ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ಖರೀದಿ ಬಲುಜೋರು: ಕೊಂಚ ಏರಿದ ಬೆಲೆ
ಹಿಂದೂ ಧರ್ಮಿಯರ ಹೊಸ ವರ್ಷವಾಗಿರುವ ಯುಗಾದಿ (ಶುಭಾಕೃತ ಸಂವತ್ಸರ) ಹಬ್ಬ ಆಚರಿಸಲು ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೊಸ ಬಟ್ಟೆ ಸೇರಿದಂತೆ ಭರ್ಜರಿಯಾಗಿ ಹೂವು-ಹಣ್ಣು, ದಿನಸಿ ಖರೀದಿ ಮಾಡಿದರು.
ಬೆಂಗಳೂರು (ಮಾ.22): ಹಿಂದೂ ಧರ್ಮಿಯರ ಹೊಸ ವರ್ಷವಾಗಿರುವ ಯುಗಾದಿ (ಶುಭಾಕೃತ ಸಂವತ್ಸರ) ಹಬ್ಬ ಆಚರಿಸಲು ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೊಸ ಬಟ್ಟೆ ಸೇರಿದಂತೆ ಭರ್ಜರಿಯಾಗಿ ಹೂವು-ಹಣ್ಣು, ದಿನಸಿ ಖರೀದಿ ಮಾಡಿದರು. ನಗರದ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಜಯನಗರ ಸೇರಿ ಎಲ್ಲ ಮಾರುಕಟ್ಟೆಗಳಲ್ಲಿ ಜನದಟ್ಟಣೆಯಿತ್ತು. ಬಟ್ಟೆ, ಆಭರಣ ಅಂಗಡಿಗಳಲ್ಲಿ ಹೆಚ್ಚಿನ ಜನ ಕಂಡು ಬಂದರು. ಹಬ್ಬದಲ್ಲಿ ದೇವರ ಪೂಜೆಗೆ ಅಗತ್ಯವಾದ ಹೂ, ಹಣ್ಣು, ಪೂಜಾ ಸಾಮಗ್ರಿಗಳು, ಮನೆ ಬಾಗಿಲಿಗೆ ಕಟ್ಟಲು ಮಾವಿನ ಎಲೆ, ಅಲಂಕಾರಿಕ ತಳಿರು ತೋರಣ ಖರೀದಿ ಒಂದೆಡೆಯಾದರೆ, ಇನ್ನೊಂದೆಡೆ ದಿನಸಿ ಹಾಗೂ ತರಕಾರಿ ಖರೀದಿಯಲ್ಲಿ ಜನತೆ ತೊಡಗಿದ್ದರು.
ದರ ಕೊಂಚ ಏರಿಕೆ: ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು, ತರಕಾರಿಗಳ ದರವು ಕೊಂಚ ಏರಿಕೆಯಾಗಿತ್ತು. ಮೂರು ದಿನಗಳ ಹಿಂದೆ ಕೆಜಿಗೆ .150 ಇದ್ದ ಸೇವಂತಿಗೆ ಮಂಗಳವಾರ .300ಗೆ ಏರಿಕೆಯಾಗಿತ್ತು. .250 ಇದ್ದ ಮಲ್ಲಿಗೆ .600, ಕನಕಾಂಬರ .400ನಿಂದ .800ಕ್ಕೆ ಏರಿಕೆಯಾಗಿತ್ತು. .150 ಇದ್ದ ಗುಲಾಬಿ .250 ಆಗಿತ್ತು. ಉಳಿದಂತೆ ಸುಗಂಧರಾಜ, ಚೆಂಡು ಹೂ, ರುದ್ರಾಕ್ಷಿ ಹೂ, ಕಣಗಲೆ ಹೂ ಬೆಲೆ ಸಾಮಾನ್ಯವಾಗಿತ್ತು. ಮಲ್ಲಿಗೆ ಹೂವಿನ ಋುತು ಈಗಷ್ಟೇ ಆರಂಭವಾಗಿರುವುದರಿಂದ ಮಲ್ಲಿಗೆ ಹೂ ಹಾಗೂ ಮೊಗ್ಗಿನ ದರ ಹೆಚ್ಚಾಗಿದೆ ಎಂದು ಕೆ.ಆರ್.ಮಾರುಕಟ್ಟೆಸಗಟು ಹೂವು ಮಾರಾಟಗಾರರ ಸಂಘದ ಅಧ್ಯಕ್ಷ ದಿವಾಕರ್ ತಿಳಿಸಿದರು.
ಹೋಳಿಗೆ, ಹೊಸತೊಡಕಿಗೆ ತಯಾರಿ: ಯುಗಾದಿ ಹಬ್ಬದ ವಿಶೇಷವಾದ ಹೋಳಿಗೆ ಸಿಹಿಖಾದ್ಯಕ್ಕಾಗಿ ಹಬ್ಬದ ಅಡುಗೆಗೆ ಅಗತ್ಯವಾದ ತೊಗರಿಬೇಳೆ, ಬೆಲ್ಲ, ಸಕ್ಕರೆ, ಎಣ್ಣೆ ಸೇರಿ ಇತರೆ ದಿನಸಿ ಖರೀದಿಯಲ್ಲಿ ನಿರತರಾಗಿದ್ದರು. ಇದಲ್ಲದೆ ಹಬ್ಬದ ಮರುದಿನ ಗುರುವಾರ ವರ್ಷ ತೊಡಕು ಇರುವುದರಿಂದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ನಿಂಬೆಹಣ್ಣು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಸೌತೆಕಾಯಿ, ತೆಂಗಿನ ಕಾಯಿ ಖರೀದಿ ಕೂಡ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ನಡೆಯಿತು.
ದೇವೇಗೌಡರ ಅಭಿಮಾನಿಗಳು ಫುಲ್ ಖುಷ್: ಯುಗಾದಿ ಸಂದೇಶ ಕಳಿಸಿದ ಮಾಜಿ ಪ್ರಧಾನಿ
ಕೆ.ಆರ್.ಮಾರುಕಟ್ಟೆ ಸಗಟು ದರ (ಕೆ.ಜಿ.ಗಳಲ್ಲಿ)
ಮಲ್ಲಿಗೆ ಮಗ್ಗು 600-800
ಕನಕಾಂಬರ 800
ಕಾಕಡ 400
ಸೇವಂತಿಗೆ 150-300
ಗುಲಾಬಿ 150-250
ಸುಗಂಧ ರಾಜ 160
ರುದ್ರಾಕ್ಷಿ 60
ಚೆಂಡು 40
ಬೇವಿನ ಸೊಪ್ಪು (ಕಂತೆಗೆ) 10
ಮಾವಿನ ಸೊಪ್ಪು (ಕಂತೆಗೆ) 20
ಬಾಳೆ ಎಲೆ ಒಂದಕ್ಕೆ 5
ಬಾಳೆಹಣ್ಣು 120-150
ತೆಂಗಿನ ಕಾಯಿ 15-30
ನಿಂಬೆಹಣ್ಣು ಒಂದಕ್ಕೆ 7-8