ಆನೇಕಲ್‌(ಅ.02): ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಾವೇರಿ ಎಂಬ ಹೆಸರಿನ ಝೀಬ್ರಾ ಹೆಣ್ಣು ಮರಿಯೊಂದಕ್ಕೆ ಜನ್ಮ ನೀಡಿದೆ ಎಂದು ಉದ್ಯಾನವನದ ಆಡಳಿತಾಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದರು.

ತಾಯಿ ಹಾಗೂ ಮರಿಯ ಚಿತ್ರ ಬಿಡುಗಡೆ ಮಾಡಿದ ಅವರು, 6 ವರ್ಷದ ಕಾಮವೇರಿ ಹಾಗೂ ಭರತ್‌ ಎಂಬ ಜೋಡಿಗೆ ಈ ಹೆಣ್ಣು ಮರಿ ಜನಿಸಿದೆ. ಇದರೊಂದಿಗೆ ಪಾರ್ಕ್‌ನಲ್ಲಿ ಝೀಬ್ರಾಗಳ ಸಂಖ್ಯೆ 4ಕ್ಕೆ ಏರಿಕೆ ಆಗಿದ್ದು, ತಾಯಿ ಮತ್ತು ಮರಿ ಆರೋಗ್ಯವಾಗಿದೆ. ಪಾರ್ಕ್‌ನಲ್ಲಿ ಇದು ಮೂರನೆಯ ಝೀಬ್ರಾ ಪ್ರಸವವಾಗಿದ್ದು ಸಿಬ್ಬಂದಿಯು ತುಂಬಾ ಜತನವಾಗಿ ನೋಡಿಕೊಂಡಿದ್ದಾರೆ ಎಂದರು.

ಬನ್ನೇರುಘಟ್ಟದಲ್ಲಿ ಹೊಸ ಅತಿಥಿ: ಗಂಡು ಮರಿಗೆ ಜನ್ಮ ಕೊಟ್ಟ ನೀರಾನೆ..!

ವೈದ್ಯ ಉಮಾಶಂಕರ್‌ ಮಾತನಾಡಿ, ಪ್ರಾಣಿ ವಿನಿಮಯ ಯೋಜನೆಯಡಿ ಇಸ್ರೆಲ್‌ ದೇಶದ ಟೆಲ್‌ಅವಿವ್‌ನ ರಮಾತ್‌ ಗನ್‌ ಸಫಾರಿಯ ಜೂವಾಲಾಜಿಕಲ್‌ ಸೆಂಟರ್‌ನಿಂದ ಈ ಝೀಬ್ರಾಗಳನ್ನು ತರಿಸಲಾಗಿತ್ತು. ಗರ್ಭಧಾರಣ ಅವಧಿ 12 ತಿಂಗಳುಗಳಾಗಿದ್ದು, ಪ್ರಸವ ಸಮಯದಲ್ಲಿ ಯಾರೂ ಸಮೀಪ ಸುಳಿಯದಂತೆ ಗಂಡು ಝೀಬ್ರಾ ಕಾವಲು ಕಾಯುತ್ತದೆ ಎಂದು ತಿಳಿಸಿದರು.