ಚಾಮರಾಜನಗರ(ಏ.23): ಕೊರೋನಾ ಮುಕ್ತವಾಗಿರುವ ಜಿಲ್ಲೆಗಳಲ್ಲಿ ಲಾಕ್ಡೌನ್‌ ಸಡಿಲಗೊಳಿಸಲು ಸಿಎಂ ನಿರ್ಧರಿಸಿದ್ದಾರೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಚಾಮರಾಜನಗರದ ಎಪಿಎಂಸಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಕೊರೋನಾ ಮುಕ್ತ ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರೈತ ಮುಖಂಡರ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಸಾಧಕ-ಬಾಧಕ ಆಲೋಚಿಸಿ ಗುರುವಾರ ಇಲ್ಲವೇ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಮಹಾಮಾರಿ ಕೊರೋನಾದಿಂದ ಗುಣಮುಖ: ಬಳ್ಳಾರಿಯಲ್ಲಿ ಮೂವರು ಡಿಸ್ಚಾರ್ಜ್‌

ಸಹಕಾರ ಬ್ಯಾಂಕ್‌ಗಳಿಂದ ಹೊಸದಾಗಿ ಸಾಲ ಕೊಡಲು ಸರ್ಕಾರ ತೀರ್ಮಾನಿಸಿದ್ದು, ಕಳೆದ ಬಾರಿ 13 ಸಾವಿರ ಕೋಟಿ ರು. ಸಾಲ ನೀಡಲಾಗಿತ್ತು. ಈ ಬಾರಿಯೂ ಅಷ್ಟೇ ನೀಡಲಾಗುತ್ತದೆ. ಲೇವಾದೇವಿಗಾರರು, ಖಾಸಗಿ ಫೈನಾನ್ಸ್‌ ಕಂಪನಿಗಳು ಯಾರೂ ಕೂಡ 3 ತಿಂಗಳವರೆಗೆ ಸಾಲ ಕಟ್ಟುವಂತೆ ಕಿರುಕುಳ ನೀಡಬಾರದೆಂದು ಈಗಾಗಲೇ ಸರ್ಕಾರ ಆದೇಶಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೊರೋನಾ ವೈರಸ್ ತಗುಲದಂತೆ ಲಸಿಕೆ, ಶುರುವಾಯ್ತು ಪ್ರಯೋಗ.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಸಿ.ಎಸ್‌. ನಿರಂಜನಕುಮಾರ್‌, ಜಿಲ್ಲಾ​ಧಿಕಾರಿ ಡಾ. ಎಂ.ಆರ್‌. ರವಿ, ಎಸ್ಪಿ ಆನಂದಕುಮಾರ್‌, ಎಪಿಎಂಸಿ ಅಧ್ಯಕ್ಷ ರವಿಶಂಕರಮೂರ್ತಿ, ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್‌, ವರ್ತಕ ಎಲ್‌. ಸುರೇಶ್‌ ಇತರರು ಇದ್ದರು.

ಸಚಿವಗೆ ರೈತನ ಬಾಸುಂಡೆ ದರ್ಶನ

ಗುಂಡ್ಲುಪೇಟೆ ಎಪಿಎಂಸಿಗೆ ಭೇಟಿ ನೀಡಿದ್ದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ಗೆ ರೈತರೊಬ್ಬರು ಬೆನ್ನ ಮೇಲೆ ಪೊಲೀಸರ ಲಾಠಿಯಿಂದ ಬಿದ್ದ ಬಾಸುಂಡೆ ತೋರಿಸಿ, ಪೊಲೀಸರು ರೈತರನ್ನು ಸುಖಾಸುಮ್ಮನೇ ಹೊಡೆಯುತ್ತಾರೆ ಎಂದಾಗ, ರೈತರ ಮೇಲೆ ಲಾಠಿ ಪ್ರಯೋಗಿಸಬೇಡಿ ಎಂದು ಸಚಿವರು ಅಲ್ಲಿದ್ದ ಪಿಎಸ್‌ಐ ಲತೇಶ್‌ಕುಮಾರ್‌ ಅವರಿಗೆ ಸೂಚಿಸಿದರು.