ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಂಡ ಯುವಕರು
ಜೆಡಿಎಸ್‌ನ ಸಿದ್ದಾಂತ ಮತ್ತು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರ ನಾಯಕತ್ವವನ್ನು ಮೆಚ್ಚಿ ಸುಮಾರು 75ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ಮತ್ತು ಬಿಜೆಪಿ ತ್ಯಜಿಸಿ ಜಾತ್ಯತೀತ ಜನತಾದಳವನ್ನು ಸೇರ್ಪಡೆಗೊಂಡಿದ್ದಾರೆ.
ತುರುವೇಕೆರೆ (ನ.09): ಜೆಡಿಎಸ್‌ನ ಸಿದ್ದಾಂತ ಮತ್ತು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರ ನಾಯಕತ್ವವನ್ನು ಮೆಚ್ಚಿ ಸುಮಾರು 75ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ಮತ್ತು ಬಿಜೆಪಿ ತ್ಯಜಿಸಿ ಜಾತ್ಯತೀತ ಜನತಾದಳವನ್ನು ಸೇರ್ಪಡೆಗೊಂಡಿದ್ದಾರೆ.
ಇಲ್ಲಿಯ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಜೆಡಿಎಸ್ (JDS) ಕಾರ್ಯಕರ್ತರ ಸಭೆಯಲ್ಲಿ ಹಲವಾರು ಯುವಕರು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಎಂ.ಡಿ.ರಮೇಶ್ ಗೌಡ ಮತ್ತು ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟಚಂದ್ರೇಶ್ ಮತ್ತು ತಾಲೂಕು ಯುವ ಜೆಡಿಎಸ್ ನ ಅಧ್ಯಕ್ಷ ಬಾಣಸಂದ್ರ ರಮೇಶ್ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಡಿಸೆಂಬರ್ ಅಂತ್ಯದಲ್ಲಿ ಬಿಜೆಪಿ (BJP) ಹಾಗೂ ಕಾಂಗ್ರೆಸ್‌ನ ಸುಮಾರು ಐನೂರಕ್ಕೂ ಹೆಚ್ಚು ಮುಖಂಡರು ಜೆಡಿಎಸ್‌ಗೆ ಬರಲಿದ್ದಾರೆ ಎಂದು ಹೇಳಿದರು.
ಕಮಿಷನ್: ಹಾಲಿ ಶಾಸಕ ಮಸಾಲಾ ಜಯರಾಮ್ ಎಲ್ಲಾ ಕಾಮಗಾರಿಗಳಲ್ಲೂ ಕಮಿಷನ್ ದಂಧೆ ನಡೆಸುತ್ತಿದ್ದಾರೆ. ಇವರಿಗೆ ತಾಲೂಕಿನ ಅಭಿವೃದ್ಧಿಗಿಂತ ತಮ್ಮ ಜೇಬಿಗೆ ಎಷ್ಟುಕಮಿಷನ್ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ. ತಾವು 15 ವರ್ಷಗಳ ಕಾಲ ಶಾಸಕರಾಗಿದ್ದಾಗ ಏನೇನೂ ಅಭಿವೃದ್ಧಿ ಮಾಡಿಲ್ಲ ಎಂದು ಶಾಸಕರು ದೂರಿದ್ದಾರೆ. ನಾನು ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂಬುದನ್ನು ಕ್ಷೇತ್ರದ ಜನತೆ ಅರಿತಿದ್ದಾರೆ. ಬಸ್ ಸ್ಟ್ಯಾಂಡ್, ಪ್ರವಾಸಿ ಮಂದಿರ, ಒಳ ಚರಂಡಿ ವ್ಯವಸ್ಥೆ, ವಾಣಿಜ್ಯ ಸಂಕೀರ್ಣ, ಕೋರ್ಚ್, ಕಿತ್ತೂರು ರಾಣಿ ಚನ್ನಮ್ಮ, ಮೊರಾರ್ಜಿ ವಸತಿ ಶಾಲೆ ಹೀಗೆ ಹೇಳುತ್ತಾ ಹೋದರೆ ನೂರಾರು ಅಭಿವೃದ್ಧಿ ಕಾರ್ಯಗಳು ಜನರ ಕಣ್ಣ ಮುಂದೆ ಬರುತ್ತವೆ ಎಂದು ಶಾಸಕರಿಗೆ ಟಾಂಗ್ ನೀಡಿದರು.
ಸವಾಲು: ತಾವು ಕಳೆದ 15 ವರ್ಷಗಳ ಕಾಲ ಮಾಡಿರುವ ಸಾಧನೆಯನ್ನು ಜನರ ಮುಂದೆ ತೆರೆದಿಡುವೆ. ತಾವು ನಾಲ್ಕುವರೆ ವರ್ಷಗಳ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಜನರ ಮುಂದೆ ತೆರೆದಿಡಿ. ಇಬ್ಬರೂ ಒಂದೇ ವೇದಿಕೆಯಲ್ಲಿ ಕುಳಿತು ಜನರ ಮುಂದೆ ಬಿಚ್ಚಿಡೋಣ ಎಂದು ಕೃಷ್ಣಪ್ಪ ಸವಾಲು ಹಾಕಿದರು.
ಡಿಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕ ಬಿ.ಎಸ್.ದೇವರಾಜ್ ಮಾತನಾಡಿ, ತಾಲೂಕಿನಲ್ಲಿ ಕಮಿಷನ್ ಹಾವಳಿ ಹೆಚ್ಚಾಗಿದೆ. ಗುತ್ತಿಗೆದಾರರು ಕೆಲಸ ಮಾಡಿ ಸೈ ಎನಿಸಿಕೊಳ್ಳಲು ಸಾಧ್ಯವಿಲ್ಲ. ಶಾಸಕರಿಗಿಂತ ಅವರ ಆಪ್ತ ಸಹಾಯಕರು, ಗುತ್ತಿಗೆದಾರರು ಮತ್ತು ಅಧಿಕಾರಿಗಳಿಂದ ಕಮಿಷನ್‌ಗೆ ಪೀಡಿಸುತ್ತಾರೆ. ಕಮಿಷನ್ ಹಸ್ತಾಂತರ ಆಗದಿದ್ದಲ್ಲಿ ಯಾವುದೇ ಕಾಮಗಾರಿಗಳಿಗೆ ಪೂಜೆ ಸಲ್ಲಿಸಲು ಶಾಸಕರು ಬರಲು ಬಿಡುವುದಿಲ್ಲ ಎಂದು ಆರೋಪ ಮಾಡಿದರು.
ತಾವು ಕಳೆದ ಬಾರಿ ಹಾಲಿ ಶಾಸಕ ಮಸಾಲಾ ಜಯರಾಮ್‌ರ ಗೆಲುವಿಗೆ ಶ್ರಮಿಸಿದ್ದು ಸತ್ಯ. ಆದರೆ ಶಾಸಕರ ನಡವಳಿಕೆ ಸರಿಯಿಲ್ಲದ್ದನ್ನು ಕಂಡು ತಾವು ಜೆಡಿಎಸ್‌ಗೆ ಮರಳಿ ಬಂದಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಶಂಕರೇಗೌಡ, ಚಂದ್ರೇಗೌಡ, ಹಿಂಡುಮಾರನಹಳ್ಳಿ ನಾಗರಾಜ್, ಎ.ಬಿ.ಜಗದೀಶ್, ಲಕ್ಷ್ಮಣಗೌಡ, ಕುಶಾಲ್‌ಕುಮಾರ್, ರಾಮಚಂದ್ರು, ಬಸವರಾಜು, ರಾಜೀವ್ ಕೃಷ್ಣಪ್ಪ, ಅಮ್ಮಸಂದ್ರ ಸಿದ್ದಗಂಗಣ್ಣ, ದಂಡಿನಶಿವರ ರಾಜಕುಮಾರ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.
ಬಾರ್ ಶಿವಣ್ಣ, ಹೊಸಳ್ಳಿ ನಾಗರಾಜ್, ರಂಗನಹಳ್ಳಿ ಆನಂದ್, ಹಾವಾಳದ ಭೈರಪ್ಪಾಜಿ, ವಸಂತಕುಮಾರ್, ಬ್ಯಾಡರಹಳ್ಳಿ ಶಂಕರಣ್ಣ, ದಿಲೀಪ್, ತೋವಿನಕೆರೆ ರಾಜಣ್ಣ, ಚಾಕುವಳ್ಳಿಯ ಪುಟ್ಟಣ್ಣ ಸೇರಿದಂತೆ ಹಲವರು ಜೆಡಿಎಸ್‌ಗೆ ಸೇರ್ಪಡೆಗೊಂಡರು.
ಮುಂಬರುವ 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲಿದ್ದಾರೆ. ಅದೇ ರೀತಿ ತುರುವೇಕೆರೆಯಲ್ಲಿ ಎಂ.ಟಿ.ಕೃಷ್ಣಪ್ಪನವರು ಶಾಸಕರಾಗಿ ಆಯ್ಕೆಯಾಗುವುದರಲ್ಲದೇ, ಮಂತ್ರಿಗಳಾಗಿಯೂ ಅಧಿಕಾರ ಮಾಡಲಿದ್ದಾರೆ.
ದೊಡ್ಡಾಘಟ್ಟಚಂದ್ರೇಶ್ ರಾಜ್ಯ ಯುವ ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ