ಭದ್ರೆ ಕರೆಯುತ್ತಿದ್ದಾಳೆ, ಹೋಗಿ ಬನ್ನಿ
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಲಕ್ಕವಳ್ಳಿಯ ಮುತ್ತೋಡಿಯ ಭದ್ರಾನದಿ ತಟದಲ್ಲಿ ಭದ್ರಾ ಅಭಯಾರಣ್ಯವಿದೆ. ದಟ್ಟ ಕಾಡು, ಮಂಜು ಮುಸುಕಿರುವ ಬೆಟ್ಟಗಳು, ಭರಪೂರ ಸುರಿಯುವ ಮಳೆ, ಅಸಂಖ್ಯಾತ ವನ್ಯ ಮೃಗಗಳು, ಹಲವು ಬಗೆಯ ಪಕ್ಷಿಗಳು ಈ ಅರಣ್ಯದಲ್ಲಿವೆ. ಕಳೆದೆರಡು ವರ್ಷಗಳ ಹಿಂದಿನವರೆಗೆ ಈ ಅರಣ್ಯಕ್ಕೆ ಜನಸಾಮಾನ್ಯರಿಗೆ ಪ್ರವೇಶ ಇರಲಿಲ್ಲ.
ಕೆಲವು ತಿಂಗಳ ಹಿಂದಿನಿಂದ ದಟ್ಟ ಕಾಡಲ್ಲಿ ಸಫಾರಿ ಮಾಡುವ ಅವಕಾಶ ನೀಡಲಾಗಿದೆ. ಸಫಾರಿಯಲ್ಲಿ ಏನು ನೋಡಬಹುದು? ಹುಲಿ, ಆನೆ, ಕರಡಿ, ಚಿರತೆ, ಕಾಡುಕೋಣಗಳು, ಕಡವೆ.. ಹೀಗೆ ಹಲವು ವನ್ಯಮೃಗಗಳು ಕಾಣಸಿಗುತ್ತವೆ. ಇವು ಕಾಡಿನಲ್ಲಿ ಸಂಚರಿಸುವುದನ್ನು, ಕೆರೆಗಳಲ್ಲಿ ನೀರಾಟ ಆಡುವುದನ್ನು ನೋಡವುದೇ ಖುಷಿ. ಹಲವು ಬಗೆಯ ಪಕ್ಷಿಗಳು ಇಲ್ಲಿವೆ. ಲಕ್ಕವಳ್ಳಿ, ತಣಿಗೇಬೈಲು, ಹೆಬ್ಬೆ, ಮುತ್ತೋಡಿ ಈ ನಾಲ್ಕು ಕಾಡುಗಳಲ್ಲಿ ಲಕ್ಕವಳ್ಳಿ ಮತ್ತು ಮುತ್ತೋಡಿಯಲ್ಲಿ ಮಾತ್ರ ಅರಣ್ಯ ಸೌಂದರ್ಯ ಹಾಗೂ ಕಾಡಿನಲ್ಲಿ ವಿಹರಿಸುವ ಪ್ರಾಣಿಗಳನ್ನು ವೀಕ್ಷಿಸಲು ಅವಕಾಶ ಇದೆ. ಬಾನೆತ್ತರಕ್ಕೆ ಬೆಳೆದಿರುವ ಮರಗಳು, ಗುಂಪು ಗುಂಪಾಗಿ ಹರಡಿಕೊಂಡಿರುವ ಬಿದಿರು ಮೆಳೆಗಳು ಅತ್ಯಾಕರ್ಷಕ. ಭದ್ರಾ ಅರಣ್ಯದ ವ್ಯಾಪ್ತಿಯುದ್ದಕ್ಕೂ ಸುಮಾರು 1,25,000 ಎಕರೆಯಷ್ಟು ವ್ಯಾಪಿಸಿರುವ ಈ ಕಾಡು ಸುತ್ತಿಬರಲು ಪ್ರವಾಸಿಗರಿಗೆ ದಿನಪೂರ್ತಿಯಾದರೂ ಸಾಕಾಗುವುದಿಲ್ಲ.
ಅರಣ್ಯಾಧಿಕಾರಿ ಕನಸು
ಬಂಡೀಪುರ, ನಾಗರಹೊಳೆಯಲ್ಲಿ ಇರುವಂತೆ ಲಕ್ಕವಳ್ಳಿಯ ಮುತ್ತೋಡಿ ಅರಣ್ಯದಲ್ಲೂ ಸಫಾರಿ ಆರಂಭಿಸಬೇಕು ಎಂಬುದು ಅರಣ್ಯಾಧಿಕಾರಿ ಕಾಂತರಾಜು ಕನಸು. ಈ ಮೂಲಕ ಮಕ್ಕಳಿಗೆ, ದೊಡ್ಡವರಿಗೆ ಕಾಡಿನ ಪ್ರೀತಿ ಮೂಡಿಸಬೇಕು ಅನ್ನುವ ಆಶಯ. ಇದು ಅಪರೂಪದ ಪ್ರಾಣಿ, ಪಕ್ಷಿಗಳನ್ನು ಅವುಗಳ ಆವಾಸಸ್ಥಾನದಲ್ಲೇ ನೋಡುವ ಅವಕಾಶವೂ ಹೌದು. ಕಾಳ್ಗಿಚ್ಚಿನ ಭಯ ಇಲ್ಲದ ಕಾರಣ ಜನ ಖುಷಿಯಿಂದ ಸಫಾರಿಯಲ್ಲಿ ತೊಡಗಬಹುದು. ಕಳೆದ ಎರಡು ವರ್ಷಗಳಿಂದ ಸಫಾರಿಗೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರಕಿದೆ. ಪ್ರತಿನಿತ್ಯ ಬೆಳಗ್ಗೆ 6-30 ರಿಂದ 8-30 ರವರೆಗೆ ಮತ್ತು ಸಂಜೆ 3-30ರಿಂದ 5-30 ಗಂಟೆವರೆಗೆ ದಟ್ಟಾರಣ್ಯದಲ್ಲಿ ಸಫಾರಿ ಮೂಲಕ ವನಸೌಂದರ್ಯವನ್ನು ವೀಕ್ಷಿಸಲು ಪ್ರವಾಸಿಗರು ಪ್ರತಿನಿತ್ಯ ಲಕ್ಕವಳ್ಳಿಗೆ ಆಗಮಿಸುತ್ತಿದ್ದಾರೆ.
ಶನಿವಾರ, ಭಾನುವಾರ ಅತಿ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. 25 ಪ್ರವಾಸಿಗರು ಪ್ರಯಾಣಿಸಬಹುದಾದ ಒಂದು ಬಸ್ಸು ಮತ್ತು ಹತ್ತು ಜನರು ಕೂರಬಹುದಾದ 2 ಜೀಪುಗಳು ಬೆಳಗ್ಗೆ ಮತ್ತು ಸಂಜೆ ಸಫಾರಿಗಾಗಿ ಅಣಿಗೊಳಿಸಲಾಗಿದೆ. ಇದೀಗ ಇದರ ಜೊತೆಗೆ ಭದ್ರಾ ನದಿಯಲ್ಲಿ ಬೋಟ್ ಮೂಲಕ ಹಿನ್ನೀರಿನ ತನಕ ತೆರಳಿ, ಸಂಜೆ ವೇಳೆಯಲ್ಲೂ ವನ್ಯಮೃಗಗಳು, ಪಕ್ಷಿ ಸಂಕುಲ ಸುರಕ್ಷಿತವಾದ ಸ್ಥಳದಿಂದ ವೀಕ್ಷಿಸಬಹುದು. ಬರುವಾಗ ನೂರು, ಹಿಂತಿರುಗುವಾಗ ಸಾವಿರ ಪಕ್ಷಿಗಳು!
ಭದ್ರಾನದಿ ತಟ, ಹಿನ್ನೀರು, ದಡಕ್ಕೆ ಅಂಟಿಕೊಡಿರುವ ಅರಣ್ಯ, ಪಕ್ಕದಲ್ಲೇ ಬೃಹತ್ ಸಾಲು ಸಾಲು ಬೆಟ್ಟಗಳು ಪಕ್ಷಿ ಸಂಕುಲಕ್ಕೆ ವಂಶಾಭಿವೃದ್ಧಿಗೆ ಹೇಳಿ ಮಾಡಿಸಿದಂತಿವೆ. ಇಲ್ಲಿಗೆ ಸಂತೋನೋತ್ಪತ್ತಿಗೆ ಬರುವ ನೂರಾರು ಹಕ್ಕಿಗಳು ಸಾವಿರಾರು ಸಂಖ್ಯೆಯಲ್ಲಿ ಮರಳಿ ಹೋಗುವುದು ವಿಶೇಷ. ರಿವರ್ ಟರ್ನ್ ಮತ್ತು ಬಾರ್ ಹೆಡೆಡ್ ಗೀಸ್ ಪಕ್ಷಿಗಳು ಇಲ್ಲಿನ ಮುಖ್ಯ ವಲಸೆ ಹಕ್ಕಿಗಳು. ಇವುಗಳ ಕಲರವ, ಹಾರಾಟವನ್ನು ಅದೂ ದೋಣಿ ವಿಹಾರದಲ್ಲಿ ವೀಕ್ಷಿಸುವುದು ಅದ್ಭುತ ಅನುಭವ.
ತಲುಪುವುದು ಹೇಗೆ?
ತರೀಕೆರೆಯಿಂದ 20 ಕಿ.ಮೀ., ಭದ್ರಾವತಿಯಿಂದ 28 ಕಿ.ಮೀ., ಶಿವಮೊಗ್ಗದಿಂದ 30 ಕಿ.ಮೀ., ಎನ್.ಆರ್.ಪುರದಿಂದ 45 ಕಿ.ಮೀ. ಹಾಗೂ ಶೃಂಗೇರಿಯಿಂದ 100 ಕಿ.ಮೀ. ಅಂತರದಲ್ಲಿದೆ ಲಕ್ಕವಳ್ಳಿ ಭದ್ರಾ ಅಭಯಾರಣ್ಯ. ಪ್ರತಿನಿತ್ಯ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ವಾಹನ ಸೌಕರ್ಯವಿದೆ. ಇಲ್ಲೇ ತಂಗಲು ವಸತಿ ಸೌಕರ್ಯ ಕೂಡ ಇದೆ. ಮಾಹಿತಿಗೆ ಮೊ.8277553413 ಇಲ್ಲಿಗೆ ಸಂಪರ್ಕಿಸಬಹುದು.