ಮಂಡ್ಯ(ಆ.01): ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ತಾಯಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಪ್ರಕರಣವೊಂದು ಇಲ್ಲಿನ ವಿದ್ಯಾನಗರ ಮೊದಲನೇ ಕ್ರಾಸ್‌ನಲ್ಲಿ ನಡೆದಿದೆ.

ಮನುಶರ್ಮಾ (21) ಎಂಬಾತನೇ ತನ್ನ ತಾಯಿ ಶ್ರೀಲಕ್ಷ್ಮೇ ಅಲಿಯಾಸ್‌ ಲಲಿತಾಂಬ ಅವರನ್ನು ಕೊಲೆ ಮಾಡಿದ್ದಾನೆ. ತಾಯಿಯನ್ನು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ ಮನುಶರ್ಮ ಪೊಲೀಸರು ಮನೆಗೆ ಪರಿಶೀಲನೆಗೆ ಆಗಮಿಸಿದ್ದಾಗ ಮತ್ತೆ ವಾಪಸಾಗಿ ಶರಣಾಗಿದ್ದಾನೆ ಎಂದು ಹೇಳಲಾಗಿದೆ.

ಲಾಡ್ಜ್‌ನಲ್ಲಿ ಕೂಡಿ ಹಾಕಿ ಬಾಲಕಿಯ ಅತ್ಯಾಚಾರ: ಆರೋಪಿಗೆ 12 ವರ್ಷ ಜೈಲು

ಮಧುಸೂಧನ್‌-ಶ್ರೀಲಕ್ಷ್ಮೇ ಅವರ ಇಬ್ಬರು ಗಂಡುಮಕ್ಕಳಲ್ಲಿ ಮನುಶರ್ಮ ಹಿರಿಯವನು. ಈತ ಬಿಬಿಎಂ ವ್ಯಾಸಂಗ ಮಾಡುತ್ತಿದ್ದನು. ಈತ ಓದಿನ ಕಡೆ ಗಮನಹರಿಸದೆ ಸದಾಕಾಲ ಮೊಬೈಲ್‌ನಲ್ಲೇ ಮುಳುಗಿರುವುದು, ಹುಡುಗಿಯರೊಂದಿಗೆ ಮಾತನಾಡುತ್ತಿದ್ದನು. ಇದನ್ನು ಗಮನಿಸಿದ್ದ ತಾಯಿ ಶ್ರೀಲಕ್ಷ್ಮೇ ಮೊಬೈಲ್‌ ಬಿಟ್ಟು ಓದಿನ ಕಡೆ ಆಸಕ್ತಿ ವಹಿಸುವಂತೆ ಬುದ್ಧಿ ಹೇಳುತ್ತಿದ್ದರು. ಮನೆಯಿಂದ ಹೊರಗೆ ಹೋಗುವುದಕ್ಕೂ ಅಡ್ಡಿಪಡಿಸುತ್ತಿದ್ದರು. ಇದರಿಂದ ಮನುಶರ್ಮ ಮನೆಯಲ್ಲೇ ಉಳಿದಿದ್ದರಿಂದ ಖಿನ್ನತೆಗೂ ಒಳಗಾಗಿದ್ದನು ಎಂದು ತಿಳಿದುಬಂದಿದೆ.

ಎು.29ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಮನುಶರ್ಮಾನನ್ನು ಹುಡುಕಿಕೊಂಡು ಸ್ನೇಹಿತನೊಬ್ಬ ಮನೆಯ ಬಳಿ ಬಂದಿದ್ದನು. ಆತನ ಜೊತೆ ಹೋಗುವುದಕ್ಕೆ ತಾಯಿ ಅಡ್ಡಿಪಡಿಸಿದರು. ಇದರಿಂದ ಇಬ್ಬರ ನಡುವೆ ಹಲವು ಸಮಯದವರೆಗೆ ವಾಗ್ವಾದ, ಮಾತಿನಚಕಮಕಿ ನಡೆದಿದೆ. ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಶ್ರೀಲಕ್ಷ್ಮೇ ಅವರು ಆವೇಶಕ್ಕೊಳಗಾಗಿ ಚಕ್ಕುಲಿ ಒತ್ತುವ ಹೊಳ್ಳಿನಿಂದ ಮಗನ ತಲೆಗೆ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಮನುಶರ್ಮಾ ಅದೇ ಹೊಳ್ಳನ್ನು ಕಿತ್ತುಕೊಂಡು ತಾಯಿಗೆ ಹೊಡೆದಿದ್ದಲ್ಲದೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಸ್ಥಳದಲ್ಲೇ ಕುಸಿದುಬಿದ್ದ ಶ್ರೀಲಕ್ಷ್ಮೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟರು.

ಹಿರಿಯ ಕಾಂಗ್ರೆಸ್ ಮುಖಂಡರ ಭೇಟಿ, ಮಂಗಳೂರಲ್ಲಿ ಡಿಕೆಶಿ: ಇಲ್ಲಿವೆ ಫೋಟೋಸ್

ತಾಯಿಯನ್ನು ಕೊಲೆ ಮಾಡಿದ ಬಳಿಕ ಮನುಶರ್ಮಾ ತಲೆಮರೆಸಿಕೊಂಡಿದ್ದನು. ಸಂಜೆ 6.30ರ ಸಮಯಕ್ಕೆ ಶ್ರೀಲಕ್ಷ್ಮೇ ಕೊಲೆಯಾಗಿರುವ ಬಗ್ಗೆ ಮನೆಯ ಮಾಲೀಕ ಎಸ್‌.ರಮೇಶ್‌ ಪಶ್ಚಿಮಠಾಣೆ ಪೊಲೀಸರಿಗೆ ದೂರು ನೀಡಿದರು. ವಿಷಯ ತಿಳಿದು ತಂದೆ ಮಧುಸೂಧನ್‌ ಮತ್ತೊಬ್ಬ ಮಗ ಆದರ್ಶ ಮನೆಗೆ ಬಂದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಸ್ವರ್ಣಸಂದ್ರದ ಮೈಷುಗರ್‌ ಹೈಸ್ಕೂಲ್‌ ಬಳಿ ಇದ್ದ ಆರೋಪಿ ಮನುಶರ್ಮನನ್ನು ಬಂಧಿಸಿದ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡನು. ಆರೋಪಿ ಕೃತ್ಯಕ್ಕೆ ಬಳಸಿದ ಚಾಕು, ಚಕ್ಕುಲಿ ಹೊಳ್ಳು, ಸುಜುಕಿ ಸ್ಕೂಟರ್‌ನ್ನು ವಶಪಡಿಸಿಕೊಂಡರು. ಪಶ್ಚಿಮಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.