದಲ್ಲಿ ವ್ಯತ್ಯಾಸವಾಗುತ್ತದೆ.
ಮೌತ್‌ವಾಶ್‌ನ ಸೈಡ್‌ಎಫೆಕ್ಟ್‌ಗಳು:
- ಹಲ್ಲುಗಳು ಕಂದು ಬಣ್ಣಕ್ಕೆ ತಿರುಗುವುದು,ಬಾಯಿ ಉರಿಯುವಿಕೆ,ರುಚಿಯಲ್ಲಿ ವ್ಯತ್ಯಾಸ ,ರಾಸಾಯನಿಕಗಳಿಗೆ ಅಲರ್ಜಿ ಉಂಟಾಗಬಹುದು.
- ಎಲ್ಲಕ್ಕಿಂತ ಮುಖ್ಯವಾಗಿ ಬ್ರಶಿಂಗ್‌ಗೆ ಬದಲಿಯಾಗಿ ಇದನ್ನು ಬಳಸಬಾರದು.ಬಾಯಿಯ ಸ್ವಚ್ಛತೆಗೆ ಬ್ರಶಿಂಗ್ ಕಡ್ಡಾಯ.ಇದನ್ನು ನಿರ್ಲಕ್ಷಿಸಿದಾಗ ಬಾಯಿ,ಹಲ್ಲು ಮತ್ತು ನಾಲಗೆಯಲ್ಲಿ ಕೊಳೆ ಸೇರಿ ಬಾಯಿಯಿಂದ ಕೆಟ್ಟ ವಾಸನೆ (ಹಾಲಿಟೋಸಿಸ್) ಹೊರಹೊಮ್ಮುತ್ತದೆ. ಇದನ್ನು ಹೋಗಲಾಡಿಸಲು ಅನೇಕರು ಮೌತ್‌ವಾಶ್‌ಗಳ ಮೊರೆ ಹೋಗುತ್ತಾರೆ.
- ತಾತ್ಕಾಲಿಕವಾಗಿ ಕೆಟ್ಟ ವಾಸನೆ ಕಡಿಮೆಯಾದರೂ ದುರ್ವಾಸನೆಯ ಮೂಲ ಸ್ವಚ್ಛತೆಯ ಕೊರತೆ,ಹಲ್ಲಿನಲ್ಲಿ ಗಾರೆ ಕಟ್ಟುವಿಕೆ. ಹಾಗಾಗಿ ಅದನ್ನು ಸರಿಪಡಿಸುವುದು ಬಹಳ ಮುಖ್ಯ.ಬರೀ ಮೌತ್‌ವಾಶ್ ಬಳಸುವುದರಿಂದ ಸಮಸ್ಯೆ ಹಾಗೇ ಮುಂದುವರಿದು,ದಂತಾರೋಗ್ಯಕ್ಕೆ ಹಾನಿ.