ನಿರ್ಭೀತಿಯಿಂದ ಹೇಳುವುದನ್ನು ಹೇಳಲಾಗುತ್ತಿಲ್ಲ| ಟಿಕೆಟ್‌ ನೀಡುವಾಗ ಹಣ, ಜಾತಿ, ತೋಳ್ಬಲ ಇರುವವರಿಗೆ ಮಾನ್ಯತೆ| ಯಾರು ರೌಡಿಯೋ, ಆತನಿಗಿಂತ ಸ್ವಲ್ಪ ಹೆಚ್ಚು ರೌಡಿಗೆ ಟಿಕೆಟ್‌ ನೀಡಲಾಗುತ್ತಿದೆಯೇ ಹೊರತು, ಸಜ್ಜನನಿಗೆ, ಯೋಗ್ಯನಿಗೆ ಟಿಕೆಟ್‌ ನೀಡುತ್ತಿಲ್ಲ: ವೈ.ಎಸ್‌.ವಿ.ದತ್ತ| 

ಮೈಸೂರು(ಏ.19): ಇತ್ತೀಚೆಗೆ ರಾಜಕೀಯ ಪಕ್ಷಗಳಲ್ಲಿ ಹೈಕಮಾಂಡ್‌ ಸಂಸ್ಕೃತಿ ಹೆಚ್ಚಾಗಿದ್ದು, ನಾವು ಗುಲಾಮರಾಗುತ್ತಿದ್ದೇವೆ, ನಿರ್ಭೀತಿಯಿಂದ ಹೇಳುವುದನ್ನು ಹೇಳಲಾಗುತ್ತಿಲ್ಲ ಎಂದು ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಹೇಳಿದ್ದಾರೆ.
ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆ ಆವರಣದಲ್ಲಿನ ರಮಾಗೋವಿಂದ ರಂಗಮಂದಿರದಲ್ಲಿ ಅಲ್ಲಮ ರೀಸಚ್‌ರ್‍ ಅಂಡ್‌ ಕಲ್ಚರಲ್‌ ಫೌಂಡೇಷನ್‌ ಭಾನುವಾರ ಆಯೋಜಿಸಿದ್ದ ಸಂಸ್ಥೆಯ ಉದ್ಘಾಟನೆ ಮತ್ತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ನಾನು ಇಷ್ಟೆಲ್ಲಾ ಮಾತನಾಡುತ್ತೇನೆ. ಮಾಧ್ಯಮದವರು ಯಾವುದಾದರೂ ಒಂದು ಘಟನೆಗೆ ನಿಮ್ಮ ಪಕ್ಷದ ನಿಲುವೇನು ಎಂದು ಕೇಳಿದರೆ, ಸ್ವಲ್ಪ ತಡೆಯಿರಿ ಪದ್ಮನಾಭನಗರಕ್ಕೆ ಹೋಗಿ ಕೇಳಿಬರುತ್ತೇನೆ ಎನ್ನಬೇಕಷ್ಟೆ. ಇತ್ತೀಚೆಗೆ ಹೈಕಮಾಂಡ್‌ ಸಂಸ್ಕೃತಿ ಹೆಚ್ಚಾಗಿದ್ದು, ನಾವು ಗುಲಾಮರಂತಾಗಿದ್ದೇವೆ. ನಿರ್ಭೀತಿಯಿಂದ ಹೇಳುವುದನ್ನು ಹೇಳಲಾಗುತ್ತಿಲ್ಲ. ಟಿಕೆಟ್‌ ನೀಡುವಾಗ ಹಣ, ಜಾತಿ, ತೋಳ್ಬಲ ಇರುವವರಿಗೆ ನೀಡಲಾಗುತ್ತಿದೆ. ಯಾರು ರೌಡಿಯೋ, ಆತನಿಗಿಂತ ಸ್ವಲ್ಪ ಹೆಚ್ಚು ರೌಡಿಗೆ ಟಿಕೆಟ್‌ ನೀಡಲಾಗುತ್ತಿದೆಯೇ ಹೊರತು, ಸಜ್ಜನನಿಗೆ, ಯೋಗ್ಯನಿಗೆ ಟಿಕೆಟ್‌ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಕಾಂಗ್ರೆಸ್ ಸೇರ್ಪಡೆ ಬಗ್ಗೆ ದತ್ತಾ ಸ್ಪಷ್ಟನೆ, ಜೊತೆಗೆ ಎಚ್‌ಡಿಕೆಗೊಂದು ಕಿವಿಮಾತು..!

ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳಿಗೆ ಹೊಣೆಗಾರಿಕೆ ಇಲ್ಲ. ಸೈದ್ಧಾಂತಿಕ ಬದ್ಧತೆ ಇಲ್ಲ. ಎಲ್ಲಾ ಪಕ್ಷಗಳನ್ನು ಯಾವುದೇ ಕಾರ್ಯಕರ್ತ ಬಂದರೂ ಸೇರಿಸಿಕೊಳ್ಳುತ್ತಾರೆ. ಆತನ ಹಿನ್ನೆಲೆ, ಆತನ ಸೈದ್ಧಾಂತಿಕ ನಿಲುವು ನೋಡುತ್ತಿಲ್ಲ. ಹೀಗೆ ಸೈದ್ಧಾಂತಿಕತೆ ಇಲ್ಲದಿದ್ದರೆ ಅನೇಕ ಮಾರಕ ಮತ್ತು ತೊಡಕುಗಳು ಉಂಟಾಗುತ್ತದೆ ಎಂದು ದತ್ತ ತಿಳಿಸಿದರು.

ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿಯಾಗಿ, ಯೋಗ್ಯರನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವಂತಾಗಬೇಕು ಇಲ್ಲವೇ, ಜನ ದುಡ್ಡನ್ನು ತಿರಸ್ಕರಿಸಿ ಯೋಗ್ಯರನ್ನು ಆಯ್ಕೆ ಮಾಡಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಮತ್ತು ಜನತಂತ್ರ ವ್ಯವಸ್ಥೆ ಗಟ್ಟಿಗೊಳ್ಳಲು ಸಾಧ್ಯ ಎಂದು ದತ್ತ ಅಭಿಪ್ರಾಯಪಟ್ಟರು.