ನಿದ್ದೆಯಲ್ಲಿ ಬೀಳುವ ಕನಸುಗಳು ಒಂಥರಾ ರಹಸ್ಯವೇ. ಅವುಗಳಲ್ಲಿ ಭಾವನೆಗಳಿವೆ, ಮನೋರಂಜನೆ ಇದೆ, ರೊಮ್ಯಾನ್ಸ್, ಟ್ರ್ಯಾಜಿಡಿ, ಕೆಲವೊಮ್ಮೆ ತಲೆಬುಡವಿಲ್ಲದ ವಿಚಿತ್ರ ಕತೆಗಳೂ ಇರುತ್ತವೆ. ಕನಸಿನೂರಿನಲ್ಲಿ ನಮಗಾಗಿ ಏನು ಕಾದಿದೆ ಎಂಬುದನ್ನು ಯಾರೂ ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ನಮಗೆ ಹಲವಾರು ಕನಸುಗಳು ಬೀಳುತ್ತವೆ. ಆದರೆ ಎಲ್ಲವೂ ನೆನಪಿನಲ್ಲಿ ಉಳಿಯುವುದಿಲ್ಲ. ಎಷ್ಟೋ ಬಾರಿ ನಮ್ಮ ಸಮಸ್ಯೆಗಳಿಗೆ ಕನಸಿನಲ್ಲಿ ಪರಿಹಾರಗಳು ಸಿಗುತ್ತವೆ ಎಂಬುದು ನಿಮಗೆ ಗೊತ್ತೇ? ಇಂಥ ಈ ರಮ್ಯಲೋಕವನ್ನು ನಾವು ನಿಯಂತ್ರಿಸಬಲ್ಲೆವಾ? ಕೆಲವೊಂದು ಪ್ರಯತ್ನದಿಂದ ಖಂಡಿತಾ ಸಾಧ್ಯ. ಕನಸನ್ನು ಕಂಟ್ರೋಲ್ ಮಾಡಲು ಹೀಗೆ ಮಾಡಿ ನೋಡಿ.

ಏನು ಕಾಣಬೇಕೋ ಅದನ್ನೇ ನೆನೆಸಿಕೊಳ್ಳಿ. 
ನಮ್ಮ ಕನಸಿನಲ್ಲಿ ಕಾಣುವ ಬಹುತೇಕ ವಿಷಯಗಳು ನಮ್ಮ ಜೀವನಕ್ಕೆ ಸಂಬಂಧಿಸಿದವೇ ಆಗಿರುತ್ತವೆ. ಹಾಗಾಗಿ ನಿಮಗೆ ಕನಸಿನಲ್ಲಿ ಕೆಲ ಇಷ್ಟದ ವ್ಯಕ್ತಿ ಬರಬೇಕೆಂದರೆ ಅಥವಾ ಪ್ರೀತಿಯ ಸಂಗತಿಗಳು ಘಟಿಸಬೇಕೆಂದರೆ ನಿದ್ದೆ ಮಾಡುವ ಮೊದಲು ಆ ವಿಷಯವನ್ನೇ ಹೆಚ್ಚು ಫೋಕಸ್ ಮಾಡಿ. 

ಸರಳ ಸಂಗತಿಗಳನ್ನು ನಿರೀಕ್ಷಿಸಿ
ಸಾಮಾನ್ಯವಾಗಿ ದಿನದ ಬಹುಭಾಗ ಏನು ಮಾಡುತ್ತಿರುತ್ತೇವೋ ಅದೇ ಕನಸಿನಲ್ಲಿ ಬರುವುದು ಹೆಚ್ಚು. ದಿನವಿಡೀ ಓದಿನಲ್ಲಿ ಕಳೆದರೆ ಕನಸಿನಲ್ಲಿ ಪರೀಕ್ಷೆ ಬರೆದರೂ ಆಶ್ಚರ್ಯವಿಲ್ಲ. ವಿಡಿಯೋ ಗೇಮ್ ಆಡುವವರಿಗೆ ಅವರ ಕನಸಿನಲ್ಲಿ ಸೂಪರ್‌ನ್ಯಾಚುರಲ್ ಸಂಗತಿಗಳೇ ಕಾಣುವುದು ಹೆಚ್ಚು ಎಂಬುದನ್ನು ಅಧ್ಯಯನವೊಂದು ಕಂಡುಕೊಂಡಿದೆ. ಹಾಗಾಗಿ, ಕನಸಿನಲ್ಲಿ ನೀವೇನು ಕಾಣಬೇಕೋ ಅದನ್ನೇ ದಿನದಲ್ಲಿ ಬಹುಭಾಗ ಮಾಡಿ.

ಕನಸು ಕಾಣುವಿರಾಗಿ ಯೋಚಿಸಿ
ಮಲಗುವ ಮುನ್ನ ಇಂದು ನೀವು ಸಂದರ ಕನಸು ಕಾಣುವುದಾಗಿ ಯೋಚಿಸಿ. ಅಷ್ಟೇ ಅಲ್ಲ, ಆ ಕನಸು ನೆನಪಿನಲ್ಲಿ ಉಳಿಯುತ್ತದೆ ಎಂದೂ ಭರವಸೆ ಕೊಟ್ಟುಕೊಳ್ಳಿ. ಬೆಳಗ್ಗೆದ್ದು ನಿಮ್ಮ ಕನಸನ್ನು ಬರೆದಿಡಿ. ಕೆಲ ದಿನಗಳ ಬಳಿಕ ನಿಮಗೆ ಬೀಳುವ ಕನಸಿನ ಪ್ಯಾಟರ್ನ್ ಅರಿವಿಗೆ ಬರುತ್ತದೆ.

ಕನಸು ಕಾಣುತ್ತಿದ್ದೀರಾ ಎಂದು ಕೇಳಿಕೊಳ್ಳಿ
ನಿಮ್ಮ ಕನಸುಗಳನ್ನು ನಿಯಂತ್ರಿಸಬೇಕೆಂದರೆ ಇದೊಂದು ಮುಖ್ಯ ಹಂತ. ನಾನು ಕನಸು ಕಾಣುತ್ತಿರುವೆನಾ ಎಂದು ಬೆಳಗ್ಗೆ ಪದೇ ಪದೇ ಕೇಳಿಕೊಳ್ಳಿ. ರಾತ್ರಿ ಕನಸಿನಲ್ಲೂ ಇದೇ ಪ್ರಶ್ನೆ ನಿಮ್ಮನ್ನು ಕಾಡತೊಡಗುತ್ತದೆ. ಆಗ ಕನಸು ಕಾಣುತ್ತಿರುವುದನ್ನು ನೀವು ಗುರುತಿಸಬಲ್ಲಿರಿ. ಕನಸು ಕಾಣುವುದು ಪಕ್ಕಾ ಆದ ಮೇಲೆ ನಿಮಗೆ ಬೇಕೆಂದಂತೆ ಕನಸು ಕಾಣಲು ಆರಂಭಿಸಿ. ಹೇಗೂ ಕನಸಿನ ಲೋಕದಲ್ಲಿ ಯಾವುದಕ್ಕೂ ಮಿತಿ ಇಲ್ಲವಲ್ಲ...

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ