Emotional Story: ನಮ್ಮ ಜೀವನದಲ್ಲಿ ನಾವು ಸಾಯುವವರೆಗೂ ಮರೆಯಲಾಗದ ಕೆಲವು ಕ್ಷಣಗಳಿವೆ. ಅವುಗಳ ಬಗ್ಗೆ ಯೋಚಿಸುವುದು ನಮಗೆ ಅಪಾರ ಸಂತೋಷವನ್ನು ತರಬಹುದು ಅಥವಾ ಆಳವಾದ ಚಿಂತನೆಗೂ ಹಚ್ಚಬಹುದು.

ಕೆಲವೊಮ್ಮೆ ಜೀವನದಲ್ಲಿ ನಾವು ಮಾಡಿದ ದೊಡ್ಡ ಸಾಧನೆಗಳೇನು ಎಂದು ಹಿಂತಿರುಗಿ ನೋಡಿದಾಗ ಸಂಪತ್ತು, ಯಶಸ್ಸು ಯಾವುದೂ ಅಲ್ಲ ಅನಿಸತೊಡಗುತ್ತದೆ. ಬದಲಿಗೆ ನಮಗೆ ಸಂತೋಷ, ಶಾಂತಿ ಮತ್ತು ತೃಪ್ತಿಯನ್ನ ಕೊಡುವ ಸಣ್ಣ ಸಣ್ಣ ಕ್ಷಣಗಳೇ ನಿಜವಾದ ಸಾಧನೆ ಎಂಬುದು ಈ ಸ್ಟೋರಿ ಕೇಳಿದ ಮೇಲೆ ಅನಿಸುತ್ತದೆ. ಹೌದು. ನಮಗಾಗಿ ಎಲ್ಲವನ್ನೂ ತ್ಯಾಗ ಮಾಡಿದವರಿಗೆ ನಾವೇ ಸಂತೋಷ ನೀಡದಿದ್ದರೆ ಹೇಗೆ ಹೇಳಿ?. ಇಷ್ಟೆಲ್ಲಾ ವಿಚಾರ ಈಗ್ಯಾಕೆ ಅಂತೀರಾ. ಇತ್ತೀಚೆಗೆ ಒಬ್ಬ ವ್ಯಕ್ತಿ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ರೆಡ್ಡಿಟ್‌ನಲ್ಲಿ, ಅವರು ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ತಾಯಿಯ ದೊಡ್ಡ ಆಸೆಯನ್ನು ಹೇಗೆ ಪೂರೈಸಿದರು ಎಂಬುದನ್ನು ವಿವರಿಸಿದ್ದಾರೆ.

ಆ ವ್ಯಕ್ತಿ ತನ್ನ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ, "ಏಪ್ರಿಲ್ 2021 ರ ಹೊತ್ತಿಗೆ ತಾಯಿ 4 ನೇ ಹಂತದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದರು ಮತ್ತು ಅವರಿಗೆ ತಮ್ಮ ಜೀವನದ ಅಂತ್ಯ ಸಮೀಪಿಸುತ್ತಿರುವುದು ಸಂಪೂರ್ಣವಾಗಿ ತಿಳಿದಿತ್ತು. ತಂದೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ (UN Peacekeeping Force) ಸೇವೆ ಸಲ್ಲಿಸುತ್ತಿದ್ದರಿಂದ ಚಿಕಿತ್ಸೆಗಾಗಿ ಪ್ರತಿ ಎರಡು ವಾರಗಳಿಗೊಮ್ಮೆ ಗ್ವಾಲಿಯರ್‌ನಿಂದ ದೆಹಲಿಗೆ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರು. ನನ್ನ ತಾಯಿ ಆಗ್ರಾ ಮತ್ತು ಕಾನ್ಪುರ ನಡುವಿನ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದರು. ಅವರು ತಮ್ಮ ಜೀವನದಲ್ಲಿ ತಾಜ್ ಮಹಲ್ ಅನ್ನು ಹತ್ತಿರದಿಂದ ನೋಡಿರಲಿಲ್ಲ. ಅದು ಅವರ ಜೀವನದುದ್ದಕ್ಕೂ ಕಂಡ ಕನಸಾಗಿತ್ತು.

ನನಗೆ 2017 ರಲ್ಲಿ, ದಿ ಒಬೆರಾಯ್ ಅಮರ್‌ವಿಲಾಸ್‌ನಲ್ಲಿ (The Oberoi Amarvilas) ಮೊದಲ ಕೆಲಸ ಸಿಕ್ಕಿತು. ಆ ಹೋಟೆಲ್‌ನೊಂದಿಗೆ ಆಳವಾದ ಸಂಪರ್ಕವಿತ್ತು. ಆತಿಥ್ಯದ ನಿಜವಾದ ಅರ್ಥವನ್ನು ಇಲ್ಲಿ ಕಲಿತೆ. ಯಾವಾಗ ತಂದೆ ಮನೆಗೆ ಹಿಂದಿರುಗಿದರೋ ಆಗ ಹೆತ್ತವರಿಗಾಗಿ ಒಂದು ವಿಶೇಷ ಕ್ಷಣ ಕ್ರಿಯೇಟ್ ಮಾಡಲು ನಿರ್ಧರಿಸಿದೆ. ಅವರಿಗೆ ತನ್ನ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದೆ. ಅಲ್ಲಿ ಅವರು ತಾಜ್ ಮಹಲ್ ಅನ್ನು ಮುಂಭಾಗದಿಂದ ವೀಕ್ಷಿಸಬಹುದು.

ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ ನಡೆಯಲು ಕಷ್ಟವಾಗಿತ್ತು. ಆದರೆ ಕೋಣೆಯಿಂದ ತಾಜ್‌ನ ಸುಂದರ ನೋಟ ಕಣ್ತುಂಬಿಕೊಳ್ಳಬಹುದಾದ್ದರಿಂದ ಅವರ ಜೀವಮಾನದ ಕನಸು ನನಸಾಯಿತು. ಬಹುಶಃ ತಾಯಿಗೆ ಹೋಟೆಲ್‌ನ ಆಹಾರ ಇಷ್ಟವಾಗಲಿಲ್ಲ, ಅದು ಅವಳ ರುಚಿಗೆ ತುಂಬಾ ಸಪ್ಪೆಯಾಗಿತ್ತು ಅಥವಾ ಐಷಾರಾಮಿ ಪರಿಸರದಲ್ಲಿ ಅವಳು ಮನೆಯಲ್ಲಿರುವಂತೆ ಭಾವಿಸಲಿಲ್ಲ. ಆದರೆ ನೋವಿನ ನಡುವೆಯೂ ಅವಳ ಮುಖದಲ್ಲಿ ಒಂದು ವಿಶಿಷ್ಟ ಸಂತೋಷ ಪ್ರತಿಫಲಿಸುತ್ತಿತ್ತು.

ಕೀಮೋಥೆರಪಿ ನಂತರ ತಾಯಿಯ ನೋವು ಉಲ್ಬಣಗೊಂಡಾಗ ಕುಟುಂಬವು ರಾತ್ರಿಯಿಡೀ ಇರಲು ಸಾಧ್ಯವಾಗಲಿಲ್ಲ, ಆದರೂ ಆ ಕೆಲವು ಗಂಟೆಗಳಲ್ಲಿ, ನನ್ನ ತಾಯಿ ಎಂದಿಗೂ ಊಹಿಸದ ಕನಸನ್ನು ಕಂಡರು.

ಹದಿನೈದು ದಿನಗಳ ನಂತರ ನಿಧನರಾದ ತಾಯಿ

ಆ ವ್ಯಕ್ತಿ ಮುಂದೆ ಬರೆದಿರುವುದೇನೆಂದರೆ, ತಾಯಿಗೆ ಆಹಾರ ಅಥವಾ ವಸತಿ ಇಷ್ಟವಾಗದಿದ್ದರೂ, ಆ ಕೋಣೆ ಆಕೆಗೆ ತುಂಬಾ ಐಷಾರಾಮಿಯಾಗಿತ್ತು. ಬಹುಶಃ ತಾಯಿಗೆ ನನ್ನ ಬಗ್ಗೆ ಹೆಮ್ಮೆ ಇರಬಹುದು. ಹದಿನೈದು ದಿನಗಳ ನಂತರ ತಾಯಿ ನಿಧನರಾದರು.

ಕುಟುಂಬದ ಕೊನೆಯ ಫೋಟೋ

ಆ ಹೋಟೆಲ್ ಫೋಟೋ ಆ ವ್ಯಕ್ತಿಯ ಕುಟುಂಬದ ಕೊನೆಯ ಮತ್ತು ಅತ್ಯಂತ ಅಮೂಲ್ಯವಾದ ಫೋಟೋ ಆಯಿತು. ಈ ಹೃದಯಸ್ಪರ್ಶಿ ಪೋಸ್ಟ್ ಸಾವಿರಾರು ಜನರ ಹೃದಯ ತಟ್ಟಿತು. 2.3 ಸಾವಿರಕ್ಕೂ ಹೆಚ್ಚು ಅಪ್‌ವೋಟ್‌ಗಳನ್ನು ಗಳಿಸಿತು. ಅನೇಕ ಬಳಕೆದಾರರು ಭಾವನಾತ್ಮಕ ಕಾಮೆಂಟ್‌ಗಳನ್ನು ಹರಿ ಬಿಟ್ಟರು. ತಾಯಿಯ ಕುರಿತು ಮಗನಿಗಿರುವ ಮಮತೆ ಶ್ಲಾಘಿಸಿದರು ಮತ್ತು ಈ ಕಥೆ ಅವರ ಕಣ್ಣಂಚಲ್ಲಿ ಹೇಗೆ ನೀರು ತರಿಸಿತು ಎಂಬುದನ್ನ ವ್ಯಕ್ತಪಡಿಸಿದರು.