*  ಜಮ್ಮು ಕಾಶ್ಮೀರದ ಮೌಂಟ್‌ ತುಳಿಯನ್‌ನಲ್ಲಿ ಚಿಕ್ಕಬಳ್ಳಾಪುರದ ಯುವಕರ ಸಾಹಸ*  ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಸಾಹಸಿಗರ ಆಯ್ಕೆ*  22 ಸಾಹಸಿಗರ ತಂಡದಲ್ಲಿ ಕೇವಲ 13 ಮಂದಿ ಮಾತ್ರ ಗುರಿ ತಲುಪುವಲ್ಲಿ ಯಶಸ್ವಿ  

ಚಿಕ್ಕಬಳ್ಳಾಪುರ(ಸೆ.20): ಜಿಲ್ಲೆಯ ಮೂವರು ಸಾಹಸ ಚಾರಣಿಗರು ಕೇವಲ 22 ಗಂಟೆಯೊಳಗೆ ಜಮ್ಮು ಮತ್ತು ಕಾಶ್ಮೀರದ ಸಮೀಪ ಇರುವ 16,500 ಅಡಿ ಎತ್ತರದ ಮೌಂಟ್‌ ತುಳಿಯನ್‌ ಶಿಖರ ಏರಿ ಇಳಿದು ಸಾಹಸ ಮೆರೆದಿದ್ದಾರೆ.

ಮೈಸೂರಿನಲ್ಲಿ ಪೇದೆಯಾಗಿರುವ ಬಾಗೇಪಲ್ಲಿ ಮೂಲದ ರಮೇಶ್‌, ಬೆಂಗಳೂರಿನ ಆರ್‌ಸಿ ಕಾಲೇಜಿನಲ್ಲಿ ಏವಿಯೇಷನ್‌ ಕೋರ್ಸ್‌ ಮಾಡುತ್ತಿರುವ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳದ ಸುನೀಲ್‌ ನಾಯಕ್‌, ಮಂಚೇನಹಳ್ಳಿಯ ಶಂಕರ್‌ನಾಗ್‌ ಈ ಸಾಧನೆ ಮಾಡಿರುವ ಸಾಹಸಿಗಳು. ಜಮ್ಮು ಕಾಶ್ಮೀರದಲ್ಲಿ ಮೊದಲೇ ಈಗ ಚಳಿಯ ಅಬ್ಬರ ಜೋರು. ಇಂತಹ ಚಳಿಯಲ್ಲೂ ಜಿಲ್ಲೆಯ ಸಾಹಸಿಗರು ಮೌಂಟ್‌ ತುಳಿಯನ್‌ ಶಿಖರವೇರುವ ಸಾಹಸವನ್ನು ಈ ಮೂವರು ಮಾಡಿದ್ದಾರೆ.

ಗಂಗಾವತಿ: 4 ದಿನದಲ್ಲಿ 17 ಪರ್ವತಾರೋಹಣ, ಗಿನ್ನಿಸ್‌ ದಾಖಲೆಯ ಯೋಧನಿಗೆ ಅದ್ಧೂರಿ ಸ್ವಾಗತ

ಬೆಂಗಳೂರಿನ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ರಾಜ್ಯದ ಸಾಹಸಿಗರನ್ನು ಮೌಂಟ್‌ ತುಳಿಯನ್‌ ಶಿಖರ ಏರಲು ಆಯ್ಕೆ ಮಾಡಿಕೊಂಡಿತ್ತು. ಶಿಖರದ ತುತ್ತ ತುದಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಸಾಹಸಿ ರಮೇಶ್‌ ಮೊದಲು ತಲುಪಿದ್ದಾರೆ. ಆ.26ರಂದು ವಿಮಾನ ಪ್ರಯಾಣದ ಮೂಲಕ ಜಮ್ಮುವಿಗೆ ತೆರಳಿದ್ದ ತಂಡ ಜವಾರ್‌ ಇನ್ಸಿಟಿಟ್ಯೂಟ್‌ ಆಫ್‌ ಮೌಂಟೈನೇರಿಂಗ್‌ ಆ್ಯಂಡ್‌ ವಿಂಟರ್‌ ಸ್ಪೋರ್ಟ್ಸ್‌ ಸಂಸ್ಥೆ ಸಹಕಾರದಿಂದ ಆ.31ರಂದು ಮೌಂಟ್‌ ತುಳಿಯನ್‌ ಶಿಖರ ಏರಿ ಇಳಿದಿದ್ದಾರೆ. 22 ಸಾಹಸಿಗರ ತಂಡದಲ್ಲಿ ಕೇವಲ 13 ಮಂದಿ ಮಾತ್ರ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.