Asianet Suvarna News Asianet Suvarna News

ಆಚರಣೆಯ ಬದಲು ಆಚರಣ

ಇಂದು ಅಪ್ಪಂದಿರ ದಿನ. ಅಪ್ಪನಂತಹ ಮೇರು ಜೀವಿ ಬಗ್ಗೆ ಹೆಣ್ಣುಮಕ್ಕಳಿಗೆ ಅದೇನೋ ಅಪ್ಯಾಯಮಾನತೆ. ಅಂತಹ ಅಪ್ಪನ ಬಗ್ಗೆ ಅನಂತಸ್ವಾಮಿ ಪುತ್ರಿ ಸುನಿತಾ ಅನಂತಸ್ವಾಮಿ ಮನದ ಮಾತುಗಳನ್ನು ಹಂಚಿಕೊಂಡ ಪರಿ ಇಂತಿದೆ.

Fathersday by Sunitha Ananthswamy
Author
Bengaluru, First Published Jun 17, 2018, 1:16 PM IST

ಸುನೀತಾ ಅನಂತಸ್ವಾಮಿ

‘ಅಪ್ಪನ ದಿನ’ದ ಆಚರಣೆ ಮಾಡುವುದಕ್ಕಿಂತ ಹೆಚ್ಚಾಗಿ ನಾನು ದಿನಾ ಅಪ್ಪನ ಆ ಚರಣಗಳನ್ನು ಹಿಂಬಾಲಿಸುತ್ತಾ, ವಿಶ್ಲೇಷಿಸುತ್ತಾ, ವಿಸ್ಮಯಗೊಳ್ಳುತ್ತೇನೆ.‘ನಾನು ಅವರ ಮಗಳು’ ಅಂತ ಬಹಳ ಹೆಮ್ಮೆ ಇಂದ ಹೇಳಿಕೊಳ್ಳಬಲ್ಲೆ.

ಗೋಧಿ ಬಣ್ಣಕ್ಕಿಂತ ಸ್ವಲ್ಪ ಕಪ್ಪು, ಸಾಧಾರಣಕ್ಕಿಂತ ಸಣ್ಣ ಮೈಕಟ್ಟು. ಸುಂದರವಾದ ಮುಗುಳುನಗೆ, ಎಲ್ಲರನ್ನು ನೇರವಾಗಿ ನೋಡಿ ಮಾತನಾಡಿಸುವುದು, ಮಧುರ ಭಾಷಿಯಾದ ಅಣ್ಣ, (ನಾನು ಅವರನ್ನ ಕರೀತಿದ್ದದ್ದು ಹಾಗೆ) ಒಬ್ಬ ಉತ್ತಮ ಗುಣದ, ಸರಳ ವ್ಯಕ್ತಿತ್ವ ಹೊಂದಿದ್ದ ಮಾದರಿ ವ್ಯಕ್ತಿಯಾಗಿದ್ದರು. ಕರ್ನಾಟಕದ ಸುಪ್ರಸಿದ್ಧ ಸುಗಮ ಸಂಗೀತಗಾರ. ಕೀರ್ತಿಯ ಹಂಗಿರಲಿಲ್ಲ. ಅವರು ಮಾಡುತ್ತಿದ್ದ ಶೋಕಿ ಅಂದ್ರೆ, ಅವರ ಹತ್ತಿರ ಒಂದು ಲೆದರ್ ಜಾಕೆಟ್ ಇತ್ತು. ಅವರ ಸ್ಕೂಟರ್ ಮೇಲೆ ಹೋದಾಗ ಅದನ್ನ ಹಾಕಿಕೊಳ್ಳುವವರು. ಕಾರು - ಗೀರು ಎಲ್ಲ ಬೇಕಿರಲಿಲ್ಲ. ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬುದು ಅವರ ಆದರ್ಶ ಸೂತ್ರ. ಹಾಸ್ಯ ಪ್ರಿಯ. ಇವತ್ತಿಗೂ ಅವರೊಡನೆ ಹೃದಯಪೂರ್ವಕವಾಗಿ ನಕ್ಕ, ಹಲವಾರು ತಮಾಷೆಯ ಘಟನೆಗಳು ನೆನಪಾಗುತ್ತವೆ.

ಅವರು ಎಷ್ಟು ಚಮತ್ಕಾರಿ ವ್ಯಕ್ತಿ ಅಂದ್ರೆ, ಒಮ್ಮೆ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದೆವು. ಮದ್ದೂರಿನ ರೈಲ್ವೆ ಸ್ಟೇಷನ್ನಲ್ಲಿದ್ದ ಕ್ಯಾಂಟೀನ್ನಲ್ಲಿ ಕಾಫಿ ಕುಡಿಯಲು ನಿಲ್ಲಿಸಿದೆವು. ರೈಲ್ವೆ ಸ್ಟೇಷನ್ನಿನ ಒಂದೆಡೆ ಎಲ್ಲಾ ಮೈಸೂರು ಒಡೆಯರ ವಂಶದ ಅರಸರ ವರ್ಣಚಿತ್ರಗಳನ್ನು ಹಾಕಿದ್ದರು. ಯಾವುದೋ ಒಂದರಲ್ಲಿ ಅರಸರ ಹೆಸರಿರಲಿಲ್ಲ. ಅದನ್ನು ತೋರಿಸುತ್ತ, ಅಣ್ಣನನ್ನು ಕೇಳಿದೆ, ಇವರು ಯಾವ ಒಡೆಯರ್? ಎಂದು. ಅವರು ಕೆಲವು ಕ್ಷಣಗಳು ಬಹಳ ಯೋಚಿಸುವ ಹಾಗೆ ನಟಿಸಿ ಇವರು ‘ಮದ್ದೂರ್ ವಡೆಯರ್’ ಎಂದು ತಕ್ಷಣವೇ ಗೊಳ್ ಎಂದು ನಕ್ಕುಬಿಟ್ಟರು. ನಾವು ಚಿಕ್ಕವರಿದ್ದಾಗ ಅಣ್ಣ ಅಂದ್ರೆ ಸ್ವಲ್ಪ ಭಯ, ಅದೂ ಎಕ್ಸಾಮ್ ಟೈಮ್ ನಲ್ಲಿ. ನಾವು ಪರೀಕ್ಷೆ ಮುಗಿಸಿ ಮನೆಗೆ ಬಂದ ಮೇಲೆ ಇವರಿಂದ ಇನ್ನೊಂದು ಪರೀಕ್ಷೆ.

‘ಎಲ್ಲಿ, ಪ್ರಶ್ನೆ ಪತ್ರಿಕೆ ಕೊಡು ಇಲ್ಲಿ..’ ಅಂತ ನಮ್ಮಿಂದ ತೆಗೆದುಕೊಂಡು ಮರು ಪ್ರಶ್ನೆ. ನಾನಂತೂ ಶಾಲೆಯ ಪರೀಕ್ಷೆಗಿಂತ ಹೆಚ್ಚಾಗಿ, ಮನೆಗೆ ನಡೆದುಕೊಂಡು ಬರುವಾಗ ಅಣ್ಣನ ಪರೀಕ್ಷೆಗೆ ಹೆಚ್ಚು ಓದ್ಕೊಂಡು ಬರ್ತಾ ಇದ್ದೆ. ಯಾಕೆಂದ್ರೆ, ಏನಾದ್ರು ತಪ್ಪಾಯ್ತು ಅಂದ್ರೆ, ನಮ್ಮ ಗತಿ ಅಷ್ಟೇ. ಮನೆಯಿಂದ ಆಚೆ ಹೋಗೋ ಹಾಗಿಲ್ಲ, ಸ್ನೇಹಿತರು ಮನೆಗೆ ಬರೋ ಹಾಗಿಲ್ಲ. ಆದ್ರೂ ಅವರ ಇಚ್ಛೆಯಂತೆ ನಾನು ಡಾಕ್ಟರೋ , ಇಂಜಿನೀಯರೋ ಆಗಲಿಲ್ಲ. ಅವರಂತೆಯೇ ಸಂಗೀತಗಾರಳಾದೆ. ಇಡೀ ಜೀವನ ಹಾಡ್ಕೊಂಡು, ಏನೋ ಹಾಗೆ ಹೀಗೆ ಓದ್ಕೊಂಡು ಕಡೆಗೆ ಎಂಎ ಪದವಿ ತೆಗೆದುಕೊಂಡೆ.

ಫಲಿತಾಂಶ ನೋಡಲೆಂದು ಸೆಂಟ್ರಲ್ ಕಾಲೇಜಿಗೆ ಹೋಗಿದ್ದ ದಿನ, ಅಲ್ಲೇ ಹತ್ತಿರದಿಂದ ಅಣ್ಣನಿಗೆ ಫೋನ್ ಮಾಡಿ ನಾನೀಗ ಎಂ ಎ ಇನ್ ಇಂಗ್ಲಿಷ್ ಲಿಟರೇಚರ್ ಎಂದು ತಿಳಿಸಿದಾಗ ಅವರಿಗಾದ ಆನಂದ ಅಷ್ಟಿಷ್ಟಲ್ಲ. ನಾನು ಚಿಕ್ಕವಳಿದ್ದಾಗ ಆದಷ್ಟು ಸಂಗೀತದಿಂದ ನನ್ನನ್ನು ದೂರ ಇರಿಸುತ್ತಿದ್ದರು. ನಾನು ಎಂದೂ ಅವರಿಂದ ನೇರವಾಗಿ ಹಾಡು ಕಲಿಯಲಿಲ್ಲ. ಅವರ ಶಿಷ್ಯಂದಿರು ಮನೆಗೆ ಬಂದಾಗ ಮಾತ್ರ ನಾನೂ ಅವರೊಡನೆ ಕೂತು ಕಲಿಯುತಿದ್ದದ್ದು ಅಷ್ಟೆ. ಸಂಗೀತದಲ್ಲಿದ್ದ ನನ್ನ ಆಸಕ್ತಿ ನೋಡಿ ಕಡೆಗೆ ನನ್ನ ಇಚ್ಛೆಗೆ ಸೈ ಎಂದರು.

ಅಪ್ಪಂದಿರು, ಹೆಣ್ಣು ಮಕ್ಕಳಿಗೆ ಅವರು ಮದುವೆಯಾಗುವ ಗಂಡು ಹೇಗಿರಬೇಕು ಎಂದು ಬುದ್ಧಿ ಹೇಳುವುದು ಸಹಜ. ಸಾಮಾನ್ಯವಾಗಿ ಅವನು ಒಳ್ಳೆ ಕೆಲಸದಲ್ಲಿರಬೇಕು, ಕೈ ತುಂಬ ಸಂಪಾದಿಸಬೇಕು ಎಂಬ ಅಭಿಪ್ರಾಯ ಇರುತ್ತದೆ. ಅಣ್ಣ ನಮಗೆ ಹೇಳಿದಿಷ್ಟೇ ನೀನು ಯಾರನ್ನಾದರೂ ಮದುವೆಯಾಗು, ಆದ್ರೆ ಯೋಚಿಸಿ ಮದುವೆಯಾಗು, ನಾಳೆ ಅತ್ಕೊಂಡು, ಅವನು ಸರಿಯಿಲ್ಲ ಅಂತ ಬರಬೇಡ. ಸ್ವತಂತ್ರವಾಗಿ ಬಾಳಬೇಕಾದ್ರೆ ಅದರ ಜೊತೆ ಜವಾಬ್ದಾರಿ ಕೂಡ ಇರುತ್ತೆ ಎಂದು ತಿಳಿಸಿಕೊಟ್ಟರು.

ನನ್ನ ಅಪ್ಪ, ಎಲ್ಲ ಅಪ್ಪಂದಿರಂತಿರಲಿಲ್ಲ. ಅವರದೇ ಆದ ಒಂದು ವಿಶಿಷ್ಟ ಶೈಲಿಯಲ್ಲಿ ನಮಗೆ ಜೀವನದ ಪಾಠಗಳನ್ನು ಹೇಳಿಕೊಟ್ಟರು. ಕನ್ನಡ ಕಾವ್ಯವೇ ನಮ್ಮ ಧರ್ಮ,ಎಂದು ರೂಪಿಸಿಕೊಟ್ಟರು. ಹಿರಿಯ ಕವಿ ಡಾ. ಎಚ್ ಎಸ್ ವೆಂಕಟೇಶಮೂರ್ತಿ ಅವರು ಅಣ್ಣನ ಬಗ್ಗೆ ಬರೆದಿರುವ ಕವನದ ಈ ಸಾಲುಗಳು ಅಣ್ಣನ ವ್ಯಕ್ತಿತ್ವವನ್ನು ಬಹಳ ಚೆನ್ನಾಗಿ ವರ್ಣಿಸುತ್ತದೆ:

ಸಮಶ್ರುತಿ ಸಮಗತಿ ಸಮಾನ ಹೃದಯೀ

ಸಹಸ್ಪಂದಿ ಓ ಕಲಾವಿದ

ಕವಿತೆಯ ಉಸಿರಿಗೆ ಕೊರಳನು ನೀಡಿದ

ಮೋಹನ ಮುರಲೀ ಕಲಾವಿದ

ಅಣ್ಣ ಒಬ್ಬ ಸ್ವಯಂಕೃತ ವ್ಯಕ್ತಿ. ಅವರ ಜೀವನ ಪೂರಾ ಅವರ ಪ್ರತಿಭೆ ಹಾಗು ನಿಷ್ಠಾವಂತ ಗುಣ ಅವರಿಗೆ ಆಧಾರ ಸ್ತಂಭವಾಗಿದ್ದವು. ಪ್ರತಿಭಾವಂತ ಕಲಾವಿದರನ್ನು ಕಂಡರೆ ಅವರನ್ನು ಗೌರವಿಸಿ, ಪ್ರೋತ್ಸಾಹಿಸುತ್ತಿದ್ದರು. ಎಂದೂ ಇನ್ನೊಬ್ಬ ಕಲಾವಿದನಿಗೆ ಕೆಟ್ಟದ್ದನ್ನು ಬಯಸಿದ್ದಿಲ್ಲ. ಹೀಗಿದ್ದವರಿಗೆ ಕೆಲವು ಸುಗಮ ಸಂಗೀತ ಕಲಾವಿದರು ನಾಡಗೀತೆಯ ವಿಷಯದಲ್ಲಿ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಿಸಿಲ್ಲವಲ್ಲ ಎಂಬುದು ಬಹಳ ನೋವನ್ನುಂಟು ಮಾಡುವಂತಹ ವಿಷಯ.

ಅವರಿಗೆ ಈ ವರ್ಷ ೮೨ ಆಗಿರುತ್ತಿತ್ತು. ಈ ದಿನ, ಪ್ರತಿ ದಿನ ಅವರನ್ನು ನೆನೆಸಿಕೊಳ್ಳದೇ ಇರುವುದು ಅಸಾಧ್ಯ. ನನ್ನ ಈ ದಿನಗಳಲ್ಲಿ, ಅವರನ್ನು ಇನ್ನೂ ಹೆಚ್ಚು ಅರ್ಥಮಾಡಿಕೊಳ್ಳುತ್ತಿರುವೆ, ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿದೆ, ಎಷ್ಟೋ ಸಂಧರ್ಭಗಳನ್ನು ನೆನೆಸಿಕೊಂಡಾಗ, ಈ ಅರಿವು ಅಂದು ಇದ್ದಿದ್ದರೆ ಅವರಿಗೆ ಹೀಗೆ - ಹಾಗೆ ಬೆಂಬಲಿಸಬಹುದಿತ್ತಲ್ಲ ಎಂಬ ದುಃಖ ಕಾಡುತ್ತದೆ. ಏನೇ ಇರಲಿ, ಎಲ್ಲೇ ಇರಲಿ ಇಂದು ಅವರಿಗೆ ನನ್ನ ಪ್ರೀತಿಯ ಹ್ಯಾಪಿ ಫಾದರ್ಸ್ ಡೇ ಶುಭಾಶಯಗಳು. ?

Follow Us:
Download App:
  • android
  • ios